ಆನೆ ದಾಳಿಗೆ ಮಹಿಳೆ ಸಾವು: ಸಾರ್ವಜನಿಕರಿಂದ ರಸ್ತೆ ತಡೆ, ಪ್ರತಿಭಟನೆ

KannadaprabhaNewsNetwork |  
Published : Jul 25, 2025, 12:30 AM IST
೨೪ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಅರಣ್ಯ ಇಲಾಖೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ವೇದಿಕೆಯ ಸದಸ್ಯ ಅಭಿಷೇಕ್ ಹೊಸಳ್ಳಿ ಮಾತನಾಡಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಬನ್ನೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಟ್ಟಣದ ಅರಣ್ಯ ಇಲಾಖೆ ಮುಂಭಾಗ ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು, ಮುಖಂಡರು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿ ಮುಖ್ಯರಸ್ತೆ ತಡೆ ನಡೆಸುವ ಮೂಲಕ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು.

ಆನೆ ಹಿಡಿಯಲು ಆ.25 ಗಡುವು । ಮೃತ ಕುಟುಂಬಕ್ಕೆ ₹25 ಲಕ್ಷ ಪರಿಹಾರಕ್ಕೆ ಒತ್ತಾಯ । ಪ್ರತಿಭಟನೆಗೆ ಸರ್ವ ಪಕ್ಷಗಳ ಬೆಂಬಲ । ನಿಖಿಲ್ ಕುಮಾರಸ್ವಾಮಿ ಸಾಥ್ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬನ್ನೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಟ್ಟಣದ ಅರಣ್ಯ ಇಲಾಖೆ ಮುಂಭಾಗ ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು, ಮುಖಂಡರು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿ ಮುಖ್ಯರಸ್ತೆ ತಡೆ ನಡೆಸುವ ಮೂಲಕ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು.ಬನ್ನೂರು ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿಂದಲೂ 2 ಕಾಡಾನೆಗಳು ತೋಟಗಳಿಗೆ ಲಗ್ಗೆಯಿಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಗಮನ ಸೆಳೆದರೂ ಸ್ಪಂದಿಸಿಲ್ಲ. ನಿರ್ಲಕ್ಷ್ಯದಿಂದ ಇಂದು ಅಮಾಯಕ ಮಹಿಳೆ ಸಾವಾಗಿದೆ. ಸಾವಿಗೆ ಸೂಕ್ತ ನ್ಯಾಯ ದೊರೆಯಬೇಕು. ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕು ಎಂದು ಪಟ್ಟು ಹಿಡಿದು ರಸ್ತೆ ತಡೆ ನಡೆಸಿದರು.ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು, ಮುಖಂಡರು ಪಕ್ಷ ಬೇಧ ಮರೆತು ಮುಖ್ಯರಸ್ತೆಯನ್ನು ಒಂದು ಗಂಟೆಗೂ ಅಧಿಕ ಕಾಲ ತಡೆದರು. ಇದರಿಂದ ಕಿಲೋ ಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಸದಸ್ಯ ಅಭಿಷೇಕ್ ಹೊಸಳ್ಳಿ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದು ಮಹಿಳೆ ಸಾವನ್ನಪ್ಪಿದ್ದಾರೆ. ಬನ್ನೂರು ಗ್ರಾಮದಲ್ಲಿದ್ದ ಆನೆ ಕುರಿತು ಹತ್ತಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಪಂದಿಸಿಲ್ಲ. ಕೆಲ ಅಧಿಕಾರಿಗಳು ಕರೆಯನ್ನೇ ಸ್ವೀಕರಿಸಿಲ್ಲ ಎಂದರು. ಈ ಬಗ್ಗೆ ಸರ್ಕಾರ, ಇಲಾಖೆ ಮಾತನಾಡುತ್ತಿಲ್ಲ. ನಾವು ಯಾರನ್ನು ಪ್ರಶ್ನೆ ಮಾಡಬೇಕು. ನಮ್ಮ ಬದುಕನ್ನು ಅಧಿಕಾರಿ ಗಳು ನಿರ್ಧಾರ ಮಾಡುವುದು ಖಂಡನೀಯ. ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡ ಮಲೆನಾಡಿಗರ ಪರಿಸ್ಥಿತಿ ಏನು ..? ಈ ಬಗ್ಗೆ ದೊಡ್ಡ ಹೋರಾಟ ನಡೆಸುವ ಅನಿವಾರ್ಯತೆಯಿದೆ. ಸರ್ಕಾರಕ್ಕೆ, ಸ್ಥಳೀಯ ಶಾಸಕರು, ಸಂಸದರಿಗೆ ನಮ್ಮ ಸಮಸ್ಯೆ ಕೇಳಲು ಸಮಯವಿಲ್ಲ ಎಂದು ಆರೋಪಿಸಿದರು.

