ಶಕ್ತಿ ಯೋಜನೆ: ಉತ್ತರ ಕನ್ನಡ ಜಿಲ್ಲೆಯಲ್ಲಿ 11.81 ಕೋಟಿ ಮಹಿಳೆಯರ ಪ್ರಯಾಣ

KannadaprabhaNewsNetwork | Published : May 17, 2025 1:26 AM
Follow Us

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 11.81 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ.

ಕಾರವಾರ: ರಾಜ್ಯದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 11.81 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ.

ಶಕ್ತಿ ಯೋಜನೆಯ ಜಾರಿಯಾದ ನಂತರ ಜಿಲ್ಲೆಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಉಚಿತ ಪ್ರಯಾಣದ ₹343.86 ಕೋಟಿ ಮೊತ್ತದ ಉಚಿತ ಟಿಕೆಟ್‌ಗಳನ್ನು ವಿತರಣೆ ಮಾಡಲಾಗಿದ್ದು, ಈ ಮೊತ್ತವು ರಸ್ತೆ ಸಾರಿಗೆ ಸಂಸ್ಥೆಗೆ ಪ್ರಮುಖ ಆದಾಯವಾಗಿದೆ.

ಜಿಲ್ಲೆಯಲ್ಲಿ ಉತ್ತರ ಕನ್ನಡ ಮತ್ತು ಹಳಿಯಾಳ-ದಾಂಡೇಲಿ ವಿಭಾಗಗಳಿದ್ದು, ಶಕ್ತಿ ಯೋಜನೆಯಡಿ ಇದುವರೆಗೆ ಉತ್ತರ ಕನ್ನಡ ವಿಭಾಗದಲ್ಲಿ 9.40 ಕೋಟಿ ಶಕ್ತಿ ಯೋಜನೆಯ ಫಲಾನುಭವಿಗಳ ಸಂಚಾರ ನಡೆದಿದೆ. ₹269.15 ಕೋಟಿ ಮೊತ್ತದ ಟಿಕೆಟ್ ವಿತರಣೆ ಹಾಗೂ ಹಳಿಯಾಳ-ದಾಂಡೇಲಿ ವಿಭಾಗದಲ್ಲಿ 2.40 ಕೋಟಿ ಫಲಾನುಭವಿಗಳಿಗೆ ₹74.70 ಕೋಟಿ ಮೊತ್ತದ ಉಚಿತ ಟಿಕೆಟ್ ವಿತರಣೆ ಮಾಡಲಾಗಿದೆ.

ಉಚಿತ ಪ್ರಯಾಣದ ಮೊದಲು ಸಾರಿಗೆಗಾಗಿ ಮಾಡುತ್ತಿದ್ದ ವೆಚ್ಚದ ಮೊತ್ತವು ವಿದ್ಯಾರ್ಥಿನಿಯರಿಗೆ ಕಾಲೇಜಿನ ಶುಲ್ಕ ಭರಿಸಲು, ಪಠ್ಯ ಪುಸ್ತಕ ಖರೀದಿಸಲು ನೆರವಾಗಿದ್ದರೆ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಖಾಸಗಿ ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ಕುಟುಂಬಗಳನ್ನು ಮತ್ತು ಪೋಷಕರು ತಮ್ಮ ಮಕ್ಕಳನ್ನು ನಿರಂತರವಾಗಿ ಭೇಟಿ ಮಾಡಿ ನೆಮ್ಮದಿಯ ಜೀವನ ಸಾಗಿಸಲು ನೆರವಾಗಿದೆ.

ನನಗೆ ಆರೋಗ್ಯ ಸರಿ ಇರುವುದಿಲ್ಲ. ಬಾಳೆಸರ ಗ್ರಾಮದಿಂದ ಚಿಕಿತ್ಸೆಗಾಗಿ ಶಿರಸಿಗೆ ಪದೇಪದೇ ಬರುತ್ತಿರುತ್ತೇನೆ. ಪ್ರಯಾಣದ ವೆಚ್ಚ ಉಚಿತವಿರುವುದರಿಂದ ನನಗೆ ಆಸ್ಪತ್ರೆಗೆ ತೆರಳಲು ಅನುಕೂಲವಾಗಿದೆ ಎನ್ನುತ್ತಾರೆ ಬಾಳೇಸರ ನವಾಬಿ ಅಖ್ತರ ಶೇಖ.

ಶಕ್ತಿ ಯೋಜನೆಯಿಂದಾಗಿ ಸಂಸ್ಥೆಯ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಜಿಲ್ಲಾ ವ್ಯಾಪ್ತಿಗೆ 84 ಹೊಸ ಬಸ್‌ಗಳು ಮಂಜೂರಾಗಿದೆ. ಶಕ್ತಿ ಯೋಜನೆಯಿಂದಾಗಿ ನಮ್ಮ ಸಂಸ್ಥೆಯ ಮೂಲಕ ಮಹಿಳಾ ಪ್ರಯಾಣಿಕರಿಗೆ, ಜಿಲ್ಲೆಯ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ ಎನ್ನುತ್ತಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಅಮ್ಮನವರ್.