ಸರ್ಕಾರ ಕೊರೆಸಿಕೊಟ್ಟ ಬೋರ್‌ವೆಲ್‌ ಗ್ರಾಪಂ ವಶಕ್ಕೆ

KannadaprabhaNewsNetwork | Published : Apr 28, 2025 12:48 AM

ಸಾರಾಂಶ

ಗಂಗಾಕಲ್ಯಾಣ ಯೋಜನೆಯಡಿ ಸರ್ಕಾರವೇ ಕೊಳವೆಬಾವಿ ಕೊರೆಸಿ ಇದೀಗ ನಮ್ಮಿಂದ ಅವುಗಳನ್ನು ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ಕೊಳವೆಬಾವಿಗಳನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡುತ್ತಿದ್ದು, ಇವುಗಳನ್ನು ನಂಬಿಕೊಂಡೆ ಜೀವನ ಸಾಗುತ್ತಿದ್ದೇವೆ. ೀಗ ನೀರನ್ನ ಕಿತ್ತುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕೆರೆಯಲ್ಲಿ ರೈತರು ಅನಧಿಕೃತವಾಗಿ ಕೊರೆದಿರುವ ಕೊಳವೆಬಾವಿಗಳನ್ನು ಗ್ರಾಮ ಪಂಚಾಯಿತಿ ವಶಕ್ಕೆ ಪಡೆಯುವ ವೇಳೆ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಕೊಳವೆಬಾವಿಗಳನ್ನು ನಮ್ಮಿಂದ ಕಿತ್ತುಕೊಂಡರೇ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ತಾಲೂಕಿನ ಗೌನಿಚೇರುವುಪಲ್ಲಿಯಲ್ಲಿ ನಡೆದಿದೆ.

ಮುರುಗಮಲ್ಲ ಹೋಬಳಿ ಪೆದ್ದೂರು ಗ್ರಾಪಂ ವ್ಯಾಪ್ತಿಯ ಗೌನಿಚೇರುವುಪಲ್ಲಿಯ ಕೆರೆಯಲ್ಲಿ ಗ್ರಾಮದ ಪರಿಶಿಷ್ಟ ಜಾತಿಯ ದಾಸಪ್ಪ, ರಾಮಚಂದ್ರಪ್ಪ, ಮುನಿಯಪ್ಪ, ಜಿಎಸ್ ಶಿವಶಂಕರರೆಡ್ದಿ ಮತ್ತು ರೆಡ್ಡಪ್ಪ ಎಂಬುವವರು ಅನಧಿಕೃತವಾಗಿ ಕೊಳವೆಬಾವಿಗಳನ್ನು ಕೊರೆಸಿಕೊಂಡಿದ್ದಾರೆ.

ಗ್ರಾಪಂ ವಶಕ್ಕೆ ಕೊಳವೆಬಾವಿ

ಅವುಗಳನ್ನು ವಶಕ್ಕೆ ಪಡೆದುಕೊಳ್ಳಬೇಕೆಂದು ಗೌನಿಚೇರುವುಪಲ್ಲಿ ಗ್ರಾಮದ ಹಲವರು ತಹಸೀಲ್ದಾರ್‌ರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಕೆರೆಯಲ್ಲಿನ ಕೊಳವೆ ಬಾವಿಗಳನ್ನು ಗ್ರಾಮ ಪಂಚಾಯಿತಿ ವಶಕ್ಕೆ ನೀಡುವಂತೆ ರೈತರಿಗೆ ೨ ತಿಂಗಳ ಕಾಲವಾಕಾಶ ನೀಡಿದ್ದರು.

ಆದರೆ ರೈತರು ಕೊಳವೆ ಬಾವಿಗಳನ್ನು ಗ್ರಾಮ ಪಂಚಾಯಿತಿ ವಶಕ್ಕೆ ನೀಡಲು ಒಪ್ಪದ ಕಾರಣ ಶುಕ್ರವಾರ ಬೆಳಿಗ್ಗೆ ಮುರುಗಮಲ್ಲ ನಾಡಕಚೇರಿ ಪ್ರಭಾರಿ ಉಪ ತಹಸೀಲ್ದಾರ್ ಮೋಹನ್ ಹಾಗೂ ಕಂದಾಯ ನಿರೀಕ್ಷಕ ರಮೇಶ್ ನೇತೃತ್ವದಲ್ಲಿ ಬಟ್ಲಹಳ್ಳಿ, ಕೆಂಚರ‍್ಲಹಳ್ಳಿ, ಚೇಳೂರು ಪೊಲೀಸರ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಕೊಳವೆ ಬಾವಿಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಅಧಿಕಾರಿಗಳ ಹಾಗೂ ರೈತರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಗ್ರಾಪಂ ವಶಕ್ಕೆ ಕೊಳವೆಬಾವಿ

ಕೊನೆಗೂ ಅಧಿಕಾರಿಗಳ ಹಾಗೂ ಪೊಲೀಸರ ಮನವೊಲಿಕೆಯಿಂದ ಕೆಲ ಷರತ್ತುಗಳಿಗೆ ರೈತರು ಒಪ್ಪಿ ಪೆದ್ದೂರು ಪಿಡಿಒ ಕರಿಬಸಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ರ‍್ರಪ್ಪರೆಡ್ಡಿರ ವಶಕ್ಕೆ ತಮ್ಮ ಕೊಳವೆ ಬಾವಿಗಳನ್ನು ಬಿಟ್ಟುಕೊಡಲು ರೈತರು ಒಪ್ಪಿಕೊಂಡು ಮುಚ್ಚಳಿಕೆಗಳಿಗೆ ಸಹಿ ಹಾಕಿದ್ದಾರೆ.

ಗಂಗಾಕಲ್ಯಾಣ ಯೋಜನೆಯಡಿ ಸರ್ಕಾರವೇ ಕೊಳವೆಬಾವಿ ಕೊರೆಸಿ ಇದೀಗ ನಮ್ಮಿಂದ ಅವುಗಳನ್ನು ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ಕೊಳವೆಬಾವಿಗಳನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡುತ್ತಿದ್ದು, ಇವುಗಳನ್ನು ನಂಬಿಕೊಂಡೆ ಜೀವನ ಸಾಗುತ್ತಿದ್ದೇವೆ. ಲಕ್ಷಾಂತರ ರೂ ಬಂಡವಾಳ ಹಾಕಿ, ಬದನೆ, ಟೊಮೆಟೋ ಮತಿತ್ತರ ಬೆಳೆಗಳನ್ನು ಬೆಳೆದಿದ್ದೇವೆ. ಅಧಿಕಾರಿಗಳು ಬೆಳೆ ನಮ್ಮ ಕೈಗೆ ಬರುವವರಿಗೆ ಕೊಳವೇ ಬಾವಿ ನೀರು ಬಳಸಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ನಮ್ಮ ಕುಟುಂಬವೆಲ್ಲಾ ಕೊಳವೆ ಬಾವಿ ಬಳಿ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪೆದ್ದೂರು ಗ್ರಾಪಂ ಅಧ್ಯಕ್ಷ ಗುರ‍್ರಪ್ಪರೆಡ್ಡಿ, ಸದಸ್ಯರಾದ ಅಭಿಲಾಷ್, ಭಾಸ್ಕರ್, ಗ್ರಾಮದ ರೈತರಾದ ಸುಬ್ರಮಣಿ, ವೆಂಕಟರವಣಪ್ಪ ಮತಿತ್ತರರು ಉಪಸ್ಥಿತರಿದ್ದರು.

Share this article