-ನಾಳೆ ಬೆಂ.ಗ್ರಾ ಜಿಲ್ಲಾಡಳಿತದಿಂದ ಬೃಹತ್ ಉದ್ಯೋಗ ಮೇಳ -20 ಸಾವಿರ ಉದ್ಯೋಗಾಕಾಂಕ್ಷಿಗಳು ಭಾಗಿ ನಿರೀಕ್ಷೆ
ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪನಿಗಳು ಉದ್ಯೋಗಕ್ಕೆ ಅನುಗುಣವಾಗಿ ಸ್ಥಳೀಯ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಕಂಪನಿಗಳ ಮುಖ್ಯಸ್ಥರಿಗೆ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಕೈಗಾರಿಕೆ ಕೇಂದ್ರ ಸಹಯೋಗದಲ್ಲಿ ನಡೆಯುವ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮುಖ್ಯಸ್ಥರಿಗೆ ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿದ ನಂತರ ಕೈಗಾರಿಕಾ ಪ್ರದೇಶ ವ್ಯಾಪ್ತಿ ಹೆಚ್ಚಾಗುತ್ತಿದೆ. ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದ ಹಲವಾರು ರೈತರು ಕೈಗಾರಿಕೆಗಳಿಗೆ ಭೂಮಿ ನೀಡಿದ್ದಾರೆ. ಆ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮನೆಗೊಂದು ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಅಯೋಜಿಸಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಕಲ್ಪಿಸಿಕೊಟ್ಟರೆ ಭೂಮಿ ಕಳೆದುಕೊಂಡ ಹಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೈಗಾರಿಕೆಗಳು ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಿ ನೇಮಕಾತಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಕುಮಾರ್ ಬಚ್ಚೇಗೌಡ ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪನಿಗಳು ಪ್ರಸ್ತುತ ನೋಂದಣಿ ಆಗಿರುವ ಉದ್ಯೋಗಾಂಕ್ಷಿಗಳ ಪೈಕಿ ಅಂದಾಜು 500 ಅಭ್ಯರ್ಥಿಗಳನ್ನು ಒಂದು ಕಂಪನಿ ಸಂದರ್ಶನ ಮಾಡಬೇಕಿದೆ. ಒತ್ತಡದ ಪರಿಸ್ಥಿತಿಯನ್ನು ಎದುರಿಸಲು ಕಂಪನಿಗಳು ಸಿದ್ಧರಿರಬೇಕು. ಖಾಯಂ ಉದ್ಯೋಗ ನೇಮಕಾತಿಗೆ ಮೊದಲ ಆದ್ಯತೆ ನೀಡಿ. ಕಂಪನಿಗಳು ಗೂಗಲ್ ಶೀಟ್ ನಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಪ್ರತಿ ತಿಂಗಳು ಮಾಹಿತಿ ತುಂಬಿದರೆ ಯಾವ ಕಂಪನಿಯಲ್ಲಿ ಯಾವ ಉದ್ಯೋಗ ಅವಕಾಶವಿದೆ ಎಂಬುದರ ಬಗ್ಗೆ ಉದ್ಯೋಗಾಂಕ್ಷಿಗಳಿಗೆ ಮಾಹಿತಿ ಸಿಕ್ಕಂತಾಗುತ್ತದೆ. ಇದರಿಂದ ಉದ್ಯೋಗಾಂಕ್ಷಿಗಳ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಂಪನಿಗಳು ನೇರ ನೇಮಕಾತಿಗೆ ಹೆಚ್ಚಿನ ಆದ್ಯತೆ ನೀಡಿ ಸಂದರ್ಶನ ಸಮಯದಲ್ಲಿ ಉದ್ಯೋಗಕ್ಕೆ ಅನುಗುಣವಾಗಿ ಅರ್ಹ ಅಭ್ಯರ್ಥಿ ಸಿಕ್ಕರೆ ಸ್ಥಳದಲ್ಲಿ ನೇಮಕಾತಿ ಪತ್ರ ವಿತರಿಸುವಂತೆ ಕಂಪನಿ ಮುಖ್ಯಸ್ಥರಲ್ಲಿ ಕೋರಿದರು.