ಜಿಲ್ಲೆಯಲ್ಲಿ ರಂಗೇರಿದ ಹಾಲಿನ ರಾಜಕಾರಣ

KannadaprabhaNewsNetwork | Published : Apr 24, 2025 11:51 PM

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣಜಿಲ್ಲೆಯಲ್ಲಿ ಬೆಂಗಳೂರು ಹಾಲು ಒಕ್ಕೂಟದ ಚುನಾವಣೆ ರಂಗೇರುತ್ತಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿ ಪರಿಗಣಮಿಸಿದೆ.

-ವಿಜಯ್ ಕೇಸರಿ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣಜಿಲ್ಲೆಯಲ್ಲಿ ಬೆಂಗಳೂರು ಹಾಲು ಒಕ್ಕೂಟದ ಚುನಾವಣೆ ರಂಗೇರುತ್ತಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿ ಪರಿಗಣಮಿಸಿದೆ. ಚನ್ನಪಟ್ಟಣ ವಿಧಾನಸಭೆ ಚುನಾವಣೆಯ ನಂತರ ತಣ್ಣಗಾಗಿದ್ದ ಜಿಲ್ಲೆಯ ರಾಜಕಾರಣ ಬಮೂಲ್ ಚುನಾವಣೆಯ ಮೂಲಕ ಮತ್ತೆ ಕಾವೇರಿದೆ.

ಮೇ ೨೫ಕ್ಕೆ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಜಿಲ್ಲೆಯ ಐದು ತಾಲೂಕುಗಳಿಂದ ಆರು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚನ್ನಪಟ್ಟಣ, ಕನಕಪುರ, ರಾಮನಗರ, ಹಾರೋಹಳ್ಳಿಯಲ್ಲಿ ತಲಾ ಒಂದು ನಿರ್ದೇಶಕ ಸ್ಥಾನಕ್ಕೆ ಹಾಗೂ ಮಾಗಡಿ ತಾಲೂಕಿನಿಂದ ಮಾಗಡಿ ಮತ್ತು ಕುದೂರಿನ ಒಂದು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಲಿದೆ.

ಹೈನುಗಾರಿಕೆ ಜಿಲ್ಲೆಯ ಜನರ ಪಾಲಿಗೆ ಜೀವನಾಡಿಯಾಗಿದೆ. ಸುಮಾರು ೫೦ ಸಾವಿರಕ್ಕೂ ಹೆಚ್ಚು ಕುಟುಂಬಗಳು ಹೈನುಗಾರಿಕೆಯನ್ನು ಅವಲಂಭಿಸಿವೆ. ಕಳೆದ ಬಾರಿ ಬಮೂಲ್ ಚುನಾವಣೆಯಲ್ಲಿ ೬ ನಿರ್ದೇಶಕ ಸ್ಥಾನಗಳಲ್ಲಿ ೫ ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಒಂದು ಸ್ಥಾನದಲ್ಲಿ ಜೆಡಿಎಸ್ ನಿರ್ದೇಶಕರು ಗೆಲುವು ಸಾಧಿಸಿದ್ದರು. ಈ ಬಾರಿ ಜಿಲ್ಲೆಯನ್ನು ಕ್ಲೀನ್‌ಸ್ವೀಪ್ ಮಾಡುವ ಗುರಿಯನ್ನು ಕಾಂಗ್ರೆಸ್ ಹೊಂದಿದ್ದರೆ, ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ತವಕದಲ್ಲಿ ಜೆಡಿಎಸ್ ಇದೆ.

ಜಿಲ್ಲೆಯಲ್ಲಿ ೯೩೩ ಸಂಘಗಳು:

ಜಿಲ್ಲೆಯ ೫ ತಾಲೂಕು ವ್ಯಾಪ್ತಿಯಲ್ಲಿ ss೯೩೩ ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ ಆಡಳಿತ ಮಂಡಳಿಯನ್ನು ಹೊಂದಿರುವ ಒಕ್ಕೂಟಕ್ಕೆ ಸಮರ್ಪಕವಾಗಿ ಲೆಕ್ಕಪತ್ರ ಸಲ್ಲಿಸಿ ಎ ದರ್ಜೆ ಹಾಗೂ ಬಿ ದರ್ಜೆಯಲ್ಲಿರುವ ಹಾಗೂ ಒಕ್ಕೂಟದಿಂದ ಯಾವುದೇ ಬಾಕಿ ಉಳಿಸಿಕೊಳ್ಳದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಅಥವಾ ನಿರ್ದೇಶಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನಕ್ಕೆಅವಕಾಶ ನೀಡಲಾಗುತ್ತದೆ. ಮತದಾನ ಹಾಗೂ ಸ್ಪರ್ಧೆ ಮಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮ ಪ್ರತಿನಿಯನ್ನು ನಿಯೋಜಿಸಿ ಅವರಿಗೆ ಒಕ್ಕೂಟದಿಂದ ಡೆಲಿಗೇಷನ್ ಫಾರಂ ಪಡೆದುಕೊಳ್ಳಬೇಕು. ಡೆಲಿಗೇಷನ್ ಫಾರಂ ಪಡೆದುಕೊಳ್ಳಲು ಸಂಘಗಳಿಗೆ ಮೇ ೨ವರೆಗೆ ಅವಕಾಶವಿದ್ದು, ಮೇ ೨ರಂದು ಬಮೂಲ್ ಚುನಾವಣಾಧಿಕಾರಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದ್ದಾರೆ.

