ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ಗುತ್ತಿಗೆದಾರರ ಸಂಘ, ಲೋಕೋಪಯೋಗಿ, ಯೋಜನಾ, ಕುಡಿಯುವ ನೀರು ಪೂರೈಕೆ ಯೋಜನೆ, ಪಂಚಾಯತ್‌ರಾಜ್ ಎಂಜಿನಿಯರಿಂಗ್, ಸಣ್ಣ ನೀರಾವರಿ, ರಾಷ್ಟ್ರೀಯ ಹೆದ್ದಾರಿ ವಿಭಾಗಗಳು, ನಿರ್ಮಿತಿ ಕೇಂದ್ರ ಇವುಗಳ ಸಹಯೋಗದೊಂದಿಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಧಿಕಾರ ವಿರುವುದು ದರ್ಪ ತೋರುವುದಕ್ಕಲ್ಲ ಎನ್ನುವುದನ್ನು ನಾನು ಸೇವೆಗೆ ಸೇರಿದಾಗಿನಿಂದಲೂ ಮನವರಿಕೆ ಮಾಡಿಕೊಂಡು ಕೈಲಾದಷ್ಟು ಜನಸೇವೆ ಸಲ್ಲಿಸಿದ್ದೇನೆ. ಶೇ.1ರಷ್ಟು ಮಂದಿಗೆ ಮಾತ್ರ ಸರ್ಕಾರಿ ನೌಕರಿ ಸಿಗುತ್ತದೆ. ಉಳಿದವರಿಗೆ ಈ ಅವಕಾಶವಿಲ್ಲ. ನನಗೆ ಜನಸಾಮಾನ್ಯರು ಕೊಟ್ಟ ನೌಕರಿಯನ್ನು ಅವರ ಸೇವೆಗಾಗಿಯೇ ಮುಡುಪಾಗಿಟ್ಟಿದ್ದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಕೆಲವು ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕೆಲಸ ಮಾಡಿದ್ದೇನೆ. ನಿವೃತ್ತಿಯ ನಂತರವೂ ಈ ಜಿಲ್ಲೆಗೆ ನನ್ನ ಸೇವೆಯಿರುತ್ತದೆಂದು ಭರವಸೆ ನೀಡಿದರು.ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ನಿವೃತ್ತ ಅಧೀಕ್ಷಕ ಎಂಜಿನಿಯರ್ ಎಂ.ರಮೇಶ್, ನಿವೃತ್ತಿ ನಂತರ ಜೀವನ ಕಷ್ಟಕರವಾಗಿರುತ್ತದೆ. ಸುಮ್ಮನೆ ಕುಳಿತು ಕಾಲ ಕಳೆಯುವುದು ಬಲು ಬೇಸರ. ಅಭಿವೃದ್ಧಿ ಕೆಲಸಗಳಿಗೆ ಇವರ ಕೊಡುಗೆ ಸಾಕಷ್ಟಿದೆ. ಸರ್ಕಾರದಿಂದ ಅನುದಾನ ತಂದು ಅದನ್ನು ಯಾವ ಕಾಮಗಾರಿಗೆ ಹೇಗೆ ಎಷ್ಟು ಬಳಸಬೇಕೆಂಬ ಬುದ್ಧಿವಂತಿಕೆಯಿಂದ ಕೆ.ಜಿ.ಜಗದೀಶ್ ಕೆಲಸ ಮಾಡುತ್ತಿದ್ದರು. ನಿವೃತ್ತಿಯ ನಂತರವೂ ಅವರ ಸಲಹೆ ಸಹಕಾರವನ್ನು ಎಂಜಿನಿಯರ್‌ಗಳು ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿದರು.
ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ಮುಂದಿನ ಯೋಜನೆಗಳ ಬಗ್ಗೆ ನಿಮ್ಮ ಕನಸು ಸಾಕಾರಗೊಳ್ಳಲಿ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳನ್ನು ಜೊತೆಯಲ್ಲಿಟ್ಟುಕೊಳ್ಳಿ. ಬಯಲು ಸೀಮೆ ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಗೆ ನಿಮ್ಮ ಸೇವೆ ಸಿಗಲೆಂದು ಕೆ.ಜಿ.ಜಗದೀಶ್ ಅವರಲ್ಲಿ ಮನವಿ ಮಾಡಿದರು.ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಗನಾಥ್ ಮಾತನಾಡಿ, ಸದಾ ಸರ್ಕಾರಿ ನೌಕರರ ಪರವಾಗಿದ್ದ ಕೆ.ಜಿ.ಜಗದೀಶ್ ಅವರು ಕರ್ನಾಟಕದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಾಗ ನೌಕರರಿಂದ ಸಂಗ್ರಹಿಸಿದ 74 ಲಕ್ಷ ರು. ಸರ್ಕಾರಕ್ಕೆ ನೀಡಿ ಮಾನವೀಯತೆ ಮೆರೆದರು. 2013ರಲ್ಲಿ ಚಿತ್ರದುರ್ಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ನಡೆದಾಗಲು ಇವರ ಪಾತ್ರವಿತ್ತು. ಅನೇಕರಿಗೆ ಸಹಾಯ ಮಾಡಿದ್ದಾರೆ. ಸಹನೆ, ತೃಪ್ತಿ, ಮಾನವೀಯತೆಯನ್ನಿಟ್ಟುಕೊಂಡು ಅಧಿಕಾರವಧಿಯಲ್ಲಿ ಕೆಲಸ ಮಾಡಿರುವ ನಿಮ್ಮ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಹಾರೈಸಿದರು.
ಇದೇ ವೇಳೆ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲೇಶಪ್ಪ ಮಾತನಾಡಿದರು. ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಬಿ.ಎಸ್.ಹರೀಶ್‌ಕುಮಾರ್, ಕಾರ್ಯಪಾಲಕ ಎಂಜಿನಿಯರ್‌ಗಳಾದ ನಾಗರಾಜ್, ಎಲ್.ಹನುಮಂತಪ್ಪ, ಕೆ.ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.