ಕೇವಲ ಇದು ಬಾಳೆಹೊನ್ನೂರಿನ ಸಮಸ್ಯೆಯಲ್ಲ. ಬುಧವಾರ ಕೊಪ್ಪದ ಅಂದಗಾರಿನಲ್ಲಿ ಇದ್ದ ಆನೆ ಹುಲುಮಕ್ಕಿಗೆ ಬಂದಿದೆ. ಇನ್ನು ಕೊಪ್ಪ ಪಟ್ಟಣಕ್ಕೆ ಬರಲು ಹೆಚ್ಚು ಸಮಯ ಬೇಡ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರ ಒತ್ತುವರಿ ಜಮೀನು ತೆರವಿಗೆ ಇರುವ ಆಸಕ್ತಿ ಆನೆ ಓಡಿಸಲು ಇಲ್ಲ. ತೋಟ ಕಡಿಯಲು ಸಿಬ್ಬಂದಿ ಇರುತ್ತಾರೆ. ಆದರೆ ಆನೆ ಓಡಿಸಲು ಸಿಬ್ಬಂದಿ ಇಲ್ಲದಿರುವುದು ವಿಪರ್ಯಾಸ ಎಂದು ಲೇವಡಿ ಮಾಡಿದರು.

ಇದಕ್ಕೆ ಪರಿಹಾರವಾದ ಆನೆಗಳ ಸ್ಥಳಾಂತರಕ್ಕೆ ಯಾವ ಯೋಜನೆ ಹಾಕಿಕೊಂಡಿದ್ದೀರಿ, ಈ ಸ್ಥಳಾಂತರ ಕಾರ್ಯಾಚರಣೆ ಯಾವಾಗ ಆರಂಭ ಎಂದು ಸಾರ್ವಜನಿಕರಿಗೆ ಬಹಿರಂಗ ಪಡಿಸಿ ಎಂದು ಆಗ್ರಹಿಸಿದರು.ರೈತ ಮುಖಂಡ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಹುನ್ನಾರ ಅಧಿಕಾರಿಗಳು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಲೆನಾಡಿಗೆ ಆನೆ, ಹುಲಿಗಳನ್ನು ತಂದು ಬಿಡಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಹಣ ಮಾಡುವ ಉದ್ದೇಶದಿಂದ ಒಂದಷ್ಟು ಪಟಾಕಿ ಹೊಡೆದು ಆನೆ ಓಡಿಸುವ ನಾಟಕ ಮಾಡುತ್ತಾರೆ. ಆದರೆ ನಮಗೆ ಇಂತಹ ಕಪಟ ಕಾರ್ಯಾಚರಣೆ ಅಗತ್ಯವಿಲ್ಲ. ಶಾಶ್ವತವಾಗಿ ಆನೆಗಳನ್ನು ಸೆರೆ ಹಿಡಿದು ಆನೆ ಬಿಡಾರಕ್ಕೆ ಸ್ಥಳಾಂತರ ಮಾಡ ಬೇಕು ಎಂದು ಒತ್ತಾಯಿಸಿದರು.

