ಕನ್ನಡ ನಾಡು ನುಡಿ ರಕ್ಷಣೆಗೆ ಸರ್ಕಾರ ಬದ್ಧ: ಎನ್ ಎಸ್ ಬೋಸುರಾಜ್

KannadaprabhaNewsNetwork |  
Published : Nov 24, 2025, 03:15 AM IST
ಚಿತ್ರ :  23ಎಂಡಿಕೆ2 :  ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಂಬಂಧ ಆಯೋಜಿಸಿದ್ದ ಸಭೆ.  | Kannada Prabha

ಸಾರಾಂಶ

ಕನ್ನಡ ನಾಡು ನುಡಿಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ. ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣ ಮಾಡುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ನಾಡು ನುಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ. ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣ ಮಾಡುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣ ಸಮಿತಿಯ ಮಹಾಪೋಷಕರೂ ಆದ ಎನ್ ಎಸ್ ಬೋಸುರಾಜ್ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಮುಂದುವರೆದ ಅವರು ಜಿಲ್ಲೆಯ ಶಾಸಕರನ್ನು ಒಳಗೊಂಡು ಮುಖ್ಯಮಂತ್ರಿಗಳ ಭೇಟಿ ಮಾಡಿ ಸರ್ಕಾರದಿಂದ ಅನುದಾನ ಕೊಡಿಸುವುದಾಗಿಯೂ ಜಿಲ್ಲೆಯ ಎಪಿಎಂಸಿ, ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಿಂದಲೂ ಆರ್ಥಿಕ ನೆರವು ನೀಡಲು ಶ್ರಮಿಸುವುದಾಗಿ ನುಡಿದರು.

ಸಾಹಿತ್ಯ ಭವನ ನಿರ್ಮಾಣ ಸಮಿತಿಯ ಪೋಷಕರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆದ ಎ.ಎಸ್ ಪೊನ್ನಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣ ಮಾಡುವಲ್ಲಿ ಪೂರ್ಣ ಸಹಕಾರ ನೀಡುವುದರೊಂದಿಗೆ ತಮ್ಮ ಅನುದಾನ ದೊಂದಿಗೆ ವೈಯುಕ್ತಿಕ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದರು.

25 ಲಕ್ಷ ನೀಡುವ ಭರವಸೆ:

ಸಭೆಯಲ್ಲಿ ಉಪಸ್ಥಿತರಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ನಿರ್ಮಾಣ ಸಮಿತಿಯ ಪೋಷಕರು ಆದ ಡಾ. ಮಂತರ್ ಗೌಡ ಮಾತನಾಡಿ, ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅತಿಹೆಚ್ಚಿನ ಅನುದಾನ ತರುವುದರೊಂದಿಗೆ ತಮ್ಮ ಶಾಸಕರ ಅನುದಾನದಲ್ಲಿ ಈ ಸಾಲಿನಲ್ಲಿ 25 ಲಕ್ಷ ಮತ್ತು ಮುಂದಿನ ಸಾಲಿನಲ್ಲಿ 25 ಲಕ್ಷ ನೀಡುವ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಟಿ.ಪಿ ರಮೇಶ್ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 50 ವರ್ಷಗಳ ಕನ್ನಡ ಸೇವೆಯ ಕುರಿತು ವಿವರಿಸಿದ್ದರು. ಬಂಗಾರಪ್ಪನವರು ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಿ.ಜೆ ಪದ್ಮನಾಭ ರವರ ಪ್ರಯತ್ನದಿಂದ 60ಸೆಂಟು ಜಾಗವನ್ನು ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದೆ. 2014ರಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿದಿದ್ದ 10 ಲಕ್ಷ ರು. ಗಳನ್ನು ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ ಕಚೇರಿಯಲ್ಲಿ ಠೇವಣಿಯಾಗಿ ಇಡಲಾಗಿದೆ. ಅದು ಈಗ ಅಂದಾಜು 15 ಲಕ್ಷವಾಗಿದ್ದು ಉಳಿದ ಹಣವನ್ನು ಸರ್ಕಾರದಿಂದ ಅನುದಾನ ಪಡೆಯುವ ಮೂಲಕ ಹಾಗೂ ಕನ್ನಡ ಅಭಿಮಾನಿಗಳಿಂದ ದೇಣಿಗೆ ಪಡೆಯುವ ಮೂಲಕ ಭವನ ನಿರ್ಮಾಣ ಮಾಡಬೇಕಿದೆ ಎಂದು ವಿವರಿಸಿದರು.

