ಕನ್ನಡಪ್ರಭ ವಾರ್ತೆ ಉಡುಪಿ
ಗ್ರಾ.ಪಂ.ನಿಂದ ಮುಜರಾಯಿ ಇಲಾಖೆ ವರೆಗೆ ಯಾವುದೇ ಇಲಾಖೆಗಳ ಠೇವಣಿಗಳನ್ನು ಸಹಕಾರ ಬ್ಯಾಂಕ್‌ಗಳಲ್ಲಿಡಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ಸರ್ಕಾರಗಳು ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಬೇಕು. ಆ ಮೂಲಕ ಸ್ಥಳೀಯರಿಗೆ ಸಹಕಾರದ ಲಾಭ ದೊರೆಯುವಂತೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ ಎಂ.ಎನ್. ರಾಜೇಂದ್ರ ಕುಮಾರ್ ಆಗ್ರಹಿಸಿದ್ದಾರೆ.ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಹಾಗೂ ಇತರ ಸಂಘಗಳ ಸಹಯೋಗದೊಂದಿಗೆ ಬುಧವಾರ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ 71ನೇ ಅ.ಭಾ. ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರದ ಪಾತ್ರ ಗಣನೀಯ. ಆದರೂ ಸರ್ಕಾರಗಳು ಸಹಕಾರಿ ರಂಗಕ್ಕೆ ಪೂರಕ ಸಹಕಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ನಬಾರ್ಡ್ ನೆರವನ್ನು ಈ ಬಾರಿ ಕಡಿತಗೊಳಿಸಿದೆ. ಅದರಿಂದಾಗಿ ಕೃಷಿಕರಿಗೆ ನೀಡುವ ಶೂನ್ಯ ಬಡ್ಡಿದರ ಹಾಗೂ ಕಡಿಮೆ ಬಡ್ಡಿದರದ ಕೃಷಿ ಸಾಲಗಳಿಗೆ ತೊಡಕಾಗಲಿದೆ ವಿಷಾದಿಸಿದರು.ಸಹಕಾರದ ಮಹತ್ವ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ ಶಾಲಾ ಪಠ್ಯದಲ್ಲಿ ಸಹಕಾರ ತತ್ವದ ವಿಚಾರಗಳನ್ನು ಅಳವಡಿಸುವುದು ಅಪೇಕ್ಷಣೀಯ ಎಂದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿ ಡಾ. ಜಿ.ಶಂಕರ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಹೋಮ್‍ಗಾರ್ಡ್ ಕಮಾಂಡೆಂಟ್ ಡಾ. ರೋಶನ್ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯ, ಸಹಾಯಕ ನಿಬಂಧಕಿ ಸುಕನ್ಯ, ಸಹಕಾರ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನಿರ್ದೇಶಕರಾದ ಪ್ರಕಾಶ್ಚಂದ್ರ ಶೆಟ್ಟಿ, ಶ್ರೀಧರ್ ಮತ್ತು ಅಲೆವೂರು ಹರೀಶ ಕಿಣಿ, ಸಿಇಒ ಅನುಷಾ ಕೋಟ್ಯಾನ್, ಬಡಗಬೆಟ್ಟು ಸೊಸೈಟಿ ಉಪಾಧ್ಯಕ್ಷ ಜಾರ್ಜ್ ಸ್ಯಾಮುಯೆಲ್ ಮತ್ತು ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್, ಇಂಡಸ್ಟ್ರಿಯಲ್ ಸೊಸೈಟಿ ಅಧ್ಯಕ್ಷ ಅರುಣ ಕುಮಾರ್ ಶೆಟ್ಟಿ ಮತ್ತು ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ, ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮೋಹನ ಉಪಾಧ್ಯಾಯ ಮತ್ತು ಪ್ರಧಾನ ವ್ಯವಸ್ಥಾಪಕ ವಾದಿರಾಜ ಭಟ್, ಗುರು ನಿತ್ಯಾನಂದ ಸೊಸೈಟಿ ಅಧ್ಯಕ್ಷ ಸುರೇಶ ಶೆಟ್ಟಿ ಮತ್ತು ಪ್ರಧಾನ ವ್ಯವಸ್ಥಾಪಕ ರಾಜೇಶ ಶೆಟ್ಟಿ ಮೊದಲಾದವರಿದ್ದರು.ಮನೋವೈದ್ಯ ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ್ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭ ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಸಹಕಾರ ಡಿಪ್ಲೊಮಾದಲ್ಲಿ ರ್‍ಯಾಂಕ್ ಪಡೆದವರನ್ನು ಗೌರವಿಸಲಾಯಿತು.