ನಿಗಮ ಮಂಡಳಿಯಲ್ಲಿ ಜಿಲ್ಲೆಗೆ ಸಿಗದ ಪ್ರಾತಿನಿಧ್ಯ

KannadaprabhaNewsNetwork |  
Published : Sep 27, 2025, 01:00 AM IST

ಸಾರಾಂಶ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಗ್ಯಾರಂಟಿ ಖ್ಯಾತಿಯ ಕಾಂಗ್ರೆಸ್ ಗೌರ್ನಮೆಂಟ್ ನಿಂದ ಇತ್ತೀಚೆಗೆ ವಿವಿಧ ನಿಗಮ ಮಂಡಳಿಗಳಿಗೆ 39 ಜನರನ್ನುಅಧ್ಯಕ್ಷರನ್ನಾಗಿ ಮಾಡಿದ್ದು, ಈ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಪರಿಗಣಿಸದೇ ಇರುವುದು ಕೈ ಪಕ್ಷದ ನಾಯಕರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಗ್ಯಾರಂಟಿ ಖ್ಯಾತಿಯ ಕಾಂಗ್ರೆಸ್ ಗೌರ್ನಮೆಂಟ್ ನಿಂದ ಇತ್ತೀಚೆಗೆ ವಿವಿಧ ನಿಗಮ ಮಂಡಳಿಗಳಿಗೆ 39 ಜನರನ್ನುಅಧ್ಯಕ್ಷರನ್ನಾಗಿ ಮಾಡಿದ್ದು, ಈ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಪರಿಗಣಿಸದೇ ಇರುವುದು ಕೈ ಪಕ್ಷದ ನಾಯಕರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ.

ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಇಬ್ಬರು, ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಜನ, ವಿಧಾನ ಪರಿಷತ್‌ ವಿಭಾಗದಲ್ಲಿ ಮೂವರನ್ನು ಜಿಲ್ಲೆ ಜನರು, ಪಕ್ಷದ ಮುಖಂಡರು ಗೆಲ್ಲಿಸಿ ಕಳುಹಿಸಿದ್ದಾರೆ, ಕಾಂಗ್ರೆಸ್‌ ಪಕ್ಷವನ್ನೆ ಮೆಚ್ಚಿರುವ ಜಿಲ್ಲೆಯನ್ನು ಗ್ಯಾರಂಟಿ ಗೌರ್ನಮೆಂಟ್ ಕಡೆಗಣಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಯನ್ನುಂಟು ಮಾಡಿದೆ.

