- ಅಧಿವೇಶನದಲ್ಲಿ ಬರ ಘೋಷಣೆ, ರೈತರಿಗೆ ಮಧ್ಯಂತರ ನಷ್ಟ ಭರಿಸಲು ಕ್ರಮ : ಸಚಿವ ಈಶ್ವರ ಖಂಡ್ರೆ ಭರವಸೆಕನ್ನಡಪ್ರಭ ವಾರ್ತೆ ಬೀದರ್
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬರ, ಕುಡಿಯುವ ನೀರು ಹಾಗೂ ಇತರೆ ವಿಷಯಗಳ ಬಗ್ಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಅಭಾವ ಹಾಗೂ ತೇವಾಂಶ ಕೊರತೆಯಿಂದಾಗಿ ಬೆಳೆ ನಷ್ಟ ಎದುರಿಸುತ್ತಿರುವ ರೈತರ ನೆರವಿಗೆ ಸರ್ಕಾರ ತಕ್ಷಣವೇ ಧಾವಿಸಲಿದೆ ಸಚಿವರು ಅಭಯ ನೀಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಮಳೆಯ ಸುರಿಯುವಿಕೆ ಯಲ್ಲಿ ಆದ ಏರುಪೇರು ಹಾಗೂ ಸುದೀರ್ಘ ಒಣ ಹವೆಯಿಂದಾಗಿ ಬಿತ್ತನೆಯಾಗಿರುವ ಹೆಸರು, ಉದ್ದು ಸೇರಿದಂತೆ ಪ್ರಮುಖ ಬೆಳೆಗಳು ಮಳೆ ಕೊರತೆಯಿಂದ ಒಣಗಿ ಹಾಳಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಭದ್ಧವಿದೆ ಎಂದರು.ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಯೋಜನೆಯಡಿಯ ‘ಮಿಡ್-ಸೀಸನ್ ಅಡ್ವರ್ಸಿಟಿ’ (ಮಧ್ಯಂತರ ಬೆಳೆ ಹಾನಿ) ನಿಯಮಗಳನ್ನು ಸಕ್ರಿಯಗೊಳಿಸಲು ಕೃಷಿ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೃಷಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಆಯುಕ್ತರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಮುಖ್ಯಮಂತ್ರಿ ಗಳ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ. ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮಾನದಂಡಗಳ ಪ್ರಕಾರ ರೈತರಿಗೆ ಪರಿಹಾರ ತಲುಪಿಸಲು ಬದ್ಧವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ಜಲ ಜೀವನ್ ಮಿಷನ್ (ಎಎಒ) ಯೋಜನೆಯ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಳ್ಳ ದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಅನೇಕ ಕಡೆ ಪೈಪ್‌ಲೈನ್ ಅಳವಡಿಕೆ ಮತ್ತು ಸಂಪರ್ಕ ನೀಡುವ ಕೆಲಸ ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾಮಗಾರಿಯಲ್ಲಿ ವಿಳಂಬ ಧೋರಣೆ ತೋರುತ್ತಿರುವ ಮತ್ತು ಕಳಪೆ ಕೆಲಸ ಮಾಡುತ್ತಿರುವ ಗುತ್ತಿಗೆದಾರರಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ನೋಟಿಸ್ ಜಾರಿಗೊಳಿಸಿ, ಮುಂದಿನ ಸಭೆಯ ವೇಳೆಗೆ ಸಂಪೂರ್ಣ ವರದಿ ಸಲ್ಲಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು.
ಕೆಲ ಗ್ರಾಮ ಪಂಚಾಯಿತಿಗಳಲ್ಲಿರುವ ನೀರು ಶುದ್ಧೀಕರಣ ಘಟಕಗಳು ಬಹುತೇಕ ಹಾಳಾಗಿದ್ದು, ಈ ಘಟಕಗಳ ನಿರ್ವಹಣೆಗೆ 3 ವರ್ಷಗಳ ಕಾಲ ಗುತ್ತಿಗೆ ನೀಡುವ ಚಿಂತನೆ ಸರ್ಕಾರ ನಡೆಸುತ್ತಿದ್ದು, ಎಲ್ಲ ನಿರ್ವಹಣೆಯನ್ನು ಗುತ್ತಿಗೆದಾರರೇ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.