ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ

KannadaprabhaNewsNetwork |  
Published : Dec 20, 2025, 04:30 AM ISTUpdated : Dec 20, 2025, 06:07 AM IST
Siddaramaiah

ಸಾರಾಂಶ

‘ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹಾಗೂ ಹಿಂದುಳಿದ ತಾಲೂಕುಗಳ ಅಧ್ಯಯನಕ್ಕಾಗಿ ರಚಿಸಲಾಗಿರುವ ಪ್ರೊ. ಗೋವಿಂದರಾವ್‌ ಸಮಿತಿ ಜನವರಿಯಲ್ಲಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

 ಸುವರ್ಣ ವಿಧಾನಸಭೆ :  ‘ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹಾಗೂ ಹಿಂದುಳಿದ ತಾಲೂಕುಗಳ ಅಧ್ಯಯನಕ್ಕಾಗಿ ರಚಿಸಲಾಗಿರುವ ಪ್ರೊ. ಗೋವಿಂದರಾವ್‌ ಸಮಿತಿ ಜನವರಿಯಲ್ಲಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಗಳು ತಂದಿರುವ ಯೋಜನೆ, ಅನುದಾನ ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಲು ಸಿದ್ಧ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಶುಕ್ರವಾರ ಉತ್ತರ ಕರ್ನಾಟಕ ಸಮಸ್ಯೆ ಕುರಿತಂತೆ ನಡೆದ ಚರ್ಚೆ ಮೇಲೆ ಉತ್ತರಿಸಿದ ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು. ಜತೆಗೆ ಬಿಜೆಪಿ ಸರ್ಕಾರದ ಅವಧಿಯ ವೈಫಲ್ಯತೆ, ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆ ವಿವರಿಸಿ ವಿಪಕ್ಷ ಸದಸ್ಯರನ್ನು ತಿವಿದರು.

ಹಾಗೆಯೇ, ‘ಕೇಂದ್ರದಿಂದ ಆಗುತ್ತಿರುವ ಅನ್ಯಾಯ ಪ್ರಶ್ನಿಸಲು ರಾಜ್ಯ ಸರ್ಕಾರದಿಂದ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇವೆ, ಆಗ ವಿಪಕ್ಷ ಸದಸ್ಯರೂ ಜತೆಯಲ್ಲಿ ಬನ್ನಿ’ ಎಂದೂ ಅವರು ಆಹ್ವಾನಿಸಿದ್ದಾರೆ.

ಅಸಮಾನತೆ ತೊಡೆಯಲು ಸರ್ಕಾರ ಬದ್ಧ:

ರಾಜ್ಯದ ಪ್ರಾದೇಶಿಕ ಅಸಮತೋಲನ ಪತ್ತೆಗಾಗಿ ಈ ಹಿಂದೆ ಎಸ್‌.ಎಂ.ಕೃಷ್ಣ ಸಿಎಂ ಆಗಿದ್ದಾಗ ಪ್ರೊ. ನಂಜುಂಡಪ್ಪ ಸಮಿತಿ ರಚಿಸಲಾಗಿತ್ತು. 39 ತಾಲೂಕುಗಳು ಅತ್ಯಂತ ಹಿಂದುಳಿದ, 40 ಅತಿ ಹಿಂದುಳಿದ ಮತ್ತು 35 ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿತ್ತು. ಈ ತಾಲೂಕುಗಳ ಅಭಿವೃದ್ಧಿಗಾಗಿ ಒಟ್ಟು 31,000 ಕೋಟಿ ರು. ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಅದರಲ್ಲಿ 15,000 ಕೋಟಿ ರು. ಒಮ್ಮೆಲೇ ಹಾಗೂ 16,000 ಕೋಟಿ ರು.ಗಳನ್ನು ಪ್ರತಿ ವರ್ಷ ತಲಾ 2,000 ಕೋಟಿ ರು.ಗಳಂತೆ ಖರ್ಚು ಮಾಡಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಈಗಾಗಲೇ 31,000 ಕೋಟಿ ರು.ಗಳನ್ನೂ ವ್ಯಯಿಸಲಾಗಿದೆ. ಆದರೆ, ಇನ್ನೂ ಅಸಮತೋಲನ ನಿವಾರಣೆಯಾಗಿಲ್ಲ. ಉತ್ತರ ಕರ್ನಾಟಕ ಹಿಂದುಳಿದಿದೆ ಎಂಬ ಕೂಗುಗಳಿವೆ ಎಂದರು.

ಅದಕ್ಕಾಗಿಯೇ ಪ್ರೊ. ನಂಜುಂಡಪ್ಪ ಸಮಿತಿ ಶಿಫಾರಸುಗಳ ಅನುಷ್ಠಾನದ ನಂತರವೂ ತಾಲೂಕುಗಳು ಹಿಂದುಳಿದಿರುವುದನ್ನು ಪತ್ತೆ ಮಾಡಿ, ಪರಿಹಾರ ಕಂಡುಕೊಳ್ಳಲು ಹೆಸರಾಂತ ಅರ್ಥಶಾಸ್ತ್ರಜ್ಞ ಪ್ರೊ. ಗೋವಿಂದರಾವ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಜನವರಿಯಲ್ಲಿ ವರದಿ ನೀಡಲಿದೆ. ವರದಿಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕುರಿತಂತೆ ಶಿಫಾರಸು ಮಾಡಲಾಗುತ್ತದೆ. ಆ ವರದಿಯನ್ನು ಜಾರಿ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕೆಲಸ ಮಾಡಲಿದೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಸರ್ಕಾರ ಸದಾ ಬದ್ಧವಾಗಿದೆ ಎಂದು ಘೋಷಿಸಿದರು.

ಆಡ್ವಾಣಿಯಿಂದ ಮೋದಿ ಕಾಲದವರೆಗೆ ತರಾಟೆ:

ರಾಜ್ಯಕ್ಕೆ ಕೇಂದ್ರದ ಬಿಜೆಪಿ ಸರ್ಕಾರಗಳು ಮಾಡಿದ ಅನ್ಯಾಯಗಳ ಪಟ್ಟಿಯನ್ನು ನೀಡಿ ವಿಪಕ್ಷ ಶಾಸಕರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ಈಗ ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ಹೈದರಾಬಾದ್‌ ಕರ್ನಾಟಕ (ಹೈ-ಕ)ಭಾಗದ ಅಭಿವೃದ್ಧಿಗಾಗಿ 371ಜೆ ಸ್ಥಾನಮಾನ ನೀಡುವಂತೆ ವಾಜಪೇಯಿ ಅವರ ಸರ್ಕಾರಕ್ಕೆ ಅಂದಿನ ಕಾಂಗ್ರೆಸ್‌ ಸರ್ಕಾರ ಶಿಫಾರಸು ಮಾಡಿತ್ತು. ಆದರೆ, ಅಂದಿನ ಉಪಪ್ರಧಾನಿ, ಕೇಂದ್ರ ಗೃಹ ಸಚಿವ ಎಲ್‌.ಕೆ.ಆಡ್ವಾಣಿ ಅವರು ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದರೆ ಬೇರೆಲ್ಲ ರಾಜ್ಯಗಳು ಅದಕ್ಕೆ ಬೇಡಿಕೆ ಇಡುತ್ತವೆ ಎಂದು ತಿರಸ್ಕರಿಸಿದರು. ಕೊನೆಗೆ 2013ರಲ್ಲಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಹೈ-ಕ ಭಾಗಕ್ಕೆ 371ಜೆ ಸ್ಥಾನಮಾನ ನೀಡಿದರು ಎಂದು ವಿವರಿಸಿದರು.

ಇದೀಗ ಪ್ರಧಾನಿ ಮೋದಿ ಅವರ ಸರ್ಕಾರ ಮಹದಾಯಿ, ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಹೀಗೆ ಹಲವು ನೀರಾವರಿ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡದೆ ಸತಾಯಿಸುತ್ತಿದೆ. ಕಬ್ಬು, ಮೆಕ್ಕೆಜೋಳ ಬೆಂಬಲ ಬೆಲೆ ಹೆಚ್ಚಳ, ಸಕ್ಕರೆ ರಫ್ತು ಹೆಚ್ಚಳ, ರಾಜ್ಯಕ್ಕೆ ಎಥೆನಾಲ್‌ ಪಾಲು ಹೆಚ್ಚಳ ಮಾಡದೇ ಅನ್ಯಾಯ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ಅಸಹಕಾರ ಶುರು ಮಾಡಿದೆ. ನಮಗೆ ನ್ಯಾಯಯುತವಾಗಿ ಬರಬೇಕಾದ ಅನುದಾನವನ್ನು ಕೊಡದೆ ಸಮಸ್ಯೆ ಉಂಟು ಮಾಡಲಾಗುತ್ತಿದೆ. ಇದನ್ನು ಕೇಳಿ ಪ್ರಧಾನಿ ಅವರಿಗೇ ಪತ್ರ ಬರೆದರೂ, ಅದಕ್ಕೆ ಉತ್ತರಿಸುವ ವ್ಯವಧಾನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಉದ್ದುದ್ದ ಭಾಷಣ ಮಾಡದೇ ಕೇಂದ್ರಕ್ಕೆ ನಡೆಯಿರಿ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕಬ್ಬು ಬೆಲೆ ಹೆಚ್ಚಳಕ್ಕೆ ಬೆಳೆಗಾರರು ಹೋರಾಟ ಮಾಡುವಾಗ ಅದನ್ನು ಬೆಂಬಲಿಸಿ ಬಿ.ವೈ. ವಿಜಯೇಂದ್ರ ಅಲ್ಲಿಯೇ ಮಲಗಿ ರೈತರಿಗೆ ಪ್ರಚೋದನೆ ನೀಡುವ ಕೆಲಸ ಮಾಡಿದರು. ರೈತರೆದುರು ಉದ್ದುದ್ದ ಭಾಷಣ ಮಾಡುವ ಬದಲು ರೈತರ ಸಮಸ್ಯೆ ನಿವಾರಿಸಲು ಕೆಲಸ ಮಾಡಬೇಕು ಎಂದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ನಿಯೋಗ ಕೊಂಡೊಯ್ಯುತ್ತೇನೆ. ಆಗ ಬಿಜೆಪಿ ಶಾಸಕರೂ ಜತೆಗೆ ಬರಬೇಕು ಎಂದರು.

300 ಕರ್ನಾಟಕ ಪಬ್ಲಿಕ್ ಸ್ಕೂಲ್

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 300 ಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಕ್ಕೆ ಸೂಚನೆ ನೀಡಿದ್ದೇನೆ. ಇನ್ನು, ಕೆಕೆಆರ್‌ಡಿಬಿಯಿಂದ ನೇಮಿಸಲಾಗಿದ್ದ ಶಿಕ್ಷಣ ತಜ್ಞೆ ಪ್ರೊ. ಛಾಯಾ ದೇವಣಗಾವ್ಕರ್‌ ಸಮಿತಿ ನೀಡಿರುವ ವರದಿಯನ್ನಾಧರಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವಂತೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ
ಬೆಂಗಳೂರು : ನಗರದಲ್ಲಿ ನ್ಯಾಯರಥ-ಸಂಚಾರಿ ಕಾನೂನು ಸೇವಾ ಕ್ಲಿನಿಕ್‌