ರಾಮನಗರ- ಮಾಗಡಿಯಲ್ಲೂ ಬಿರುಸು:

ರಾಮನಗರ ಮತ್ತು ಮಾಗಡಿಯಲ್ಲೂ ಬಮೂಲ್ ಚುನಾವಣೆ ಬಿರುಸುಗೊಂಡಿದೆ. ರಾಮನಗರದಲ್ಲಿ ಕಳೆದ ೩೦ ವರ್ಷಗಳಿಂದ ನಿರಂತರವಾಗಿ ಗೆಲ್ಲುತ್ತಾ ಬಂದಿರುವ ಮಾಜಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮತ್ತೆ ಚುನಾವಣೆಗೆ ಸ್ಪರ್ಧೆಗೆ ಸಿದ್ಧವಾಗಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್‌ನಿಂದ ಬಿಡದಿಯ ಖ್ಯಾತ ವೈದ್ಯ ಡಾ.ಭರತ್‌ಕೆಂಪಣ್ಣ ಅವರ ತಾಯಿ ರೇಣುಕಮ್ಮ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಇನ್ನೂ ಕುದೂರಿನಿಂದ ಹಾಲಿ ನಿರ್ದೇಶಕ ರಾಜಣ್ಣ ಕಾಂಗ್ರೆಸ್‌ನಿಂದ ಸ್ಪರ್ಧೆಮಾಡಲಿದ್ದು, ಇವರಿಗೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ತಲಾಶೆ ನಡೆಸುತ್ತಿದೆ.

ಸಹೋದರರ ತೀರ್ಮಾನವೇ ಅಂತಿಮ:

ಕನಕಪುರ ಮತ್ತು ಹಾರೋಹಳ್ಳಿ ತಾಲೂಕು ಬಮೂಲ್ ನಿರ್ದೇಶಕರಾಗಿ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುದು ಡಿಕೆಎಸ್ ಸಹೋದರರ ನಿರ್ಧಾರವನ್ನು ಅಲವಂಭಿಸಿದೆ. ಈ ಎರಡೂ ತಾಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಎಂಪಿಸಿಎಸ್‌ಗಳ ಸಂಖ್ಯೆ ಹೆಚ್ಚಿರುವ ಕಾರಣ ಡಿಕೆಎಸ್ ಸಹೋದರರ ತೀರ್ಮಾನವೇ ಅಂತಿಮವಾಗಲಿದೆ.

ಬಮೂಲ್ ಅಖಾಡಕ್ಕೆ ಧುಮುಕಿದ ಸೈನಿಕ

ಬಮೂಲ್ ಚುನಾವಣೆಯಲ್ಲಿ ಚನ್ನಪಟ್ಟಣ ಪ್ರತಿಷ್ಠಿತ ಕ್ಷೇತ್ರ ಎನ್ನಿಸಿದೆ. ಪ್ರತಿ ಬಾರಿಯೂ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಸಹಕಾರ ಕ್ಷೇತ್ರದ ಚುನಾವಣೆ ಕುರಿತು ಎಂದೂ ಅಷ್ಟಾಗಿ ಆಸಕ್ತಿ ತೋರದ ಶಾಸಕ ಸಿ.ಪಿ.ಯೋಗೇಶ್ವರ್ ಈ ಬಾರಿ ಬಮೂಲ್ ಅಖಾಡಕ್ಕೆ ನೇರವಾಗಿ ಎಂಟ್ರಿ ಕೊಡುವುದಾಗಿ ಘೋಷಿಸಿದ್ದಾರೆ.

ಜೆಡಿಎಸ್‌ನಿಂದ ಹಾಲಿ ನಿರ್ದೇಶಕ ಎಚ್.ಸಿ.ಜಯಮುತ್ತು ಹಾಗೂ ಕಾಂಗ್ರೆಸ್‌ನಿಂದ ಬಮೂಲಕ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಈ ಹಿಂದೆ ಇವರಿಬ್ಬರೂ ಜೆಡಿಎಸ್‌ನಲ್ಲೇ ಇದ್ದರು. ಒಂದೇ ಪಕ್ಷದಲ್ಲಿದ್ದರೂ ಸಹ ಬಮೂಲ್ ಚುನಾವಣೆ ಎರಡು ಬಾರಿ ಪ್ರತಿಸ್ಪರ್ಧಿಗಳಾಗಿದ್ದರು. ಇದೀಗ ಮೂರನೇ ಬಾರಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದು, ಗೆಲುವಿಗಾಗಿ ಕಸರತ್ತು ಆರಂಭಿಸಿದ್ದಾರೆ. ಆದರೆ, ಈ ಬಾರಿ ಸೈನಿಕ ಸಹ ಚುನಾವಣೆಯ ಕುರಿತು ವಿಶೇಷ ಆಸಕ್ತಿ ತೋರಿಸುತ್ತಿರುವುದು ಚುನಾವಣೆ ಮತ್ತಷ್ಟು ಬಿರುಸುಗೊಳ್ಳುವಂತೆ ಮಾಡಿದೆ.

ಮಾಗಡಿಯಿಂದ ಕಣಕ್ಕಿಳಿಯುವರೆ ಎಚ್‌ಸಿಬಿ ಸಹೋದರ?

ಇನ್ನು ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮೂವರ ಹೆಸರು ಚಾಲ್ತಿಯಲಿದೆ. ಮಾಗಡಿಯಿಂದ ಮೂರು ಬಾರಿ ಆಯ್ಕೆಯಾಗಿರುವ ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಅವರ ಬದಲಾಗಿ ಬೇರೆ ಅಭ್ಯರ್ಥಿಯನ್ನು ಕಣಕ್ಕಳಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸಹೋದರ ಎಚ್.ಎನ್.ಅಶೋಕ್(ತಮ್ಮಾಜಿ) ಹುಲಿಕಟ್ಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ಸ್ಪರ್ಧೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನು ಕಳೆದ ಬಾರಿ ಬಮೂಲ್ ಚುನಾವಣೆಯಲ್ಲಿ ಪರಾಜಿತರಾಗಿದ್ದ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಕಾಂಗ್ರೆಸ್‌ಗೆ ಸೇರಿದ್ದಾರೆ. ಈ ಬಾರಿ ಬಾಲಕೃಷ್ಣ ಸಹೋದರನಿಗೆ ಅವಕಾಶ ಸಿಗುವುದಾ, ಕಾಂಗ್ರೆಸ್‌ಗೆ ಬಂದಿರುವ ಕೃಷ್ಣಮೂರ್ತಿಗೆ ಅವಕಾಶ ನೀಡುವರಾ ಎಂಬ ಕುತೂಹಲ ಮೂಡಿದೆ. ಜೆಡಿಎಸ್ ನಿಂದ ೨೦೧೪ರ ಬಮೂಲ್ ಚುನಾವಣೆಯಲ್ಲಿ ಪರಾಜಿತರಾಗಿದ್ದ ನರಸಿಂಹಯ್ಯ ಅವರನ್ನು ಕಣಕ್ಕಿಳಿಸಲು ಸಿದ್ದತೆ ನಡೆದಿದೆ.

ಕೆಎಂಎಫ್‌ಗೆ ಡಿ.ಕೆ.ಸುರೇಶ್ ಎಂಟ್ರಿ?

ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ರಾಜ್ಯದ ಹಾಲಿನ ರಾಜಕಾರಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬ ಈ ಬಾರಿ ನೇರವಾಗಿ ಎಂಟ್ರಿ ನೀಡಲಿದೆಯೇ ಎಂಬ ಚರ್ಚೆ ಜಿಲ್ಲೆಯಲ್ಲಿ ತೀವ್ರಗೊಂಡಿದೆ.

ಡಿ.ಕೆ.ಸುರೇಶ್ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ೧೮೦ ದಿನಗಳ ಕಾಲ ಹಾಲು ಪೂರೈಕೆ ಮಾಡಿ, ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಕೋಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಬಮೂಲ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಡೆಲಿಗೇಷನ್ ಫಾರಂ ಪಡೆದುಕೊಂಡಿದ್ದು, ಬಮೂಲ್ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರಾ ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ.

ಸುರೇಶ್ ಕೆಎಂಎಫ್ ಅಧ್ಯಕ್ಷರಾಗಲು ಯಾವುದಾದರೂ ಹಾಲು ಒಕ್ಕೂಟದ ನಿರ್ದೇಶಕರಾಗಿರಬೇಕಿದ್ದು, ಹೀಗಾಗಿ ಡಿ.ಕೆ.ಸುರೇಶ್ ಬಮೂಲ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿಬರುತ್ತಿದೆ.

Share this article