ನಗರದ ದರ್ಬೆ ಡಿಜಿಟಲ್ ಸೇವಾ ಕೇಂದ್ರವೊಂದರಲ್ಲಿ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದು, ಎರಡೂ ಕಡೆಯವರ ಬೆಂಬಲಿಗರು ಗುಂಪುಗೂಡಿದ್ದು, ಬಳಿಕ ಪೊಲೀಸರಿಂದ ಲಾಠಿಚಾರ್ಜ್ ನಡೆದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬಳಿಕ ಇತ್ತಂಡದಿಂದ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ಪುತ್ತೂರು: ನಗರದ ದರ್ಬೆ ಡಿಜಿಟಲ್ ಸೇವಾ ಕೇಂದ್ರವೊಂದರಲ್ಲಿ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದು, ಎರಡೂ ಕಡೆಯವರ ಬೆಂಬಲಿಗರು ಗುಂಪುಗೂಡಿದ್ದು, ಬಳಿಕ ಪೊಲೀಸರಿಂದ ಲಾಠಿಚಾರ್ಜ್ ನಡೆದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬಳಿಕ ಇತ್ತಂಡದಿಂದ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ದರ್ಬೆ ಡಿಜಿಟಲ್ ಸೇವಾ ಕೇಂದ್ರದಲ್ಲಿ ಮಗುವಿನ ಬರ್ತ್ ಸರ್ಟಿಫಿಕೇಟನ್ನು ಜೆರಾಕ್ಸ್ ಮತ್ತು ಲ್ಯಾಮಿನೇಶನ್ ಮಾಡಲೆಂದು ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿಗಳಾದ ಇಬ್ಬರು ಮಹಿಳೆಯರು ಮತ್ತು ಓರ್ವ ಯುವಕ ಅಂಗಡಿಗೆ ಬಂದಿದ್ದರು. ಲ್ಯಾಮೀನೇಶನ್ ವೇಳೆಯಲ್ಲಿ ಮೆಷಿನ್ ತೊಡಕಿನಿಂದಾಗಿ ಬರ್ತ್ ಸರ್ಟಿಫಿಕೇಟ್ ಮುದ್ದೆಯಾಗಿ ಹಾಳಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮತ್ತು ಮಾಲಕರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಧಿಸಿದಂತೆ ಸುಳ್ಯ ತಾಲೂಕಿನ ಮಂಡಕೋಲು ನಿವಾಸಿಗಳಾದ ಮುಬಾರಿಸ್(೨೨) ಆತನ ಸಹೋದರಿಯವರಾದ ಫಾತಿಮ ಮಿಸ್ವಾಸ್(೩೩) ಮತ್ತು ಮುಬಶ್ಶಿರ(೨೫) ಎಂಬವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸೇವಾ ಕೇಂದ್ರದ ಅಂಜನಾ ಪೈ ಮತ್ತು ಸುದರ್ಶನ ಪೈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು: ಹಲ್ಲೆ ವಿಚಾರ ಬಹಿರಂಗವಾಗುತ್ತಿದ್ದಂತೆ ಸೇವಾ ಕೇಂದ್ರದ ಮುಂಭಾಗ ಜನ ಜಮಾಯಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಅರಿತ ಪುತ್ತೂರು ನಗರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಲಾಠಿ ಬೀಸಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಇತ್ತಂಡಗಳಿಂದ ದೂರು ಪಡೆದು ಪುತ್ತೂರು ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಕೃತ್ಯ ನಡೆದ ಅಂಗಡಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು, ಸಿಸಿಟಿವಿ ಪರಿಶೀಲಿಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಯಾವುದೇ ಸುಳ್ಳು ವದಂತಿಗಳನ್ನು ಪ್ರಸಾರ ಮಾಡಿದಲ್ಲಿ ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.