ಗದಗ: ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಮಹನೀಯರ ಪಾತ್ರ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಶತಮಾನಗಳ ದಾಸ್ಯತ್ವವನ್ನು ಕಳಚಿ ಸ್ವತಂತ್ರವಾದ ಭಾರತ, ತನ್ನ 78 ವರ್ಷಗಳನ್ನು ಪೂರ್ಣಗೊಳಿಸಿ, ಇಂದು 79ರಲ್ಲಿ ಪಾದಾರ್ಪಣೆ ಮಾಡುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತೋರಿದ ವಿನೂತನವಾದ ಸತ್ಯ ಅಹಿಂಸೆ ಎಂಬ ಅಸ್ತ್ರಗಳನ್ನು ಹಿಡಿದು ಸತ್ಯಾಗ್ರಹ ಮಾರ್ಗದಿಂದ ಬ್ರಿಟಿಷ್ ಆಡಳಿತದ ವಿರುದ್ಧ ನಮ್ಮ ಹಿರಿಯರು ಹೋರಾಡಿದರು. ಅಸಂಖ್ಯಾತ ಭಾರತೀಯರು ಮಾಡಿದ ತ್ಯಾಗ ಬಲಿದಾನದಿಂದಾಗಿ ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದರು.
ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ, ಶ್ರಮ, ಸಮರ್ಪಣಭಾವ, ದೇಶಪ್ರೇಮದ ಫಲವಾಗಿ ಇಂದು ಸ್ವಾತಂತ್ರ್ಯ ಸುಖ ಅನುಭವಿಸುತ್ತಿದ್ದೇವೆ. ಸತ್ಯಾಗ್ರಹವು ಸ್ವಾತಂತ್ರ್ಯ ಸಂಗ್ರಾಮ ಮತ್ತು ತದನಂತರ ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಮಿಸಿ ಅನೇಕ ಆಂದೋಲನ ಮತ್ತು ಚಳವಳಿಗಳಿಗೆ ಯಶ ತಂದುಕೊಡುವಲ್ಲಿ ಪರಿಣಾಮಕಾರಿಯಾದ ಪಾತ್ರ ನಿಭಾಯಿಸುತ್ತಿದೆ ಎಂದರು.ಗದಗ ಪರಿಸರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಚಳವಳಿಯ ಇತಿಹಾಸ ರೋಚಕವಾಗಿದೆ. ಗದಗ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ 1857ರಿಂದಲೇ ಆರಂಭಗೊಳ್ಳುತ್ತದೆ. ನರಗುಂದದ ಬಾಬಾಸಾಹೇಬ, ಮುಂಡರಗಿಯ ಭೀಮರಾವ್, ಡಂಬಳದ ಕೆಂಚನಗೌಡ, ಅನಂತರಾವ್ ಜಾಲಿಹಾಳ, ಡಾ. ವಾಸುದೇವರಾವ್ ಉಮಚಗಿ, ಬೆಟಗೇರಿಯ ತ್ರಿಮಲ್ಲೇ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರೀ, ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್.ಪಾಟೀಲರು ಸೇರಿ ಅಸಂಖ್ಯಾತ ಸ್ವಾತಂತ್ರ್ಯ ಸೇನಾನಿಗಳ ಹೋರಾಟ ಅವಿಸ್ಮರಣೀಯ. ಡಾ. ಬಿ.ಜಿ.ಹುಲಗಿ, ಶಂಕ್ರಪ್ಪ ಗುಡ್ಡದ, ಇಸ್ಮಾಯಿಲ ಸಾಹೇಬ, ಕಲ್ಲೂರ ರಾಮಚಾರಿ, ವೆಂಕಟೇಶ ಮಾಗಡಿ, ಕೋಗನೂರ ನಿಂಗಪ್ಪ ಮೊದಲಾದವರು ಬ್ರಿಟಿಷರನ್ನು ಎದುರಿಸಿ ಕಠಿಣಶಿಕ್ಷೆ ಅನುಭವಿಸಿದರು ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಭಿವೃದ್ಧಿಯ ಹರಿಕಾರ ಹಸಿವು ಮುಕ್ತ ಕರ್ನಾಟಕ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದು 15-12-2024 ರಂದು ಗದಗ ಜಿಲ್ಲೆಯ ರೋಣ ಪಟ್ಟಣಕ್ಕೆ ಆಗಮಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಲಕ್ಕುಂಡಿಗೆ 3-6-2025ರಂದು ಆಗಮಿಸಿ ನಮ್ಮ ಹೆಮ್ಮೆಯ ಇತಿಹಾಸ, ಸಂಸ್ಕೃತಿ ಪ್ರತೀಕವಾದ ಲಕ್ಕುಂಡಿಯಲ್ಲಿ ಉತ್ಪನನಕ್ಕೆ ಚಾಲನೆ ನೀಡಿದ್ದಾರೆ.ಬಡವರನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯಕ್ರಮ 2023ರಲ್ಲಿ ಜನತೆಯ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ನಂತರ, ದಕ್ಷ, ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಬಡವರ, ಅವಕಾಶ ವಂಚಿತರ, ಶೋಷಣೆಗೆ ಒಳಗಾದವರ ಪರ ಗಟ್ಟಿಯಾಗಿ ನಿಂತು ಸಾಮಾಜಿಕ, ಆರ್ಥಿಕ, ನ್ಯಾಯ ನೀಡುವ, ನಾಡಿನ ಜನತೆಯ ದೈನಂದಿನ ಬವಣೆಗಳನ್ನು ನೀಗಿಸಲು 5 ಗ್ಯಾರಂಟಿಗಳನ್ನು ಜನತೆಗೆ ಕೊಡಮಾಡಿದೆ ಎಂದು ತಿಳಿಸಿದರು.
ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಸಿಇಒ ಭರತ್.ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಅರಣ್ಯ ವಸತಿ ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಕಿಮಠ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ.ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು.