ಕನ್ನಡಪ್ರಭ ವಾರ್ತೆ ಬೆಂಗಳೂರು
ಸುರಂಗ ರಸ್ತೆಯ ಕುರಿತು ರಾಜ್ಯ ಸರ್ಕಾರ ರಚಿಸಿದ್ದ ಹೆಗ್ಗರೆಡ್ಡಿ ನೇತೃತ್ವದ ಸಮಿತಿ ಕೇಳಲಾಗಿದ್ದ ಹೆಚ್ಚಿನ ಮಾಹಿತಿ ನೀಡಲಾಗಿದ್ದು, ಪರಿಶೀಲಿಸಿದ ಸಮಿತಿಯು ಯೋಜನೆ ಅನುಷ್ಠಾನಕ್ಕೆ ಸರ್ಕಾರಕ್ಕೆ ವರದಿ ನೀಡಿ ಶಿಫಾರಸು ಮಾಡಿದೆ ಎಂದು ಜಿಬಿಎ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ಬಿಸ್ಮೈಲ್ ನ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ಸ್ಪಷ್ಟಪಡಿಸಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡುವ ಮಹತ್ವಕಾಂಕ್ಷಿ ಯೋಜನೆ ಹಾಕಿಕೊಂಡಿದೆ. 1984ರಲ್ಲಿ ಬೆಂಗಳೂರಿನಲ್ಲಿ 34 ಲಕ್ಷ ಜನಸಂಖ್ಯೆ ಇತ್ತು. ಇದೀಗ 1.40 ಕೋಟಿ ಜನಸಂಖ್ಯೆಯಾಗಿದ್ದು, ಸುಮಾರು 1.20 ಲಕ್ಷ ವಾಹನಗಳಿವೆ. ಮೆಟ್ರೋ, ಬಿಎಂಟಿಸಿ ಸೇರಿದಂತೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಹಲವಾರು ಕ್ರಮ ಕೈಗೊಂಡಿದೆ. ಅದರೊಂದಿಗೆ ಖಾಸಗಿ ವಾಹನಗಳಿಗೂ ಅಗತ್ಯ ಸೌಲಭ್ಯ ನೀಡಬೇಕಾಗಿದೆ.
ಆ ನಿಟ್ಟಿನಲ್ಲಿ ಎಲಿವೇಟೆಡ್ ಕಾರಿಡಾರ್, ಡಬ್ಬಲ್ ಡೆಕ್ಕರ್ ಫ್ಲೈಓವರ್, ವೈಟ್‌ಟಾಪಿಂಗ್ ರಸ್ತೆಗಳ ನಿರ್ಮಾಣ ಸೇರಿದಂತೆ ಟನಲ್ ರಸ್ತೆ ನಿಮಾರ್ಣಕ್ಕೆ ಮುಂದಾಗಿದೆ. ಟನಲ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನೆ (ಡಿಪಿಆರ್) ಸಿದ್ಧಪಡಿಸಿ ಸರ್ಕಾರ ರಚನೆ ಮಾಡಿದ ಹೆಗ್ಗರೆಡ್ಡಿ ನೇತೃತ್ವದ ಸಮಿತಿ ಮುಂದೆ ಮಂಡಿಸಲಾಗಿತ್ತು. ಸಮಿತಿಯು ಸುಮಾರು 121 ಅಂಶಗಳ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ಪರಿಶೀಲನೆ ನಡೆಸಿರುವ ಸಮಿತಿಯು, ಯೋಜನೆ ಕಾರ್ಯಗತಗೊಳಿಸಬಹುದು ಎಂಬ ಶಿಫಾರಸು ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ ಎಂದು ವಿವರಿಸಿದರು.ಹೆಗ್ಗರೆಡ್ಡಿ ಸಮಿತಿಯು ಸುರಂಗ ರಸ್ತೆಯ ಡಿಪಿಆರ್‌ನಲ್ಲಿ 121 ನ್ಯೂನತೆ ಇವೆ ಎಂದು ಹೇಳಿಲ್ಲ. 121 ಅಂಶಗಳ ಕುರಿತು ಹೆಚ್ಚಿನ ಮಾಹಿತಿ ಬೇಕಿದೆ ಎಂದು ಹೇಳಿತ್ತು. ಪೂರಕ ಮಾಹಿತಿ ನೀಡಿದ ಬಳಿಕ ಸಮಿತಿಯೇ ಯೋಜನೆ ಅನುಷ್ಠಾನ ಮಾಡಬಹುದೆಂಬ ವರದಿಯನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದರು.
ತರಾತುರಿಯಲ್ಲಿ ಸುರಂಗ ರಸ್ತೆ ಯೋಜನೆ ಕೈಗೊಳ್ಳುತ್ತಿಲ್ಲ. 2023-24ರಲ್ಲಿ ಸುರಂಗ ರಸ್ತೆ ಯೋಜನೆ ಬಗ್ಗೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗಿತ್ತು. ತಜ್ಞರ ಅಭಿಪ್ರಾಯ, ಸಲಹೆ ಪಡೆಯಲಾಗಿದೆ. ಕಳೆದ ಎರಡು ವರ್ಷದಲ್ಲಿ ದೇಶ ಹಾಗೂ ವಿದೇಶದ ವಿವಿಧ ನಗರಗಳಲ್ಲಿ ಇರುವ ಸುರಂಗ ರಸ್ತೆಗಳಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.