ಅರಣ್ಯದೊಳಗಿರುವ ಕಾಡುಕೋಣ, ಆನೆಗಳು ರೈತರ ಜಮೀನಿಗೆ ಬಂದು ಹಾನಿ ಮಾಡದಂತೆ, ಜನರ ಸಾವು ನೋವಾಗ ದಂತೆ ಮಾಡಬೇಕು. ಮಲೆನಾಡಿಗರ ಮೇಲೆ ಇಲ್ಲ ಸಲ್ಲದ ಕಾಯ್ದೆ ಕಟ್ಟಳೆ ಹೇರುವುದು ಬೇಡ ಎಂದು ಒತ್ತಾಯಿಸಿದರು.2 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾ ನಿರತರು ಆನೆ ಸ್ಥಳಾಂತರಕ್ಕೆ ಯಾವ ಕ್ರಮ ಕೈಗೊಳ್ಳ ಲಾಗುವುದು ಎಂದು ಪ್ರಕಟಿಸದಿದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಆ. 25ರೊಳಗೆ ಆನೆ ಸ್ಥಳಾಂತರ ಕಾರ್ಯಾಚರಣೆ ನಡೆಯದಿದ್ದಲ್ಲಿ ಸಾರ್ವಜನಿಕರು ಕೊಪ್ಪ ಡಿಎಫ್‌ಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಕೊಪ್ಪ ಡಿಎಫ್‌ಒ ಶಿವಶಂಕರ್ ಮಾತನಾಡಿ, ಆನೆಗಳ ಸ್ಥಳಾಂತರಕ್ಕೆ ಕೂಡಲೇ ಕ್ರಮ ಕೈಗೊಳ್ಳಲಿದ್ದು, ಕಾರ್ಯಾಚರಣೆ ಪೂರ್ಣವಾಗುವವರೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿ ಕೊಳ್ಳ ಲಾಗುವುದು. ಆನೆಗಳು ಬಾರದಂತೆ ರೈಲ್ವೇ ಬ್ಯಾರಿಕೇಡ್ ನಿರ್ಮಿಸಿ, ಸರ್ಕಾರ, ಅರಣ್ಯ ಇಲಾಖೆ ನಿಯಮದನ್ವಯ ಆನೆ ಸ್ಥಳಾಂತರಕ್ಕೆ ಕಾರ್ಯಚಟುವಟಿಕೆ ರೂಪಿಸಲಾಗುವುದು ಎಂಬ ಭರವಸೆ ನೀಡಿದರು.ಪ್ರಮುಖರಾದ ಚಂದ್ರಶೇಖರ್ ರೈ, ನವೀನ್ ಕರಗಣೆ, ರತ್ನಾಕರ್ ಗಡಿಗೇಶ್ವರ, ಕಾರ್ತಿಕ್ ಕಾರ್‌ಗದ್ದೆ, ಕೆ.ಎಸ್.ರವೀಂದ್ರ, ಎ.ಸಿ.ಸಂತೋಷ್, ಟಿ.ಎಂ.ಉಮೇಶ್, ಹಿರಿಯಣ್ಣ, ಬಿ.ಕೆ.ಮಧುಸೂದನ್, ಮಂಜುನಾಥ್ ತುಪ್ಪೂರು, ಟಿ.ಎಂ.ನಾಗೇಶ್, ಕೆ.ಟಿ.ಗೋವಿಂದೇಗೌಡ, ಪ್ರಭಾಕರ್ ಪ್ರಣಸ್ವಿ, ಎಂ.ಎಸ್.ಅರುಣೇಶ್ ಮತ್ತಿತರರು ಹಾಜರಿದ್ದರು.ಪೊಲೀಸರು ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಕೆಎಸ್‌ಆರ್‌ಪಿ ಪೊಲೀಸರು ಹಾಗೂ ವಿವಿಧ ಠಾಣೆಗಳ ಪಿಎಸ್‌ಐಗಳನ್ನು ಬಂದೋಬಸ್ತ್‌ ಗೆ ನಿಯೋಜಿಸಿದ್ದರು. ಅರಣ್ಯ ಇಲಾಖೆ ಕಚೇರಿ ಒಳಗೆ ತೆರಳದಂತೆ ಬ್ಯಾರಿಕೇಡ್ ಹಾಕಿ ತಡೆದಿದ್ದರು.-- ಕೋಟ್ ೧--ಮಲೆನಾಡಿನ ಜನರ ಯಾತನೆ ನಿವಾರಣೆಗೆ ಸರ್ವಪಕ್ಷದವರು ಒಗ್ಗಟ್ಟಾಗಿ ಪ್ರತಿಭಟಿಸಿ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಎಚ್ಚರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಯಾವುದೇ ರಾಜಕೀಯ ಬೆರೆಸುವುದು ಬೇಡ. ಅರಣ್ಯ ಸಚಿವರಿಗೆ ಬಯಲುಸೀಮೆ, ಮಲೆನಾಡಿಗೂ ಇರುವ ವ್ಯತ್ಯಾಸ ತಿಳಿದಿಲ್ಲ. ಆನೆ ದಾಳಿಯಂತಹ ಘಟನೆ ವಿಷಾದನೀಯ. ಅರಣ್ಯ ಸಚಿವರು ಇಂತಹ ಘಟನೆ ನಡೆದಾಗ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸುವ ಕೆಲಸ ಮಾಡಬೇಕು. ಕೇವಲ ಪರಿಹಾರ ನೀಡಿದರೆ ಅವರ ಕರ್ತವ್ಯ ಮುಗಿಯಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಶಾಶ್ವತ ಪರಿಹಾರ ಕೈಗೊಳ್ಳ ದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಮುಖ್ಯಮಂತ್ರಿಗಳ ಗಮನಸೆಳೆಯುವ ಪ್ರಾಮಾಣಿಕ ಪ್ರಯತ್ನ ನಾನು ಮಾಡಲಿದ್ದು, ಮುಂದಿನ ದಿನಗಳಲ್ಲಿ ಸರ್ವಪಕ್ಷದ ನಾಯಕರು ನಿಯೋಗ ಬಂದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರದ ಗಮನಸೆಳೆದು ಪರಿಹಾರ ಕಂಡುಕೊಳ್ಳಲು ಸಹಕರಿಸಲಾಗುವುದು.ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ.-- ಕೋಟ್ ೨-- ಮಲೆನಾಡಿನಲ್ಲಿ ಆನೆ ದಾಳಿ ನಿರಂತರವಾಗಿದ್ದರೂ ಅಧಿಕಾರಿಗಳು, ಸರ್ಕಾರ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ. ಮಲೆನಾಡಿನಲ್ಲಿ ಇದೀಗ ಆನೆದಾಳಿಗೆ 4ನೇ ಬಲಿಯಾಗಿದ್ದು, ಅಧಿಕಾರಿಗಳು, ಸರ್ಕಾರಕ್ಕೆ ಇನ್ನೆಷ್ಟು ಅಮಾಯಕರ ಜೀವ ತೆಗೆಯಬೇಕಿದೆ. ಅಧಿಕಾರಿಗಳು ಕೇವಲ ಕಾನೂನು ಕಟ್ಟಳೆ ಅರಿತು ಕರ್ತವ್ಯ ನಿರ್ವಹಿಸಿದರೆ ಸಾಲದು. ಮಲೆನಾಡಿನ ಜನರ ಜೀವನದ ಬಗ್ಗೆ ಯೋಚಿಸಿ ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಬಾಳೆಹೊನ್ನೂರಿನಲ್ಲಿ ಕರ್ತವ್ಯದಲ್ಲಿರುವ ಆರ್‌ಎಫ್‌ಓ ಕೇವಲ ಕಾನೂನು ಪಾಲನೆ ಮಾಡುತ್ತಿದ್ದಾರೆ. ತೋಟಗಳಿಗೆ ಹಾಕಿರುವ ಐಬೆಕ್ಸ್ ಬೇಲಿ ತೆರವುಗೊಳಿಸುವಂತೆ ರೈತರಿಗೆ ಒತ್ತಡ ಹೇರುತ್ತಿದ್ದಾರೆ. ರೈತರು, ಮಲೆನಾಡಿಗರು ಇದ್ದರಷ್ಟೆ ದೇಶ ಮುನ್ನಡೆಯಲು ಸಾಧ್ಯ. ಮುಂದಿನ ದಿನಗಳಲ್ಲಿ ಇಂತಹ ಘಟನೆಗೆ ಅಧಿಕಾರಿಗಳು ತಕ್ಕ ಬೆಲೆ ತೆರಬೇಕಾಗುತ್ತದೆ. ಘಟನೆಗೆ ಕಾರಣವಾಗಿರುವ ಬಾಳೆಹೊನ್ನೂರು ಆರ್‌ಎಫ್‌ ಒ ಸಾರ್ವಜನಿಕರಿಗೆ ಉತ್ತರ ನೀಡಬೇಕು. ವೈಜ್ಞಾನಿಕವಾಗಿ ಆನೆಗಳು ಬಾರದಂತೆ ಯೋಜನೆ ರೂಪಿಸಬೇಕು.- ಡಿ.ಎನ್.ಜೀವರಾಜ್, ಮಾಜಿ ಸಚಿವ.೨೪ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ಅರಣ್ಯ ಇಲಾಖೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ವೇದಿಕೆಯ ಸದಸ್ಯ ಅಭಿಷೇಕ್ ಹೊಸಳ್ಳಿ ಮಾತನಾಡಿದರು.೨೪ಬಿಹೆಚ್‌ಆರ್ ೩:

ಆನೆ ದಾಳಿಗೆ ಮಹಿಳೆ ಮೃತಪಟ್ಟ ಘಟನೆ ಖಂಡಿಸಿ ಬಾಳೆಹೊನ್ನೂರಿನಲ್ಲಿ ನಡೆದ ಪ್ರತಿಭಟನೆ ನಿಖಿಲ್ ಕುಮಾರಸ್ವಾಮಿ, ಡಿ.ಎನ್.ಜೀವರಾಜ್, ಸುಧಾಕರ್ ಶೆಟ್ಟಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