ಆನೆ ದಾಳಿಗೆ ನಾಲ್ಕು ಬಲಿಯಾದರೂ ಪ್ರತಿಕ್ರಿಯಿಸದ ಸರ್ಕಾರ

KannadaprabhaNewsNetwork |  
Published : Jul 25, 2025, 12:30 AM IST
೨೪ಬಿಹೆಚ್‌ಆರ್ ೬: ಜೀವರಾಜ್ | Kannada Prabha

ಸಾರಾಂಶ

ಬಾಳೆಹೊನ್ನೂರು, ಶೃಂಗೇರಿ ಕ್ಷೇತ್ರದಲ್ಲಿ ನಾಲ್ಕು ಜನರನ್ನು ಆನೆ ಬಲಿ ತೆಗೆದುಕೊಂಡರೂ ಸಹ ರಾಜ್ಯ ಸರ್ಕಾರ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಶಾಸಕರು ಏನನ್ನೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಆಕ್ರೋಶ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶೃಂಗೇರಿ ಕ್ಷೇತ್ರದಲ್ಲಿ ನಾಲ್ಕು ಜನರನ್ನು ಆನೆ ಬಲಿ ತೆಗೆದುಕೊಂಡರೂ ಸಹ ರಾಜ್ಯ ಸರ್ಕಾರ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಶಾಸಕರು ಏನನ್ನೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು, ಅಧಿಕಾರಿಗಳು ಈಗಾಗಲೇ ₹15 ಲಕ್ಷದ ಚೆಕ್‌ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದು, ಅದನ್ನು ಮೃತಪಟ್ಟ ವರಿಗೆ ವಿತರಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಭಾವನೆ ರಹಿತ ಸರ್ಕಾರ ಇದಾಗಿದೆ ಎಂದು ಗುರುವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಚಿವ ಈಶ್ವರ್ ಖಂಡ್ರೆಯವರು ಏನು ಮಾತನಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗದ ಪರಿಸ್ಥಿತಿ. ಒತ್ತುವರಿ ಖುಲ್ಲಾ, ಹುಲಿ ಉಗುರು ಎಂದೆಲ್ಲಾ ಹೇಳುತ್ತಿದ್ದಾರೆ. ಖಂಡ್ರೆ ಅವರು ಮಾತನಾಡುತ್ತಿರುವುದು ಅವರ ಮಾತಲ್ಲ. ಅದು ಐಎಫ್‌ಎಸ್ ಅಧಿಕಾರಿಗಳ ಮಾತು. ಅಧಿಕಾರಿಗಳು ಹೇಳುವುದನ್ನು ಇವರು ಜನರಿಗೆ ಹೇಳುತ್ತಿದ್ದಾರೆ. ಇಂತಹದ್ದನ್ನು ಹೇಳಲು ಮಂತ್ರಿಗಳು ಬೇಕಿಲ್ಲ. ಮಂತ್ರಿಯಾಗಿ ಅಧಿಕಾರಿಗಳನ್ನು ಅವರು ನಿಭಾಯಿಸಬೇಕು. ಆದರೆ ಇಲ್ಲಿ ಅಧಿಕಾರಿಗಳೇ ಖಂಡ್ರೆಯವರನ್ನು ನಿಭಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅರಣ್ಯ ಸಚಿವರು ದನ ಕರು, ಕುರಿಗಳು ಅರಣ್ಯದಲ್ಲಿ ಮೇವು ಅರಸಬಾರದು ಎಂಬ ಬಾಲಿಶ ಹೇಳಿಕೆ ನೀಡಿದ್ದು, ಹಾಗಾದರೆ ಇವುಗಳು ಎಲ್ಲಿ ಮೇಯಬೇಕು? ಕಾಡು ಮತ್ತು ಮನುಷ್ಯನಿಗೆ ಮಲೆನಾಡಿನಲ್ಲಿ ಅವಿನಾಭಾವ ಸಂಬಂಧವಿದೆ. ನಾವಿಲ್ಲದೆ ಕಾಡಿಲ್ಲ, ಕಾಡಿಲ್ಲದೆ ನಾವಿಲ್ಲ ಎಂಬುದನ್ನು ಸಚಿವರು ಅರಿಯಬೇಕು. ಮನುಷ್ಯರು ಎಲ್ಲಿದ್ದಾರೋ ಅಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಿಲ್ಲ. ಬೆಂಕಿ ಬಿದ್ದಲ್ಲಿ ಮನುಷ್ಯರು ಇರಲಿಲ್ಲ. ಯಾಕೆಂದರೆ ಮಲೆನಾಡಿನ ಮನುಷ್ಯರು ಕಾಡನ್ನು ದೇವರು ಎಂದು ಪೂಜೆ ಮಾಡುತ್ತಾರೆ. ಕಾಡಿಗೆ ಬೆಂಕಿ ಹಚ್ಚಲು ಸಾಧ್ಯವೇ ಇಲ್ಲ.

