ಕೊಪ್ಪಳ:
ಒಳಮೀಸಲಾತಿ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು, ಇರುವ ತಾಂತ್ರಿಕ ಸಮಸ್ಯೆ ನೀಗಿಸಿದ ತಕ್ಷಣ ಜಾರಿ ಮಾಡಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ಕುರಿತು ಮಾತನಾಡುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ. ಈ ವರೆಗೂ ಅವರು ಜಾರಿಗೊಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ. ಅಧಿಕಾರದಲ್ಲಿ ಇದ್ದಾಗ ಚಕಾರ ಎತ್ತದವರು ಈಗ ಅದರ ಕುರಿತು ಮಾತನಾಡುತ್ತಿದ್ದಾರೆ. ಮಾಜಿ ಸಚಿವರಾಜ ಗೋವಿಂದ ಕಾರಜೋಳ ಹಾಗೂ ನಾರಾಯಣಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಎರಡು ಬಾರಿ ಆಯೋಗ ರಚಿಸಿದೆ. ಈಗ ಒಂದಷ್ಟು ಸಮಸ್ಯೆಗಳು ಇರುವ ಬಗ್ಗೆ ಚರ್ಚೆಯಾಗಿದೆ. ಅದರ ಹೊಣೆಯನ್ನು ನಾಲ್ಕಾರು ಸಚಿವರಿಗೆ ನೀಡಲಾಗಿದ್ದು, ಅವರೆಲ್ಲರೂ ಸೇರಿ ಇತ್ಯರ್ಥ ಮಾಡುತ್ತಾರೆ ಎಂದ ಅವರು, ಒಳಮೀಸಲಾತಿ ಜಾರಿಗೆ ಈಗಾಗಲೇ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ, ಜಾರಿ ಮುನ್ನ ಕೆಲವೊಂದು ತೊಡಕಾಗಿದ್ದರಿಂದ ಅವುಗಳನ್ನು ಸಹ ಇತ್ಯರ್ಥ ಮಾಡಲಾಗುತ್ತದೆ ಎಂದರು.
ಧರ್ಮಸ್ಥಳದಲ್ಲಿ ಅಸ್ಥಿಪಂಜರ ಶೋಧ ಕಾರ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಈ ಕುರಿತು ಮಾತನಾಡಿದರೆ ತಪ್ಪಾಗುತ್ತದೆ. ತನಿಖೆಯ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಹೀಗಾಗಿ, ತನಿಖೆ ಪೂರ್ಣಗೊಂಡ ನಂತರವೇ ನಾನು ಈ ಕುರಿತು ಮಾತನಾಡುತ್ತೇನೆ ಎಂದ ಅವರು, ನನಗೂ ದೇವರ ಬಗ್ಗೆ ಅಪಾರ ಗೌರವವಿದೆ. ಹೀಗಾಗಿ, ನಾನು ದೇವರ ಮತ್ತು ದೇವಸ್ಥಾನ ಗೌರವಿಸುತ್ತೇನೆ ಎಂದರು. ಡಿಸಿಎಂ ಡಿ.ಕೆ. ಶಿವಕುಮಾರ ಧರ್ಮಸ್ಥಳದ ಕುರಿತು ಷಡ್ಯಂತ್ರ ನಡೆದಿದೆ ಎಂದು ಹೇಳಿರುವ ಹೇಳಿಕೆಗೆ ನಾನೇನು ಹೇಳುವುದಿಲ್ಲ ಎಂದರು.ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣಕ್ಕೆ ಸರ್ಕಾರ ಸ್ಪಂದಿಸಿದೆ. ಇದರಲ್ಲಿಯೂ ರಾಜಕೀಯ ಮಾಡಲು ಬಿಜೆಪಿ ನಾಯಕರು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದ ಅವರು, ಬಿಜೆಪಿ ನಾಯಕರಿಗೆ ಅಷ್ಟೊಂದು ಕಾಳಜಿ ಇದ್ದರೆ ಕೊಲೆಯಾದ ಗವಿಸಿದ್ದಪ್ಪನ ಕುಟುಂಬಕ್ಕೆ ನೆರವಾಗಲಿ ಎಂದು ಸವಾಲು ಹಾಕಿದರು.ಕೊಲೆ ಪ್ರಕರಣದ ಕುರಿತು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಇನ್ನು ಪ್ರೇಮ ಪ್ರಕರಣದಲ್ಲಿರುವ ಬಾಲಕಿಯ ತಾಯಿ ಧರಣಿ ನಡೆಸಿದ ಬಗ್ಗೆ ಮಾಹಿತಿ ಇದ್ದು, ಆ ತಾಯಿ ನೀಡುವ ದೂರು ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಯೂರಿಯಾ ಸಮಸ್ಯೆ ಇಲ್ಲ:ಜಿಲ್ಲೆಯಲ್ಲಿ ಕಳೆದ ತಿಂಗಳ ಯೂರಿಯಾ ರಸಗೊಬ್ಬರ ಸಮಸ್ಯೆಯಾಗಿದ್ದು ನಿಜ. ಸದ್ಯಕ್ಕೆ ಅದನ್ನು ನಿವಾರಿಸಿದ್ದು ರೈತರಿಗೆ ಅಗತ್ಯ ಯೂರಿಯಾ ರಸಗೊಬ್ಬರ ಪೂರೈಕೆ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಒಂದು ತಿಂಗಳ ಮೊದಲೇ ಬಿತ್ತನೆಯಾಗಿದ್ದರಿಂದ ಸಮಸ್ಯೆಯಾಗಿತ್ತು. ಈಗ ಅದೆಲ್ಲವನ್ನು ಸರಿಪಡಿಸಿ, ರೈತರಿಗೆ ಅಗತ್ಯವಿದ್ದಷ್ಟು ಯೂರಿಯಾ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ನಿರೀಕ್ಷೆ ಮೀರಿ ಬೇಡಿಕೆ ಬಂದಿದ್ದರಿಂದ ಸಮಸ್ಯೆಯಾಗಿದ್ದು, ಅದನ್ನು ಸಹ ಇತ್ಯರ್ಥ ಮಾಡಲಾಗುತ್ತಿದೆ ಎಂದರು.
ಒಳಮೀಸಲಾತಿಗೆ ಆಗ್ರಹಿಸಿ ದಿಢೀರ್ ಪ್ರತಿಭಟನೆ:ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಸಚಿವ ಶಿವರಾಜ ತಂಗಡಗಿ ವಿರುದ್ಧವೇ ನಗರದ ಅಶೋಕ ವೃತ್ತದಲ್ಲಿ ಮಾದಿಗ ಮಹಾಸಭಾ ವತಿಯಿಂದ ದಿಢೀರ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಧ್ವಜಾರೋಹಣಕ್ಕೆ ತೆರಳುವ ವೇಳೆ ಅಶೋಕ ವೃತ್ತದಲ್ಲಿ ಸಚಿವರ ವಾಹನದ ಎದುರು ಪ್ರತಿಭಟನೆ ನಡೆಸಿ ಕೂಡಲೇ ವರದಿ ಜಾರಿಗೊಳಿಸುವಂತೆ ಘೋಷಿಸಲಾಯಿತು. ಬಳಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವ, ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಗಣೇಶ ಹೊರತಟ್ನಾಳ, ಮಲ್ಲಿಕಾರ್ಜುನ ಪೂಜಾರ, ನಿಂಗಜ್ಜ ಶಹಪೂರ, ನಿಂಗಜ್ಜ ಬಣಕಾರ, ರಾಮಣ್ಣ ಚೌಡ್ಕಿ, ಸಿದ್ದು ಮಣ್ಣಿನವರ, ನಿಂಗಪ್ಪ ಮೈನಳ್ಳಿ, ಶಾಂತರಾಜ ದೊಡ್ಡಮನಿ ಇದ್ದರು.