ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆದರೂ ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳು ದೊರೆತಿಲ್ಲ. ಈ ಭಾಗದ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಹೆಚ್ಚಿನ ಅನುದಾನ ತರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ರೈ ಕುವೆತ್ತಬೈಲು ಆರೋಪಿಸಿದರು.
ಕನ್ನಡಪ್ರಭವಾರ್ತೆ ಉಳ್ಳಾಲ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬೇರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಉಳ್ಳಾಲ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳನ್ನು ತಣ್ಣೀರುಬಾವಿಗೆ ಕರೆದುಕೊಂಡು ಹೋಗಿ ರಾತ್ರಿ ಊಟದ ಜೊತೆಗೆ ಸಮುದ್ರದ ಮೀನಿನ ಖಾದ್ಯದ ಸವಿಯನ್ನು ತೋರಿಸಿರುವ ಶಾಸಕರು, ಅವರನ್ನು ಉಳ್ಳಾಲಕ್ಕೂ ಕರೆತಂದು ಇಲ್ಲಿನ ಕಡಲ್ಕೊರೆತ ಹಾಗೂ ಜನರ ಸಮಸ್ಯೆಗಳನ್ನು ತೋರಿಸಬೇಕಿತ್ತು. ಆಗ ಇಲ್ಲಿನ ನೈಜ ಸಮಸ್ಯೆಗಳ ಅರಿವಾಗುತ್ತಿತ್ತು ಎಂದು ಅವರು ವ್ಯಂಗ್ಯವಾಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಮಾತನಾಡಿ, ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳನ್ನು ಕರೆಸಿ ಶಾಶ್ವತ ಪರಿಹಾರದ ಕುರಿತು ಚರ್ಚೆ ನಡೆಸಬೇಕಿತ್ತು ಎಂದು ಹೇಳಿದರು.
ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವುದನ್ನು ಸ್ವಾಗತಿಸಿದ ಅವರು, ಈ ಸ್ಥಾನಮಾನ ಇಡೀ ರಾಜ್ಯದಲ್ಲಿ ಯಾವ ರೀತಿಯಲ್ಲಿ ಅನುಷ್ಠಾನಗೊಳ್ಳಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಜೀವನ್ ಕುಮಾರ್ ತೊಕ್ಕೊಟ್ಟು, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ಹಾಗೂ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.