ಕೈ ಹಿಡಿಯುವಲ್ಲಿ ಸೋತರೇ?: ರಾಜ್ಯ ಸರ್ಕಾರದಲ್ಲಿ ರಾಯಚೂರು ಜಿಲ್ಲೆಯಿಂದ ಇಬ್ಬರು ಸಚಿವರು, ಮೂರು ಜನ ಶಾಸಕರಿಗೆ ಅಭಿವೃದ್ಧಿ ನಿಗಮಗಳ ಅಧ್ಯಕ್ಷರ ಪಟ್ಟವನ್ನು ಕಟ್ಟಲಾಗಿದೆ. ಇಷ್ಟೇ ಅಲ್ಲದೇ ಮೂರು ಜನ ಎಂಎಲ್ಸಿಗಳನ್ನು ಸಹ ಮಾಡಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಪಕ್ಷದ ನಿಷ್ಠಾವಂತರಿಗೆ, ಆಕಾಂಕ್ಷಿಗಳಿಗೆ ನಿಗಮ ಮಂಡಳಿಗಳ ಅಧಿಕಾರವನ್ನು ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದು 39 ಜನರ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಹೆಸರು ಇಲ್ಲದೇ ಇರುವುದು ತೋರಿಸಿಕೊಡುತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ಏನು ಬೇಕೋ ಅದನ್ನೆಲ್ಲಾ ಕೊಟ್ಟ ರಾಯಚೂರು ಜಿಲ್ಲೆಗೆ ಹಾಗೂ ಪಕ್ಷದ ಕಾರ್ಯಕರ್ತರ ಕೈ ಹಿಡಿಯುವಲ್ಲಿ ಸಳೀಯ ಸಚಿವರು, ಶಾಸಕರು, ಎಂಎಲ್ಸಿಗಳ ಜೊತೆಗೆ ಕೆಪಿಸಿಸಿ, ಡಿಸಿಸಿಯೂ ಸೋತರೇ? ಎನ್ನುವ ಬೇಸರದ ನುಡಿಗಳು ಪಕ್ಷದ ಆಂತರಿಕ ಸಮಾಲೋಚನೆಯಲ್ಲಿ ಅಗ್ರಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಕಾಂಗ್ರೆಸ್‌ ಬಣಗಳ ಮೌನ: ಅಧಿಕಾರ ಹಾಗೂ ಅಸ್ತಿತ್ವ ಮತ್ತು ಕಾಲೆಳೆಯುವ ವಿಷಯಗಳಲ್ಲಿ ಸದಾ ಸಕ್ರಿಯವಾಗಿ ಕೆಲಸ ಮಾಡುವ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಬಣಗಳು ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆಯಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗದೇ ಇರುವುದರ ಬಗ್ಗೆ ತುಟಿಬಿಚ್ಚದೇ ಮೌನಕ್ಕೆ ಶರಣಾಗಿರುವುದು ಕಾರ್ಯಕರ್ತರಲ್ಲಿ ಮತ್ತಷ್ಟು ಬೇಸರವನ್ನುಂಟು ಮಾಡಿದೆ. ರಾಯಚೂರು ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಿಂದುಳಿದ ವರ್ಗದ ಸಮುದಾಯಗಳಿವೆ, ಇದರೊಟ್ಟಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಸಂಖ್ಯೆಯೂ ವಿರಳವಾಗಿದೆ. ಅಲ್ಪಸಂಖ್ಯಾತರು ಸಹ ಪ್ರಬಲ ಸಮುದಾಯವಾಗಿ ಗುರುತಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಆ ಸಮುದಾಯಗಳಿಗೆ ನ್ಯಾಯ ಕಲ್ಪಿಸಿಕೊಡುವ ಜವಾಬ್ದಾರಿಯನ್ನು ಪಕ್ಷದ ಉನ್ನತ ಸ್ಥಾನದಲ್ಲಿರುವ ಮುಖಂಡರು ವಹಿಸಿಕೊಳ್ಳಬೇಕು ಆದರೆ ಆಗಿರುವ ಅನ್ಯಾಯದ ಬಗ್ಗೆ ಎಲ್ಲಿಯೂ ಮಾತನಾಡದೇ ಇರುವುದು ಅವರ ಅಸಮರ್ಥತೆಯನ್ನು ಎತ್ತಿ ತೋರಿಸುತ್ತಿದೆ.

ಮುಖ್ಯಮಂತ್ರಿಗೆ ಅಸಮಾಧಾನದ ಪತ್ರ

ನಿಗಮ ಮಂಡಳಿಗಳಿಗೆ ಜಿಲ್ಲೆಯನ್ನು ಪರಿಗಣಿಸದೇ ರಾಜ್ಯ ಸರ್ಕಾರ ರಾಯಚೂರಿಗೆ ಮತ್ತೊಂದು ಅನ್ಯಾಯ ಮಾಡಿದೆ. ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆಯನ್ನು ಮಾಡುತ್ತಲೇ ಬಂದಿದೆ. ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ರಾಯಚೂರನ್ನು ಕಡೆಗಣಿಸಲಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ತತ್ವದಡಿ ಕೆಲಸ ಮಾಡುತ್ತಿರುವವರು ಈ ರೀತಿಯಾಗಿ ಮಾಡುವುದು ಸರಿಯೇ? ಎಂಬುವುದನ್ನು ಸಿಎಂ ಸಿದ್ದರಾಮಯ್ಯ ಅವರು ಮನನ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಂಘಟನೆಗಾಗಿ ಅನೇಕ ಕಾರ್ಯಕರ್ತರು ನಿಷ್ಠಾವಂತರಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡದೇ ಇರುವುದು ಶೋಚನೀಯ ಸಂಗತಿಯಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಸುಖಾಣಿ ತಮ್ಮ ಅಸಮಾಧಾನದ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