ಕನ್ನಡಪ್ರಭ ಕುಂದಾಪುರ ವರದಿಗಾರನ ಮೇಲೆ ಸರ್ಕಾರಿ ವೈದ್ಯ ಹಲ್ಲೆ !

KannadaprabhaNewsNetwork |  
Published : Aug 22, 2026, 02:15 AM IST
21ಮಹೇಂದ್ರ | Kannada Prabha

ಸಾರಾಂಶ

ಕುಂದಾಪುರ ತಾಲೂಕು ಕನ್ನಡಪ್ರಭ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಮೇಲೆ ಶುಕ್ರವಾರ ಬೆಳಗ್ಗೆ ತಾಲೂಕು ಸರ್ಕಾರಿ ಆಸ್ಪತ್ರೆ ಸರ್ಜನ್ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಏಕಾಏಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ.

ಕುಂದಾಪುರ: ಕುಂದಾಪುರ ತಾಲೂಕು ಕನ್ನಡಪ್ರಭ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಮೇಲೆ ಶುಕ್ರವಾರ ಬೆಳಗ್ಗೆ ತಾಲೂಕು ಸರ್ಕಾರಿ ಆಸ್ಪತ್ರೆ ಸರ್ಜನ್ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಏಕಾಏಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ.

ಹಲ್ಲೆಯಿಂದ ಕೈ ಮತ್ತು ಎದೆ ನೋವಿಗೊಳಗಾದ ಶ್ರೀಕಾಂತ್ ಹೆಮ್ಮಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಡಾ.ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ವಾರಗಳ ಹಿಂದೆ ‘ಕನ್ನಡಪ್ರಭ’ದಲ್ಲಿ ‘ಕುಂದಾಪುರ ಸರ್ಕಾರಿ ಆಸ್ಪತ್ರೆಯ ಮೇಲೆ ಭ್ರಷ್ಟಾಚಾರದ ಕರಿನೆರಳು’ ಹೆಸರಿನಲ್ಲಿ ಶ್ರೀಕಾಂತ್ ಹೆಮ್ಮಾಡಿ ವರದಿ ಪ್ರಕಟವಾಗಿತ್ತು. ಸ್ವತಃ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ‘ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗುವ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ ಅಲ್ಲಿನ ವೈದ್ಯರು ಬಲವಂತವಾಗಿ ಹಣ ಪಡೆಯುತ್ತಾರೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾ ಅಧಿಕಾರಿಗಳಿಗೆ ನೀಡಿದ ಸೂಚನೆ ಆಧರಿಸಿ ಹಿನ್ನೆಲೆಯಲ್ಲಿ ಶ್ರೀಕಾಂತ್ ಈ ತನಿಖಾ ವರದಿ ಸಿದ್ಧಪಡಿಸಿದ್ದರು.

ಈ ವರದಿಯ ಹಿನ್ನೆಲೆಯಲ್ಲಿ ಶುಕ್ರವಾರ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅವರು ಹೊಟೇಲಿನಲ್ಲಿ ಶ್ರೀಕಾಂತ್ ಅವರ ಶರ್ಟ್‌ ಕಾಲರಿಗೆ ಕೈ ಹಾಕಿ ಕೆನ್ನೆಗೆ ಹೊಡೆದು ತಳ್ಳಾಟ ನಡೆಸಿದರು. ಈ ಸಂದರ್ಭ ಇಬ್ಬರ ನಡುವೆ ಸ್ವಲ್ಪ ವಾಗ್ವಾದ ನಡೆದು, ನಂತರ ವೈದ್ಯರು ಶ್ರೀಕಾಂತ್ ಅವರಿಗೆ ಜೀವಬೆದರಿಕೆ ಒಡ್ಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ಎಲ್ಲ ಘಟನೆ ಹೊಟೇಲಿನ ಸಿಸಿ ಕ್ಯಾಮರಾದಲ್ಲಿ ಸಂಪೂರ್ಣವಾಗಿ ದಾಖಲಾಗಿದ್ದು, ಕುಂದಾಪುರ ಪೊಲೀಸರು ಈ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಶ್ರೀಕಾಂತ್ ಹೇಳಿಕೆ ಪಡೆದು, ಘಟನಾ ಸ್ಥಳದಲ್ಲಿ ಸಾಕ್ಷಿಗಳ ಜೊತೆಗೆ ಹೊಟೇಲಿನ ಸ್ಥಳ ಮಹಜರು ಮಾಡಿ, ಪ್ರಕರಣ ದಾಖಲಿಸಿದ್ದಾರೆ.ಪತ್ರಕರ್ತನ ಮೇಲೆ ಹಲ್ಲೆಯ ಘಟನೆಯನ್ನು ವಿವಿಧ ಸಂಘಟನೆಗಳು ಖಂಡಿಸಿವೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಹಲ್ಲೆ ನಡೆಸಿದ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮತ್ತು ಅರೋಗ್ಯ ಇಲಾಖೆಯ ಅಧಿಕಾರಿಗಳಿಗೂ ಮನವಿ ನೀಡಿದ್ದಾರೆ.

