ಸಿಎಂ ಸಿದ್ದರಾಮಯ್ಯ ಉದ್ಘಾಟನೆ । ಕೂಟದ ಲಾಂಛನ, ಟ್ರೋಫಿ, ಕ್ರೀಡಾ ಸಮವಸ್ತ್ರ ಬಿಡುಗಡೆ
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೇ 18ರಿಂದ 20ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನಗರದ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಕ್ರೀಡಾಕೂಟದ ಲಾಂಛನ, ಕ್ರೀಡಾ ಸಮವಸ್ತ್ರ ಹಾಗೂ ಟ್ರೋಫಿ ಬಿಡುಗಡೆಗೊಳಿಸಿ, ಪತ್ರಿಕಾ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಈಗಾಗಲೇ ಸಕಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ನುಡಿದರು.ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ 15,000 ನೌಕರ ಕ್ರೀಡಾಪಟುಗಳಿಗೆ ಟ್ರ್ಯಾಕ್‌ಸೂಟನ್ನು ನೋಂದಣಿ ಸಂದರ್ಭದಲ್ಲಿಯೇ ನೀಡಲಾಗುವುದು. ಸ್ಪರ್ಧೆಯಲ್ಲಿ ಎಲ್ಲಾ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿಯನ್ನು ಕೊಡಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಅತ್ಯಂತ ಆಕರ್ಷಕವಾದ ಟ್ರೋಫಿಯನ್ನು ಕ್ರೀಡಾಪಟುಗಳಿಗೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ವಿಜೇತ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ, ಟ್ರೋಫಿಯ ಜೊತೆಗೆ ಸಫಾರಿ ಕಂಪನಿಯ ಟ್ರಾಲಿ ಬ್ಯಾಗನ್ನು ಕೂಡ ನೀಡಲಾಗುತ್ತಿದೆ ಎಂದು ಹೇಳಿದರು
ಮುಖ್ಯಮಂತ್ರಿಗಳು ಅಧಿಕಾರವಹಿಸಿಕೊಂಡ ನಂತರ ಇದೇ ಪ್ರಥಮ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷನಾದ ನಂತರ ನಾಲ್ಕು ಬಾರಿ ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಒಂದು ವಿಶೇಷವಾಗಿದೆ. ಮೇ 19ರಂದು ಸಂಜೆ ನೆಹರು ಕ್ರೀಡಾಂಗಣದಲ್ಲಿ ಜನಪದ ದಿಬ್ಬಣ ಕಾರ್ಯಕ್ರಮ ನಡೆಯಲಿದ್ದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಜಗದೀಶ್ ಹಾಗೂ ಶಿವಮೊಗ್ಗ ಕೇಂದ್ರ ವಲಯ ಸಂಪರ್ಕ ಮತ್ತು ಕಟ್ಟಡದ ಮುಖ್ಯ ಎಂಜಿನಿಯರ್ ಬಿವಿ ಜಗದೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಸಿದ್ದಲಿಂಗರೆಡ್ಡಿ, ಶಾಹಿ ಎಕ್ಸ್‌ಪೋರ್ಟ್‌ನ ಲಕ್ಷ್ಮಣ್, ಸೂಡಾ ಆಯುಕ್ತ ವಿಶ್ವನಾಥ್ ಆಗಮಿಸಲಿದ್ದಾರೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ನೌಕರ ಬಂಧುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿದೆ. ಎಲ್ಲರಿಗೂ ಕೂಡ ಅವರ ವಾಟ್ಸಪ್ ಗಳಿಗೆ ಕ್ಯೂಆರ್ ಕೋಡ್ ಅನ್ನು ಹಾಕಲಾಗುತ್ತಿದೆ. ಅದರಲ್ಲಿ ಎಲ್ಲ ಸಮಗ್ರ ಮಾಹಿತಿ ದೊರೆಯಲಿದೆ. ಯಾರಿಗೂ ಕೂಡ ಗೊಂದಲ ಆಗದಂತೆ ಮತ್ತು ಎಲ್ಲಿಯೂ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು