ಚಾ.ನಗರಕ್ಕೆ ಅಂಟಿದ ಹಿಂದುಳಿದ ಜಿಲ್ಲೆ ಹಣೆಪಟ್ಟಿ ತೆಗೆಯಲು ಸರ್ಕಾರ ಬದ್ಧ

KannadaprabhaNewsNetwork |  
Published : Apr 24, 2025, 11:51 PM IST
ಚಾಮರಾಜನಗರಕ್ಕೆ ಅಂಟಿರುವ ಹಿಂದುಳಿದ ಜಿಲ್ಲೆ ಹಣೆಪಟ್ಟಿ ನಿರ್ಮೂಲನೆಗೆ ನಮ್ಮ ಸರ್ಕಾರ ಬದ್ಧ | Kannada Prabha

ಸಾರಾಂಶ

ಮಲೆಮಹದೇಶ್ವರ ಬೆಟ್ಟದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಹದೇಶ್ವರನ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರೊ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಜಾಮರಾಜನಗರ ಜಿಲ್ಲೆಗೆ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಸಿಕ್ಕಿತ್ತು. ಈ ಹಣೆಪಟ್ಟಿಯನ್ನು ತೆಗೆಯಲು ನಮ್ಮ ಸರ್ಕಾರ ಬದ್ಧವಾಗಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಸರ್ಕಾರ ಕೈಗೊಂಡಿರುವ ತೀರ್ಮಾನ, ಯೋಜನೆಗಳು ಇದಕ್ಕೆ ನೆರವಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ತಮ್ಮ ಇಲಾಖೆ ವತಿಯಿಂದ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಾಲಿಗ್ರಾಮ ಮತ್ತು ತಗಡೂರಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 82 ಕೋಟಿ ರು.ನೀಡಲಾಗಿದೆ. ಕೊಳ್ಳೆಗಾಲದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ 85 ಕೋಟಿ ನೀಡಲಾಗಿದೆ. ಹನೂರು ತಾಲೂಕಿನಲ್ಲಿ ಪ್ರಜಾಸೌಧಕ್ಕೆ 8.60 ಕೋಟಿ ರು. ನೀಡಲಾಗಿದೆ. ಬುಡಕಟ್ಟು ಜನರಿಗೆ ವಿದ್ಯುತ್ ಒದಗಿಸಿಕೊಡಲು 50 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಆಮೆಕೆರೆ ಅರಣ್ಯ ಪ್ರದೇಶದಲ್ಲಿದ್ದ ಸುಮಾರು 100 ರೈತರಿಗೆ 9.75 ಕೋಟಿ ನೀಡಿ ಅವರನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ ಎಂದರು.ಚಾಮರಾಜನಗರ ಹೊಂಗನೂರು ಕೆರೆಗೆ ₹14 ಕೋಟಿ, ಅಮಚವಾಡಿ ಕೆರೆಗೆ ₹11 ಕೋಟಿ, ಮಾಲಂಗಿ ಗ್ರಾಮದ ಬಳಿ ಕಾವೇರಿ ಮೂರನೇ ಹಂತದ ಕುಡಿಯುವ ನೀರಿನ ಯೋಜನೆಗೆ ₹150 ಕೋಟಿ, ದಳವಾಯಿ ಕೆರೆಯಲ್ಲಿ 3 ಎಂಎಲ್ ಡಿ ಕುಡಿಯುವ ನೀರಿನ ಘಟಕಕ್ಕೆ ₹18 ಕೋಟಿ ನೀಡಲಾಗಿದೆ. ಬೆಂಗಳೂರಿನಂತೆ ಮೈಸೂರು ನಗರದಲ್ಲಿ ₹391 ಕೋಟಿ ಮೊತ್ತದ ಯೋಜನೆಯಲ್ಲಿ ರಸ್ತೆಗಳ ವೈಟ್ ಟ್ಯಾಪಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ. ಕೊಳ್ಳೆಗಾಲದಲ್ಲಿ ಮಡಿಗುಂಡಿ ಬಳಿ ಸುವರ್ಣಾವತಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣಕ್ಕೆ ₹15 ಕೋಟಿ ಮಾಡಲಾಗಿದೆ. ರೇಷ್ಮೇ ಇಲಾಖೆಯಿಂದ ಪರಿಶಿಷ್ಟರಿಗೆ ಸಹಾಯ ಮಾಡಲು ₹15 ಕೋಟಿ ನೀಡಲಾಗಿದೆ.

ಚಾಮರಾಜನಗರ ಬಲದಂಡೆ ನಾಲೆಗೆ ₹15 ಕೋಟಿ ನೀಡಲಾಗಿದೆ. ರಾಮಸಮುದ್ರ ನಾಲೆಗೆ 43 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಸುವರ್ಣಾವತಿ ಜಲಾಶಯಕ್ಕೆ ₹24 ಕೋಟಿ, ಸುವರ್ಣಾವತಿ ಭಾಗದ ಕೆರೆ ತುಂಬಿಸಲು ₹70 ಕೋಟಿ, ಗುಂಡಾಲ್‌ ವ್ಯಾಪ್ತಿಯ ಸರಣಿ ಕೆರೆಗಳಿಗೆ ₹50 ಕೋಟಿ, ಮೀಸಲಿಡಲು ಅನುಮೋದನೆ ನೀಡಲಾಗಿದೆ ಎಂದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