ಆರೋಪ ಮೈಮೇಲೆಳೆದುಕೊಂಡ ವೈದ್ಯರು !: ಶುಕ್ರವಾರ ಹೊಟೇಲಿನಲ್ಲಿ ಪತ್ನಿಯೊಂದಿಗೆ ತಿಂಡಿ ತಿನ್ನುತ್ತಿದ್ದ ಶ್ರೀಕಾಂತ್ ಅವರ ಬಳಿ ಬಂದ ಡಾ.ಮಹೇಂದ್ರ ಕುಮಾರ್ ಶೆಟ್ಟಿ ‘ನಿನ್ನ ಜೊತೆ ಸ್ವಲ್ಪ ಮಾತನಾಡುವುದಿದೆ’ ಎಂದು ಕೈಹಿಡಿದು ಪಕ್ಕಕ್ಕೆ ಕರೆದುಕೊಂಡು ಹೋಗಿ, ಕಾಲರಿಗೆ ಕೈ ಹಾಕಿ ಕೆನ್ನೆಗೆ ಹೊಡೆದಿದ್ದಾರೆ. ವರದಿ ಬರೆದ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ತಕ್ಷಣ ಶ್ರೀಕಾಂತ್ ಅವರ ಪತ್ನಿ ಮತ್ತು ಪತ್ರಕರ್ತ ಯೋಗೀಶ್ ಅವರು ಅವರು ತಡೆದರು. ಶ್ರೀಕಾಂತ್ ತಮ್ಮ ವರದಿಯ ಬಗ್ಗೆ ಸ್ಪಷ್ಟೀಕರಣ ನೀಡುತಿದ್ದರೂ ಕೇಳದೆ ಮತ್ತೆ ಮತ್ತೆ ಅವರ ಮೇಲೆ ಹಲ್ಲೆಗೆ ಯತ್ನಿಸಿರುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಶಾಸಕರ ಹೇಳಿಕೆಗೆ ಅನುಸಾರ ವರದಿ: ಈ ಸಂದರ್ಭ ಈ ಸರ್ಕಾರಿ ವೈದ್ಯರ ಜೊತೆಗಿದ್ದ ಅವರ ಖಾಸಗಿ ಕ್ಲಿನಿಕ್‌ನ ಪಾಲುದಾರ ಮಹಿಳಾ ವೈದ್ಯೆಯೂ ಸಾಥ್ ನೀಡಿದ್ದಾರೆ. ವಿಶೇಷ ಎಂದರೆ ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ವರದಿಯಲ್ಲಿ ಯಾವುದೇ ವೈದ್ಯರ ಹೆಸರು ಉಲ್ಲೇಖವಾಗಿಲ್ಲ. ಭ್ರಷ್ಟಾಚಾರ ನಡೆಯುತ್ತಿರುವ ಶಾಸಕರ ಹೇಳಿಕೆಯನುಗುಣವಾಗಿ ವರದಿ ಪ್ರಕಟಿಸಲಾಗಿತ್ತು. ಆದರೂ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಶುಕ್ರವಾರ ಹಲ್ಲೆ ನಡೆಸುವ ಮೂಲಕ ಭ್ರಷ್ಟಾಚಾರದ ಆರೋಪವನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡಿದ್ದಾರೆ.

ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅಮಾನತು: ಕನ್ನಡಪ್ರಭ ಪತ್ರಿಕೆಯ ಕುಂದಾಪುರ ವರದಿಗಾರ ಶ್ರಿಕಾಂತ್ ಹೆಮ್ಮಾಡಿ ಮೇಲೆ ಹಲ್ಲೆ ನಡೆಸಿದ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಸ್ತು ಪ್ರಾಧಿಕಾರ ಮತ್ತು ಆಯುಕ್ತ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.ಹಲ್ಲೆಯ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜ್ಯ ಆಯುಕ್ತರಿಗೆ ಘಟನೆಯ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯಂತೆ, ಆರೋಪಿ ಡಾ. ಮಹೇಂದ್ರ ಕುಮಾರ್ ಶೆಟ್ಟಿ, ಸರ್ಕಾರಿ ಅಧಿಕಾರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದರಿಂದ ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮ ಮತ್ತು ನಡತೆ ನಿಯಮಗಳ ಉಲ್ಲಂಘಿಸಿರುವುದರಿಂದ, ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ, ಕರ್ತವ್ಯ ಲೋಪ ಮತ್ತು ಬೇಜವಾಬ್ದಾರಿ ಬಗ್ಗೆ ಇಲಾಖೆ ವಿಚಾರಣೆಗೆ ಆದೇಶಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸುವುದಾಗಿ ಆದೇಶಿಸಿದ್ದಾರೆ.ಅಮಾನತು ಅವಧಿಯಲ್ಲಿ ಆರೋಪಿಯು ಜೀವನಾಂಶ ಭತ್ತೆ ಪಡೆಯುವುದಕ್ಕಾಗಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಶಸ್ತ್ರಚಿಕಿತ್ಸರ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಆದರೆ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಜಿಟಲ್ ಸೇವಾ ಕೇಂದ್ರದಲ್ಲಿ ಘರ್ಷಣೆ: ಇತ್ತಂಡ ದೂರು
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೇಕು: ಹರಿಶಂಕರ್