ಮರಿಯಮ್ಮನಹಳ್ಳಿ: ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಿರುವ ನಾಣಿಕೇರಿ ಕಲೋತ್ಸವವು ಮಿನಿ ಹಂಪಿ ಉತ್ಸವದಂತೆ ಮೂಡಿಬಂದಿದೆ. ಮುಂದಿನ ವರ್ಷದಿಂದ ಈ ಉತ್ಸವಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.
ರಾಜ್ಯದ ಜನರಿಗೆ ನೀರುಣಿಸುವ ಬೃಹತ್ ಜಲಾಶಯ ನಿರ್ಮಾಣಕ್ಕಾಗಿ ನಾಣಿಕೇರಿ ಹಾಗೂ ಸುತ್ತಮುತ್ತಲಿನ ಭಾಗದ ಜನರು ತಮ್ಮ ಫಲವತ್ತಾದ ಜಮೀನು ಮತ್ತು ಮನೆಗಳನ್ನು ತ್ಯಾಗ ಮಾಡಿದ್ದಾರೆ. ಇಂದಿನ ದಿನಗಳಲ್ಲಿ ಅರ್ಧ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವುದಕ್ಕೂ ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿಯಿದೆ. ಆದರೆ, ಈ ಭಾಗದ ಜನರು ತೋರಿದ ತ್ಯಾಗ ಮತ್ತು ಹೃದಯವಂತಿಕೆ ನಿಜಕ್ಕೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಜಲಾಶಯದಲ್ಲಿ ನೀರಿದ್ದರೂ ಈ ಭಾಗದ ಹಲವು ತಾಲೂಕುಗಳು ಬರಗಾಲ ಎದುರಿಸುತ್ತಿವೆ. ತುಂಗಭದ್ರಾ ನೀರು ತಲುಪದ ಪ್ರದೇಶಗಳಿಗೆ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಿಯೋಗದ ಮೂಲಕ ಮನವಿ ಸಲ್ಲಿಸಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಸಂಸದ ಈ. ತುಕಾರಾಂ ಮಾತನಾಡಿ, ನಾಣಿಕೇರಿ ಯುವ ಸೇವಾ ಟ್ರಸ್ಟ್ ವತಿಯಿಂದ ಮೂರನೇ ವರ್ಷದ ಕಾರ್ಯಕ್ರಮ ಯುವಕರು ಮತ್ತು ಹಿರಿಯರು ಸೇರಿ ಅರ್ಥಪೂರ್ಣವಾಗಿ ಆಚರಿಸಿದ್ದು, ಈ ಉತ್ಸವವು ಮುಂದಿನ ನೂರು ವರ್ಷಗಳ ಕಾಲ ಹೀಗೆಯೇ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯ ಮುಖಂಡರಾದ ಶ್ಯಾಮ್‌ರಾಜ್ ಸಿಂಗ್, ಚಿದ್ರಿ ಸತೀಶ್, ಗೋವಿಂದರ ಪರಶುರಾಮ, ಕುರಿ ಶಿವಮೂರ್ತಿ, ಎಲ್. ಪರಮೇಶ್ವರಪ್ಪ, ಎನ್. ಸತ್ಯನಾರಾಯಣ, ಎಸ್. ಕೃಷ್ಣನಾಯ್ಕ, ತಳವಾರ ಹುಲುಗಪ್ಪ, ಗುಂಡಾಸ್ವಾಮಿ, ಡಾ.ಮಂಜುಳಾ ಮೂರ್ತಿ, ಕೆ.ನಾಗರತ್ನಮ್ಮ, ಕಿಚಿಡಿ ಕೊಟ್ರೇಶ್, ಕೆ.ಎಂ.ಸೈಯದ್, ವಿಜಯಕುಮಾರ್, ಮಂಜುನಾಥ, ರವಿ, ವೆಂಕಟೇಶ್, ಪರಶುರಾಮ, ಎ.ರಹಿಮಾನ್, ಹನುಮಂತ, ಸೋಮಶೇಖರ್, ನಾಗರಾಜ, ಇಮಾಮ್ ಸಾಹೇಬ್, ಜಾಕೀರ್, ಆನಂದ, ಶ್ರೀನಿವಾಸ, ಕೃಷ್ಣ, ಪ್ರಕಾಶ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ಉತ್ಸವ ಸಮಿತಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕ ಬಿ. ಪರಶುರಾಮ ಸ್ವಾಗತಿಸಿ, ನಿರೂಪಿಸಿದರು.