ಕೆರೆ ತುಂಬಿಸುವ ಯೋಜನೆ: ಪರಿಹಾರ ನೀಡಲು ಠೇ‍ವಣಿ ಇಡದ ಸರ್ಕಾರ

KannadaprabhaNewsNetwork |  
Published : Nov 07, 2025, 02:45 AM IST
ಹೂವಿನಹಡಗಲಿ ತಾಲೂಕಿನ ತಳಕಲ್ಲು, ಮಹಾಜನದಹಳ್ಳಿ ರೈತರ ಭೂಮಿ ಕೂಡ್ಲಿಗಿ ಕೆರೆ ತುಂಬಿಸುವ ಯೋಜನೆಗೆ ಭೂಸ್ವಾಧೀನವಾಗಿದ್ದು ಪರಿಹಾರ ವಿತರಿಸಬೇಕೆಂದು ಸಿಂಟಾಲೂರು ಏತ ನೀರಾವರಿ ಯೋಜನೆ ಇಇ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗಾಗಿ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ 2 ಹಂತದಲ್ಲಿ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದ್ದರೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಸರ್ಕಾರ ನೀರಾವರಿ ನಿಗಮದಲ್ಲಿ ಶೇ. 50ರಷ್ಟು ಹಣವನ್ನು ಠೇವಣಿಯೇ ಮಾಡಿಲ್ಲ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗಾಗಿ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ 2 ಹಂತದಲ್ಲಿ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದ್ದರೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಸರ್ಕಾರ ನೀರಾವರಿ ನಿಗಮದಲ್ಲಿ ಶೇ. 50ರಷ್ಟು ಹಣವನ್ನು ಠೇವಣಿಯೇ ಮಾಡಿಲ್ಲ.

ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸಲು ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕಿನ 40ಕ್ಕೂ ಅಧಿಕ ಹಳ್ಳಿಗಳ ರೈತರ ಜಮೀನುಗಳಲ್ಲಿ ಪೈಪ್‌ಲೈನ್‌ ಹಾಯ್ದು ಹೋಗಿದೆ. ಇದಕ್ಕಾಗಿ 164 ಎಕರೆ 81 ಸೆಂಟ್ಸ್‌ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಅದರಲ್ಲಿ ಈಗಾಗಲೇ ಹೂವಿನಹಡಗಲಿ ತಾಲೂಕಿನ 45 ಎಕರೆಗೆ ₹6,83,17,507 ಪರಿಹಾರ ವಿತರಣೆಯಾಗಿದೆ. ಉಳಿದ 120 ಎಕರೆ ಜಮೀನು ಕಳೆದುಕೊಂಡಿರುವ ರೈತರಿಗೆ ಪರಿಹಾರ ವಿತರಣೆ ಮಾಡಲು ನೀರಾವರಿ ನಿಗಮದಲ್ಲಿ ಶೇ. 50ರಷ್ಟು ಹಣ ಠೇವಣಿ ಮಾಡಿಲ್ಲ. ಕಾಮಗಾರಿಗೂ ಮುನ್ನವೇ ಸರ್ಕಾರ ಪರಿಹಾರ ನೀಡಬೇಕಿತ್ತು. ರೈತರಿಗೆ ಪರಿಹಾರ ನೀಡದೇ ಭೂ ಸ್ವಾಧೀನ ಕಾಯ್ದೆ ಗಾಳಿಗೆ ತೂರಿದೆ.

ಸರ್ಕಾರದ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆ ಮಾಡದೇ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನ. 9ರಂದು ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಶೇಷ ಭೂ ಸ್ವಾಧೀನಾಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ರೈತರ ಪರಿಹಾರ ನೀಡುವ ಕಡತಗಳು ಪದೇ ಪದೇ ಅಸಿಂಧುವಾಗುತ್ತಿವೆ. ಇದರಿಂದ ರೈತರು ಪರಿಹಾರಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ. ಇಷ್ಟಾದರೂ ಸರ್ಕಾರ ಒಬ್ಬ ಅಧಿಕಾರಿಯನ್ನು ನೇಮಿಸಲು ಮನಸ್ಸು ಮಾಡುತ್ತಿಲ್ಲ. ಈ ವ್ಯವಸ್ಥೆ ರೈತರನ್ನು ಮತ್ತಷ್ಟು ರೋಸಿ ಹೋಗುವಂತೆ ಮಾಡಿದೆ.

ಈ ಕೆರೆ ತುಂಬಿಸುವ ಯೋಜನೆಗೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು 11 (1) ನೋಟಿಸ್‌ ಜಾರಿ ಮಾಡಲಾಗಿದೆ. ಇನ್ನು 30 ಹಳ್ಳಿಗಳ ರೈತರ 120 ಎಕರೆ ಜಮೀನಿಗೆ ಪರಿಹಾರ ನೀಡಲು ಜಂಟಿ ಸರ್ವೇ (ಜೆಎಂಸಿ) ವಿಳಂಬವಾಗಿದ್ದದೆ, ಧಾರವಾಡದ ನೀರಾವರಿ ನಿಗಮದಲ್ಲಿ ಶೇ. 50ರಷ್ಟು ಹಣ ಠೇವಣಿ ಮಾಡಿಲ್ಲ. ಜತೆಗೆ ಅಂತಿಮ ಅಧಿಸೂಚನೆ (ಗೆಜೆಟ್‌) ಹೊರಡಿಸಿದ ಬಳಿಕ ಉಳಿದ ಶೇ. 50ರಷ್ಟು ಹಣ ಠೇವಣಿ ಮಾಡಬೇಕು. ಸರ್ಕಾರ ಪರಿಹಾರ ನೀಡಲು ವಿಳಂಬವಾಗುತ್ತಿದೆ. ರೈತರ ಪರಿಹಾರದ ಕಡತಗಳು ಪದೇ ಪದೇ ಅಸಿಂಧು (ವಿಸೆಟ್‌) ಆಗುತ್ತಿವೆ.