ಮಲೆನಾಡಿನಲ್ಲಿ ಬೆಳೆ ಬೆಳೆದರೆ ಮಾತ್ರ ನಗರವಾಸಿಗಳು ಊಟ ಮಾಡಲು ಸಾಧ್ಯ. ಸಚಿವರು, ಅಧಿಕಾರಿಗಳು ದುಡ್ಡನ್ನು ತಿನ್ನಲು ಸಾಧ್ಯವಿಲ್ಲ. ರೈತ ಬೆಳೆದ ಅನ್ನ ಮಾತ್ರ ತಿನ್ನಲು ಸಾಧ್ಯ. ಅನ್ನ ಬೆಳೆಯುವ ರೈತನಿಗೆ ತೊಂದರೆ ಮಾಡಬಾರದು. ಬಾಳೆಹೊನ್ನೂರಿನ ಐಎಫ್‌ಎಸ್ ಅಧಿಕಾರಿಯೊಬ್ಬರು ರೈತರಿಗೆ ಐಬೆಕ್ಸ್ ಬೇಲಿ ತೆಗೆಯಲು ಒತ್ತಡ ಹಾಕುತ್ತಿದ್ದಾರೆ. ಐಬೆಕ್ಸ್‌ ನಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ ಎಂದರೆ, ರೈತರ ಬದುಕು ಕಟ್ಟಿಕೊಡಲು ಅಧಿಕಾರಿಗಳು ವ್ಯವಸ್ಥೆ ಮಾಡಿ ದರೆ ನಾವು ಐಬೆಕ್ಸ್ ಬೇಲಿ ತೆಗೆಯಲು ಸಿದ್ಧ. ಮನುಷ್ಯರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಇತ್ತೀಚಿಗೆ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ನಮ್ಮ ಬೆಳೆ ಹಾಳು ಮಾಡಲು ಪ್ರಾಣಿಗಳು ಬಂದಾಗ ನಾವು ಪ್ರಾಣಿ ಹೊಡೆದರೆ ತಪ್ಪೇನು?

ಮಲೆನಾಡಿಗೆ ಮಾತ್ರ ಆನೆ ಬಂದಿಲ್ಲ. ಮಂಡ್ಯ, ಕೋಲಾರ, ಬೆಂಗಳೂರಿಗೂ ಆನೆ ಬಂದಿದೆ. ಮುಂದೆ ದೇಶದ ಚಿತ್ರಣ ಬದಲಾಗಬಾರದು ಎಂದರೆ ಎಲ್ಲವೂ ಮಿತಿಯಲ್ಲಿರಬೇಕು. ಜೀವವೈವಿಧ್ಯದಲ್ಲಿ ಮನುಷ್ಯನೂ ಒಂದು ಅಂಗ. ನಮಗೂ ಬದುಕಲು ಹಕ್ಕಿದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ಕಾಡುಪ್ರಾಣಿಗಳು ನಮ್ಮ ಬೆಳೆ ಹಾಳು ಮಾಡಲು ಬಂದಾಗ ಅದನ್ನು ರಕ್ಷಿಸಲು ಸರ್ಕಾರ ಅನುಮತಿ ಕೊಡಬೇಕು. ಅವೈಜ್ಞಾನಿಕವಾಗಿ ಸರ್ಕಾರ ತೀರ್ಮಾನಿಸಬಾರದು. ಆನೆಗಳು ಇಂದು ನಮ್ಮ ಜಾಗಕ್ಕೆ ಬಂದಿದ್ದು, ಸಚಿವರು, ಶಾಸಕರು ಅದನ್ನು ಹಗ್ಗ ಹಾಕಿಯಾದರೂ ಹಿಡಿದುಕೊಂಡು ಹೋಗಲಿ. ಆಗ ನಿಮ್ಮ ಅರಣ್ಯದ ಜಾಗಕ್ಕೆ ನಮ್ಮ ದನ ಕರು ಬರಲ್ಲ. ಆನೆಗಳು ನಾಡಿಗೆ ಬರದಂತೆ ತಡೆಯಲು ಆಗದಿದ್ದರೆ ಅರಣ್ಯಕ್ಕೆ ದನ ಕರುಗಳು ಮುಕ್ತವಾಗಿ ಹೋಗಬಹುದು. ಆನೆಗಳು ತುಳಿದು ಸಾಯಿಸಿ ದ್ದಕ್ಕೆ ಯಾರ ಮೇಲೆ ಎಫ್‌ಐಆರ್ ಹಾಕಬೇಕು ಎಂದು ಶಾಸಕರು, ಸಚಿವರು ತಿಳಿಸಬೇಕು ಎಂದರು.೨೪ಬಿಹೆಚ್‌ಆರ್ ೬: ಜೀವರಾಜ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