1.60 ಕೋಟಿ ಜನರಿಗೆ ಸಮಾನತೆ ನೀಡಲು ಸರ್ಕಾರ ವಿಫಲ: ಎಚ್.ಗಂಗರಾಜು

KannadaprabhaNewsNetwork | Published : Dec 4, 2024 12:33 AM

ಸಾರಾಂಶ

ಸಮಾಜದಲ್ಲಿನ ಅಸಮತೋಲನ ಹೋಗಲಾಡಿಸಲು 2013-14ನೇ ಸಾಲಿನಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಜಾರಿಗೊಳಿಸಿದ್ದರೂ ಯೋಜನೆಯ ನೋಡಲ್ ಅಧಿಕಾರಿಯಾಗಿದ್ದ ಈ. ವೆಂಕಟಯ್ಯ ಅವರ 10-12 ವರ್ಷಗಳ ನಿರ್ಲಕ್ಷ್ಯತೆಯಿಂದಾಗಿ ಯೋಜನೆಗೆ ಮೀಸಲಿರಿಸಿದ್ದ 1005 ಕೋಟಿ ರು.ಅನುದಾನ ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಳಕೆಯಾಗದೇ ವಾಪಸ್‌ ಪಡೆದಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ 1.60 ಕೋಟಿ ಜನರಿಗೆ ಸಮಾನತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸಮಾಜದಲ್ಲಿನ ಅಸಮತೋಲನ ಹೋಗಲಾಡಿಸಲು ಸರ್ಕಾರ ಮುಂದಾಗಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್‌ ರಾಜ್ಯಾಧ್ಯಕ್ಷ ಎಚ್.ಗಂಗರಾಜು ಹನಕೆರೆ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿನ ಅಸಮತೋಲನ ಹೋಗಲಾಡಿಸಲು 2013-14ನೇ ಸಾಲಿನಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಜಾರಿಗೊಳಿಸಿದ್ದರೂ ಯೋಜನೆಯ ನೋಡಲ್ ಅಧಿಕಾರಿಯಾಗಿದ್ದ ಈ. ವೆಂಕಟಯ್ಯ ಅವರ 10-12 ವರ್ಷಗಳ ನಿರ್ಲಕ್ಷ್ಯತೆಯಿಂದಾಗಿ ಯೋಜನೆಗೆ ಮೀಸಲಿರಿಸಿದ್ದ 1005 ಕೋಟಿ ರು.ಅನುದಾನ ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಳಕೆಯಾಗದೇ ವಾಪಸ್‌ ಪಡೆದಂತಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸ್ತಿರಾಸ್ತಿ, ಚರಾಸ್ತಿಗಳನ್ನು ಹೊಂದಿರದ ಸಮುದಾಯದ ಜನರ ಸಂಖ್ಯೆ 1.60 ಕೋಟಿ ಇದ್ದು, ನಮಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಹಕ್ಕು ಅವಕಾಶಗಳನ್ನು ವಂಚಿಸಲಾಗಿದೆ. ನಮ್ಮ ಸಮುದಾಯದ ಸ್ಥಿತಿ ಶೋಚನೀಯ ಸ್ಥಿತಿ ತಲುಪುತ್ತಿದೆ ಎಂದರು.

2024-25 ಸಾಲಿನ ಬಜೆಟ್‌ನಲ್ಲಿ ಸಮುದಾಯದ ಒಳಿತಿಗಾಗಿ 2ಲಕ್ಷ ಕೋಟಿ ರು. ವಿಶೇಷ ಬಜೆಟ್ ಮಂಡನೆ ಮಾಡಿಸಿ ಸಮಸಮಾಜ, ಸಮಪಾಲು, ಸಮಬಾಳು ಅಡಿಯಲ್ಲಿ ಸಂವಿಧಾನದ ಆಶಯಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಡಿ.ಎಸ್‌ಎಸ್ ಭೀಮವಾದ ರಾಜ್ಯಾಧ್ಯಕ್ಷ ಚನ್ನಕೇಶವ, ಬುದ್ಧ ಭಾರತ ಫೌಂಡೇಶನ್ ಅಧ್ಯಕ್ಷ ಜೆ.ರಾಮಯ್ಯ, ದಸಂಸ ರಾಜ್ಯ ಸಂಚಾಲಕ ಎಂ.ವಿ.ಕೃಷ್ಣ, ಸ್ವಾಭಿಮಾನಿ ಸಮ ಸಮಾಜದ ರಾಜ್ಯಾಧ್ಯಕ್ಷ ಎಚ್.ಎನ.ನರಸಿಂಹಮೂರ್ತಿ, ಅಹಿಂದ ರಾಜ್ಯ ಸಂಘಟನಾ ಕಾರ್ಯದರ್ಶಿ ಲೋಕೇಶ್, ಅಮ್ಜದ್ ಪಾಷಾ, ಮುಕುಂದ ಇದ್ದರು.

ಕೋಡಿಮಾರನಹಳ್ಳಿಗೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕೋಡಿಮಾರನಹಳ್ಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಲಕ್ಷ್ಮೀದೇವಿ ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ಎಲ್.ದೇವರಾಜು ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಬೆಳಗ್ಗೆ 11 ಗಂಟೆಗೆ ಗ್ರಾಮಕ್ಕೆಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲಾ, ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಜರಿರುವರು ಎಂದರು.

ಗ್ರಾಮದ ಜನರ ಅನುಕೂಲಕ್ಕಾಗಿ ಲಕ್ಷ್ಮೀದೇವಿ ಸಮುದಾಯ ಭವನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಜೊತೆಗೆ ಗ್ರಾಮದೇವತೆ ಲಕ್ಷ್ಮೀದೇವಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವರು ಎಂದರು.

ಈ ವೇಳೆ ಮುಖಂಡರಾದ ಕೃಷ್ಣೇಗೌಡ, ಸುರೇಶ್, ಚಿಕ್ಕೇಗೌಡ, ಅನುಸೂಯ ಇದ್ದರು.

Share this article