ಎಲ್ಲರ ಸಹಕಾರದೊಂದಿಗೆ ಭವನ ನಿರ್ಮಾಣ ಕಾರ್ಯ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಹುದಿನದ ಕನಸಾಗಿದ್ದ ಭವನ ನಿರ್ಮಾಣ ಕ್ಕೆ ನಾಂದಿ ಹಾಡಲಾಗುತ್ತಿದ್ದು ಎಲ್ಲರ ಸಹಕಾರದೊಂದಿಗೆ ಭವನ ನಿರ್ಮಾಣ ಕಾರ್ಯ ಮಾಡುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಮಾತನಾಡಿ, ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದ್ದು ಅತಿ ಶೀಘ್ರದಲ್ಲಿ ಭವನ ನಿರ್ಮಾಣ ಆಗಬೇಕು ಎಂದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಅಪರ ಜಿಲ್ಲಾಧಿಕಾರಿಗಳಾದ ಐಶ್ವರ್ಯ, ಉಪವಿಭಾಗಾಧಿಕಾರಿಗಳಾದ ನಿತಿನ್ ಚಕ್ಕಿ ಉಪಸ್ಥಿತರಿದ್ದರು. ಸಭೆಯಲ್ಲಿ ಮಡಿಕೇರಿ ತಾಲೂಕು ತಹಸೀಲ್ದಾರರಾದ ಶ್ರೀಧರ್, ಮಡಿಕೇರಿ ತಾಲೂಕು ಭೂ ದಾಖಲೆಗಳ ಉಪ ನಿರ್ದೇಶಕರಾದ ಪೊನ್ನಂಪೇಟೆ ತಾಲೂಕು ಭೂ ದಾಖಲೆಗಳ ಉಪನಿರ್ದೇಶಕರಾದ ಬಾನಂಗಡ ಅರುಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕರಾದ ಕುಮಾರ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿರಾಜಪೇಟೆ ತಾಲೂಕು ಅಧ್ಯಕ್ಷರಾದ ಡಿ ರಾಜೇಶ್ ಪದ್ಮನಾಭ, ಜಿಲ್ಲಾ ಗೌರವ ಕೋಶಾಧಿಕಾರಿ ಎಸ್.ಎಸ್ ಸಂಪತ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಾಸು ರೈ, ಜಿಲ್ಲಾ ಸಮಿತಿ ಸದಸ್ಯರಾದ ಕೆ. ಟಿ ಬೇಬಿ ಮ್ಯಾಥ್ಯೂ, ಶ್ರೀಧರ ಹೂವಲ್ಲಿ, ವಿ ಎಂ ಧನಂಜಯ, ಹೋಬಳಿ ಅಧ್ಯಕ್ಷರಾದ ಎಂ ಎನ್ ಮೂರ್ತಿ, ಕುಶಾಲನಗರ ತಾಲೂಕು ಕೋಶಾಧಿಕಾರಿಗಳಾದ ಕೆ.ವಿ ಉಮೇಶ್ ಸದಸ್ಯರಾದ ರೇಣುಕಾ, ಅಜಯ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಚ್ ಎಲ್ ದಿವಾಕರ್, ತಾಲೂಕು ಅಧ್ಯಕ್ಷರಾದ ದೀಪಕ್ ಪೊನ್ನಪ್ಪ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಸ್ವಾಗತಿಸಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ರೇವತಿ ರಮೇಶ್ ವಂದಿಸಿದರು.

PREV

Recommended Stories

ರಾಜಾಪುರ ಕ್ರೆಡಿಟ್ ಸೊಸೈಟಿ, ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿವೇತನ ವಿತರಣೆ
ಬೇಡಿಕೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಕೆ ಅವಶ್ಯ