ಕಳಪೆ ರಸ್ತೆ ಕಾಮಗಾರಿ ವಿರುದ್ಧ ಕ್ರಮ ಜರುಗಿಸಿ: ರಂಗಪ್ಪ

KannadaprabhaNewsNetwork | Published : Dec 4, 2024 12:33 AM

ಸಾರಾಂಶ

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹುಣಸೆಹಳ್ಳಿ ಕೈಮರದಿಂದ ಹನಗವಾಡಿ ಗ್ರಾಮದ ಬಸ್ ನಿಲ್ದಾಣವರೆಗೆ ರಾಜ್ಯ ಹೆದ್ದಾರಿ 115, ಕೆ.ಕೆ. ರಸ್ತೆ ಕಾಮಗಾರಿ (ದಾವಣಗೆರೆ- ಶಿವಮೊಗ್ಗ ಜಿಲ್ಲೆ ಗಡಿಭಾಗದಲ್ಲಿ) ನಡೆಯುತ್ತಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ನಿಲ್ಲಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಲ್. ರಂಗಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಆಗ್ರಹಿಸಿದರು.

- ಅಡಕೆ ತ್ಯಾಜ್ಯ ತೆರವಾಗಿಲ್ಲ, ಸುರಕ್ಷಿತ ಸಂಚಾರ ನಾಮಫಲಕ ಅಳವಡಿಸಿಲ್ಲ: ಆರೋಪ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹುಣಸೆಹಳ್ಳಿ ಕೈಮರದಿಂದ ಹನಗವಾಡಿ ಗ್ರಾಮದ ಬಸ್ ನಿಲ್ದಾಣವರೆಗೆ ರಾಜ್ಯ ಹೆದ್ದಾರಿ 115, ಕೆ.ಕೆ. ರಸ್ತೆ ಕಾಮಗಾರಿ (ದಾವಣಗೆರೆ- ಶಿವಮೊಗ್ಗ ಜಿಲ್ಲೆ ಗಡಿಭಾಗದಲ್ಲಿ) ನಡೆಯುತ್ತಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ನಿಲ್ಲಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಲ್. ರಂಗಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಆಗ್ರಹಿಸಿದರು.

ಸ್ಥಳದಲ್ಲಿ ರಂಗಪ್ಪ ಮಾತನಾಡಿ, ಕಾಮಗಾರಿ ನಡೆಯುವ ಸ್ಥಳದಲ್ಲಿ ವಾಹನಗಳ ಸುರಕ್ಷಿತ ಸಂಚಾರ ನಾಮಫಲಕ ಹಾಕಿಲ್ಲ. ಯಾವುದೇ ರೀತಿಯ ಸುರಕ್ಷಿತಾ ಕ್ರಮಗಳನ್ನೂ ಕೈಗೊಳ್ಳದೇ, ನಿಯಮ ಉಲ್ಲಂಘಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಎಂಜಿನಿಯರ್‌ಗಳು ಕಾಮಗಾರಿ ನಡೆಯುವ ಸ್ಥಳದಲ್ಲಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದರು.

ಸದರಿ ರಸ್ತೆ ಕಾಮಗಾರಿಗೆ ₹20 ಕೋಟಿ ವೆಚ್ಚದ್ದಾಗಿದೆ. ಈ ಕಾಮಗಾರಿ ಪ್ರಾರಂಭವಾಗುವ ಮುನ್ನ ಸ್ಥಳೀಯ ಗ್ರಾ.ಪಂ.ಗಳ ನೆರವು ಪಡೆದು ರಸ್ತೆ ಬದಿಯ ಅಡಕೆ ಸಿಪ್ಪೆ ತ್ಯಾಜ್ಯ ತೆರವುಗೊಳಿಸಬೇಕಾಗಿತ್ತು. ರಸ್ತೆ ಅಗಲೀಕರಣ ಮಾಡುತ್ತಿರುವುದರಿಂದ ಕೆಲವು ಭಾಗದಲ್ಲಿ ವಿದ್ಯುತ್ ಕಂಬಗಳು ರಸ್ತೆಯಲ್ಲಿಯೇ ಉಳಿಯುತ್ತಿವೆ. ವಿದ್ಯುತ್ ಇಲಾಖೆ ನೆರವು ಪಡೆದು ಕಂಬಗಳನ್ನು ರಸ್ತೆ ಪಕ್ಕಕ್ಕೆ ಸ್ಥಳಾಂತರಿಸಬೇಕಿತ್ತು. ಆದರೆ ಈಗ ಯಾವುದನ್ನು ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ರಸ್ತೆ ಮೇಲಿದ್ದ ಹಳೆಯ ಡಾಂಬರ್ ಕಿತ್ತು ನೇರವಾಗಿ ರಸ್ತೆಗೆ ವೆಟ್ ಮಿಕ್ಸ್‌ ಹಾಕುತ್ತಿದ್ದಾರೆ. ಇದನ್ನೂ ಸಹ ತೆಳುವಾಗಿ ಹಾಕುತ್ತಿದ್ದಾರೆ. ಗುತ್ತಿಗೆದಾರರು ನಿಯಮ ಪಾಲಿಸದೇ ಕಾಮಗಾರಿ ನಡೆಸುತ್ತಿರುವುದರಿಂದ ಇಲ್ಲಿ ಸಂಚಾರ ಮಾಡುತ್ತಿರುವ ಸಾಕಷ್ಟು ಬೈಕ್ ಮತ್ತಿತರೆ ವಾಹನಗಳ ಸವಾರರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಸ್ತೆಯ ಮೇಲಿದ್ದ ಹಳೆಯ ಡಾಂಬರ್ ಕಿತ್ತು ಬೇರೆಡೆಗೆ ಸಾಗಿಸಿಲ್ಲ. ರಸ್ತೆಯ ಪಕ್ಕಕ್ಕೆ ರಸ್ತೆ ಅವಶೇಷಗಳನ್ನು ಹಾಕುತ್ತಿದ್ದು, ಈ ಡಾಂಬರು ಮಿಶ್ರಿತಮಣ್ಣು ರಸ್ತೆ ಪಕ್ಕದ ಸಾಲುಮರಗಳಿಗೆ ಮಾರಕವಾಗಿದೆ. ಆದ್ದರಿಂದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ, ಗುಣಮಟ್ಟದ ಕಾಮಗಾರಿ ಹಾಗೂ ಮರಗಳ ರಕ್ಷಣೆಗೆ ಒತ್ತು ನೀಡುವಂತೆ ಕೆ.ಎಲ್.ರಂಗಪ್ಪ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಚ್.ಉಮೇಶ್, ಕೆ..ಎಸ್.ಹಾಲೇಶಪ್ಪ, ಬಿ.ಎಂ.ವಿಶ್ವನಾಥ್, ಇತರರು ಇದ್ದರು.

- - - -3ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯಲ್ಲಿ ಕಳಪೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ, ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ತಾಪಂ ಮಾಜಿ ಅಧ್ಯಕ್ಷ ಕೆ.ಎಲ್.ರಂಗಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದರು.

Share this article