ವಿವಿಧ ಹಂತದಲ್ಲಿವೆ: ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ತುಂಬಿಸುವ ಯೋಜನೆಗಾಗಿ ರೈತರಿಂದ 164 ಎಕರೆ 81 ಸೆಂಟ್ಸ್‌ ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿದೆ. ಇದರಲ್ಲಿ 45 ಎಕರೆಗೆ ಪರಿಹಾರ ನೀಡಲಾಗಿದೆ. ಉಳಿದ 120 ಎಕರೆ ಭೂಮಿಗೆ ಪರಿಹಾರ ನೀಡಲು ವಿವಿಧ ಹಂತದಲ್ಲಿವೆ ಎಂದು ಹೂವಿನಹಡಗಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಎಸ್‌ಡಿಎ ಡಿ. ಮೆಹಬೂಬ್‌ ಬಾಷಾ ಹೇಳಿದರು.

ಕೂಡ್ಲಿಗಿ ಕೆರೆ ತುಂಬಿಸುವ ಯೋಜನೆಗೆ ಚಿಗಟೇರಿ ಹೋಬಳಿಯ ನಂದಿಬೇವೂರು ಕಂದಾಯ ಗ್ರಾಮಕ್ಕೆ ಸೇರಿದ, ಭೂಮಿ ಕಳೆದುಕೊಂಡ ರೈತರ ಹೆಸರು ಕೈ ಬಿಟ್ಟಿದ್ದಾರೆ. ಈ ವರೆಗೂ ಜಂಟಿ ಸರ್ವೆವೂ ಆಗಿಲ್ಲ. ಪರಿಹಾರವೂ ಇಲ್ಲ. ಆದರೆ ನಮ್ಮ ಜಮೀನಿನಲ್ಲಿ ಪೈಪ್‌ಲೈನ್‌ ಹಾಕಿದ್ದಾರೆ. ಸೂಕ್ತ ಪರಿಹಾರ ನೀಡದಿದ್ದರೆ ಮುಖ್ಯಮಂತ್ರಿ ಮುಂದೆಯೇ ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ಮಹಾಜನದಹಳ್ಳಿ, ತಳಕಲ್ಲು ಗ್ರಾಮಸ್ಥರು ಹೇಳಿದರು.

ಪರಿಹಾರಕ್ಕೆ ಒತ್ತಾಯ: ಕೂಡ್ಲಿಗಿ ತಾಲೂಕಿನ ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್‌ ಕಾಮಗಾರಿಗೆ, ರೈತರಿಂದ ಭೂ ಸ್ವಾಧೀನ ಮಾಡಿಕೊಂಡ ಭೂಮಿಗೆ, ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಮನವಿ ಸಲ್ಲಿಸಿದ್ದಾರೆ.

ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತರಾದ ಎಚ್‌.ಎಸ್‌. ಹೇಮಂತ್‌, ಕೆ. ಚಂದ್ರಶೇಖರ, ತಾಲೂಕಿನ ರಾಜವಾಳ ಗ್ರಾಮದ ಹತ್ತಿರದ ತುಂಗಭದ್ರಾ ನದಿಯಿಂದ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ, ನೀರು ತುಂಬಿಸುವ ಯೋಜನೆಯ ಕಾಮಗಾರಿಗಾಗಿ ಹರಪನಹಳ್ಳಿ, ತಾಲೂಕಿನ ಚಿಗಟೇರಿ ಹೋಬಳಿಯ ನಂದಿಬೇವೂರು ಕಂದಾಯ ಗ್ರಾಮಕ್ಕೆ ಸೇರಿದ 18ರಿಂದ 20 ರೈತರ 7 ಎಕರೆ ಜಮೀನು ಭೂ ಸ್ವಾ ಸ್ವಾಧೀನ ಮಾಡಿಕೊಂಡಿದ್ದಾರೆ. ಆದರೆ, ಕೆಲ ರೈತರಿಗೆ ಪರಿಹಾರ ನೀಡಿದ್ದಾರೆ. ಕಚೇರಿಗೆ ಅಲೆದು ಸುಸ್ತಾಗಿದ್ದೇವೆ. ಈ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಭೂ ಪರಿಹಾರ ಕುರಿತು ಅಧಿಕಾರಿ ಮತ್ತು ಗುತ್ತಿಗೆದಾರರನ್ನು ಸಂಪರ್ಕಿಸಿದಾಗ, ಸರ್ಕಾರದಿಂದ ನಮಗೆ ಹಣ ಬಿಡುಗಡೆಯಾಗಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.

ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕೂಡ್ಲಿಗಿ ಕೆರೆ ತುಂಬಿಸುವ ಯೋಜನೆ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆ. ಕಿರಣ, ಎ. ಈರಪ್ಪ, ಟಿ. ಬಸವರಾಜ, ಕೆ. ಮಲ್ಲಿಕಾರ್ಜುನ, ಕರಿಯಪ್ಪ, ನಾಗಪ್ಪ, ಶಿವಮೂರ್ತಿ, ಹಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