ಬರ, ಪರಿಹಾರ ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಜ್ಯೋತಿಪ್ರಕಾಶ್

KannadaprabhaNewsNetwork |  
Published : Apr 09, 2024, 12:48 AM IST
ಬರ, ಪರಿಹಾರ  | Kannada Prabha

ಸಾರಾಂಶ

ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಗ್ಯಾರಂಟಿಗೆ ಹಣ ವಿನಿಯೋಗ ಮಾಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗಿದೆ. ಇದಕ್ಕೆ ಜನ ಶಾಪ ಹಾಕುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬರ ನಿರ್ವಹಣೆ, ರೈತರಿಗೆ ಪರಿಹಾರ ವಿತರಣೆ ಸೇರಿ ರಾಜ್ಯದಲ್ಲಿ ತಲೆದೋರಿರುವ ಹತ್ತಾರು ಸಂಕಷ್ಟ ನಿರ್ವಹಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಸ್.ಎಸ್. ಜ್ಯೋತಿಪ್ರಕಾಶ್ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವ್ಯಾಪಾರಸ್ಥರ ವಹಿವಾಟು ಕುಸಿದಿದೆ. ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಗ್ಯಾರಂಟಿಗೆ ಹಣ ವಿನಿಯೋಗ ಮಾಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗಿದೆ. ಇದಕ್ಕೆ ಜನ ಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ನಿಧಿ, ರೈತ ಸಮ್ಮಾನ್ ಯೋಜನೆಗೆ ಕಾಂಗ್ರೆಸ್ ಕತ್ತರಿ ಹಾಕಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 39 ಸಾವಿರ ರೈತರಿಗೆ ₹396 ಕೋಟಿ ಅನುದಾನ ಕೇಂದ್ರ ಸರ್ಕಾರ ನೀಡಿದೆ. ಯೂರಿಯಾ ಗೊಬ್ಬರಕ್ಕೆ ನೀಮ್ ಕೋಟಿಂಗ್ ಮಾಡಿಕೊಡಲಾಗುತ್ತಿದೆ. ಫಸಲ್ ಬಿಮಾ ಯೋಜನೆ ಫಲಾನುಭವಿಗಳಿಗೆ ಉತ್ತಮ ಅನುದಾನ ಸಿಗುತ್ತಿದೆ. ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳಿಗೆ ಮನೆ ಮನೆಗೆ ಜಲ ಜೀವನ್ ಯೋಜನೆ ಯಶಸ್ವಿಯಾಗಿ ತಲುಪಿಸಲಾಗಿದೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರು ನಾನು ಕಷ್ಟದ ದಿನಗಳಲ್ಲಿ ಬಿಜೆಪಿ ಗೆಲ್ಲಿಸಿದ್ದೇನೆ. ಭದ್ರಾವತಿಗೆ ಕರೆತಂದು ರಾಜಕೀಯವಾಗಿ ಬಲಿಕೊಡಲಾಯಿತು ಎಂದು ಆರೋಪಿಸಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದುದು. ಭದ್ರಾವತಿಯಲ್ಲಿ ನಿಂತು ಸೋತಿದ್ದಕ್ಕೆ ಅವರು ರಾಜ್ಯಸಭಾ ಸ್ಥಾನ, ವಿಧಾನಸಭಾ ಸ್ಥಾನ ಪಡೆದಿದ್ದಾರೆ ಎಂದು ತಿರುಗೇಟು ನೀಡಿದರು.

ಆಯನೂರು ಮಂಜುನಾಥ ಅವರಿಗೆ ಇರುವಷ್ಟೇ ರಾಜಕೀಯ ಜ್ಞಾನ ನನಗೂ ಇದೆ ಎಂದ ಅವರು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷಕ್ಕೆ ಕರೆತರಲು ಯತ್ನಿಸಲಾಗಿತ್ತು. ಈಗ ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್.ಕೆ.ಸಿದ್ದರಾಮಣ್ಣ, ಎಂ.ಬಿ.ಭಾನುಪ್ರಕಾಶ್, ವಿಭಾಗ ಪ್ರಭಾರ ಗಿರೀಶ್ ಪಟೇಲ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್, ಚಂದ್ರಶೇಖರ್ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