ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸರ್ಕಾರಿ ನೌಕರರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು.ನಗರದ ಪ್ರವಾಸಿ ಮಂದಿರದಿಂದ ಮೌನ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸರ್ಕಾರಿ ನೌಕರರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಭಯಮುಕ್ತ ವಾತಾವರಣದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು, ವಿನಾಕಾರಣ ಕಿರುಕುಳ ನೀಡುವ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಾಲತೇಶ ಮುದಜ್ಜಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರಿ ನೌಕರರು ಈಗಲೇ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ. ಕೆಲವು ಕಿಡಿಗೇಡಿಗಳು, ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದು, ಕಿರುಕುಳ ನೀಡುವಂತಹ ಕಾರ್ಯ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಇದರಿಂದಾಗಿ ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿಯೇ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವಿನಾಕಾರಣ ನೂರಾರು ಸಂಖ್ಯೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿ ಕಾಯ್ದೆಯ ದುರುಪಯೋಗ ಮಾಡುವುದು, ನೌಕರರ ಮೇಲೆ ಹಲ್ಲೆ ಮಾಡುವಂತಹ ಪ್ರಕರಣಗಳು ಕೂಡ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿವೆ. ಹೀಗಾಗಿ ಸರ್ಕಾರಿ ನೌಕರರು ಪ್ರಾಮಾಣಿಕತೆಯಿಂದ ಭಯಮುಕ್ತ ವಾತಾವರಣದಲ್ಲಿ ಕೆಲಸ ಮಾಡುವಂತಾಗಬೇಕು ಎಂದರು.ಇತ್ತೀಚೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಯತ್ನಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರಿ ದಾಖಲೆಗಳನ್ನು ಹರಿದು ಹಾಕಿರುವ ಎಂ.ಸತೀಶ್ ಕುಮಾರ್ ಎಂಬುವರನ್ನು ಬಂಧಿಸಿ, ಆತನಿಂದಾಗುವ ಮಾನಸಿಕ ಕಿರುಕುಳ, ಸರ್ಕಾರಿ ಅಧಿಕಾರಿಗಳ, ನೌಕರರ ತೇಜೋವಧೆ ಮಾಡುವುದನ್ನು ತಪ್ಪಿಸಲು ಜಿಲ್ಲೆಯಿಂದ ಗಡೀಪಾರು ಮಾಡುವಂತೆ ಒತ್ತಾಯಿಸಿದರು.
ಸತೀಶ್ ಕುಮಾರ್ ಎಂಬ ವ್ಯಕ್ತಿ ಜಿಲ್ಲೆಯಲ್ಲಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸುಮಾರು 200ಕ್ಕೂ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿ, ಮಾಹಿತಿ ಹಾಗೂ ಹಣ ಕೊಡುವಂತೆ ಕಳೆದ ಸುಮಾರು 9-10 ತಿಂಗಳಿಂದ ಪೀಡಿಸುತ್ತಿದ್ದು, ಯಾವುದೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಣ ನೀಡದೇ ಇದ್ದಾಗ ಹತಾಶನಾಗಿ ದಾಖಲೆರಹಿತವಾಗಿ ಸರ್ಕಾರಕ್ಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಂಸದರಿಗೆ ಸುಳ್ಳು ದೂರು ಅರ್ಜಿ ಸಲ್ಲಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾನೆ ಎಂದು ದೂರಿದರು.ಸತೀಶ್ ನಾಯ್ಕ್‌ನ್ನು ಕೂಡಲೇ ಬಂಧಿಸಿ, ಗೂಂಡಾ ಕಾಯ್ದೆಯನ್ವಯ ರೌಡಿಶೀಟರ್ ಎಂದು ಪ್ರಕರಣ ದಾಖಲಿಸಬೇಕು. ಸರ್ಕಾರಿ ನೌಕರರಿಗೆ ತೊಂದರೆಯಾಗದ ರೀತಿಯಲ್ಲಿ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿ ಎಂದು ಒತ್ತಾಯ ಮಾಡಿದರು.
ಇದಕ್ಕೂ ಮುನ್ನ ರಾಜ್ಯ ಸರ್ಕಾರಿ ನೌಕರರು ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೌನ ಮೆರವಣಿಗೆ ನಡೆಸಿ, ಪ್ರತಿಭಟನೆ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಅಧ್ಯಕ್ಷ ಮಾಲತೇಶ ಮುದ್ದಜ್ಜಿ, ಜಿಲ್ಲಾ ಕಾರ್ಯದರ್ಶಿ ಆರ್.ಶ್ರೀನಿವಾಸ್, ಖಜಾಂಚಿ ಮಲ್ಲಿಕಾರ್ಜುನ್, ರಾಜ್ಯ ಪರಿಷತ್ ಸದಸ್ಯ ಎಸ್.ರಾಜಪ್ಪ, ಉಪಾಧ್ಯಕ್ಷ ಪೂಜಾರ್ ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಬಸವರಾಜಪ್ಪ, ಪಿಡಿಒ ಸಂಘದ ಜಿಲ್ಲಾ ಅಧ್ಯಕ್ಷ ನಯಾಜ್, ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಇದ್ದರು.