ಹೂವಿನಹಡಗಲಿ: ಸಾಹಿತ್ಯವು ಸಂಜೀವಿನಿ ವಿದ್ಯೆ ಕಲೆ ದೈವಾಂಶದ ಸಂಕೇತ, ಸಾಹಿತಿ ಕಲಾವಿದರ ಸೃಜನಶೀಲತೆಯಿಂದ ಹೊರ ಹೊಮ್ಮುವ ಮಾತು ಕೃತಿ ಕೇವಲ ಮನಸ್ಸಿಗೆ ಮುದ ನೀಡುವ ಸಾಧನವಲ್ಲ, ಬದುಕಿಗೆ-ಮನಸ್ಸಿಗೆ ಚೈತನ್ಯ ನೀಡುವ ಸಂಜೀವಿನಿ ಶಕ್ತಿ ಸಂಕಷ್ಟಗಳ ಮಧ್ಯೆ ಮನುಷ್ಯನಿಗೆ ಹೊಸ ದೃಷ್ಟಿಕೋನ ನೀಡುವ ಸಾಮರ್ಥ್ಯ ಸಾಹಿತ್ಯಕ್ಕಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆ. ರುದ್ರಪ್ಪ ಹೇಳಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯ ಶಕ್ತಿಯುತವಾಗಿದ್ದು, ಸಾವಿರಾರು ವರ್ಷ ಇತಿಹಾಸವಿದೆ. ಮಲ್ಲಿಗೆ ನಾಡು ಹೂವಿನಹಡಗಲಿ ಎಲ್ಲ ಕಾಲಘಟ್ಟದಲ್ಲಿಯೂ ಅಪ್ರತಿಮ ಸಾರಸ್ವತ ಲೋಕದ ರಸ ಋಷಿಗಳನ್ನು ನಾಡಿಗೆ ನೀಡಿದೆ. ಮೈಲಾರ ಬಸವಲಿಂಗ ಶರಣರು ಉತ್ತಮ ಶರಣ ಸಾಹಿತ್ಯ ನೀಡಿದ್ದಾರೆ. ಇಡೀ ಕರ್ನಾಟಕ ಏಕೀಕರಣ ಹೋರಾಟಕ್ಕೆ ನಾಂದಿ ಹಾಡಿದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು, ಆಧುನಿಕ ಸರ್ವಜ್ಞ ಎಂದು ಹೆಸರು ಪಡೆದ ರೆವರೆಂಡ್ ಉತ್ತಂಗಿ ಚೆನ್ನಪ್ಪ ಇಂತವರನ್ನು ನಾಡಿಗೆ ನೀಡಿದ ಪುಣ್ಯ ಭೂಮಿಯಾಗಿದೆ ಎಂದರು.
ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು 1940ರಲ್ಲಿ ಧಾರವಾಡದಲ್ಲಿ ನಡೆದ 25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, ಬಸವತತ್ವ ರತ್ನಾಕರ ಕೃತಿ ಬರೆದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಎಂ.ಪಿ. ಪ್ರಕಾಶ ಅವರಂಥ ಪ್ರಾಮಾಣಿಕ ರಾಜಕೀಯ ಬುದ್ಧಿಜೀವಿ, ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣ ಚಳವಳಿಗಾರರನ್ನು ನಾಡಿದೆ ನೀಡಿದೆ ಎಂದರು.ಯುವ ವಿದ್ಯಾರ್ಥಿ ಸಮುದಾಯಕ್ಕೆ ಅಕ್ಷರಾಭ್ಯಾಸದ ಶಾಲೆ, ಕಾಲೇಜು, ತಾಂತ್ರಿಕ ವಿದ್ಯಾಲಯಗಳಷ್ಟೇ ಸೀಮಿತವಾಗದೇ ಆರ್ಥಿಕ ಬದುಕು ರೂಪಿಸಿಕೊಳ್ಳುವ ಕೈಗಾರಿಕೆಗಳು ಬೇಕು, ತಮ್ಮೂಲಕ ಸ್ವತಂತ್ರ ಬದುಕು ಸಾಧ್ಯವಾಗುತ್ತದೆ. ಕೌಶಲ್ಯಯುಕ್ತ ಜ್ಞಾನ ನೀಡುವ ತರಬೇತಿ ಕೇಂದ್ರ ಪ್ರಾರಂಭಿಸಬೇಕು. ರಂಗ ಕಲೆಗಳಲ್ಲಿ ಆಸಕ್ತಿ ಮೂಡಿಸುವ ಪ್ರಾಯೋಗಿಕ ರಂಗ ತರಬೇತಿ ಪ್ರಾರಂಭಿಸಿ ಶಿಬಿರಗಳ ಮೂಲಕ ಸದೃಢರಾಗಿಸಬೇಕು. ಭಾಷಾ ಕೌಶಲ್ಯ ಕೇಂದ್ರ, ಕನ್ನಡದ ಜತೆಗೆ ಉರ್ದು, ಲಂಬಾಣಿ ಭಾಷೆ ಸಂಸ್ಕೃತಿ, ಅಧ್ಯಯನಕ್ಕೆ ಒತ್ತು ನೀಡಬೇಕು. ಮಾತೃಭಾಷೆ ಕನ್ನಡ ಕಲಿಕಾ ಸಾಮರ್ಥ್ಯದೊಂದಿಗೆ ಇಂಗ್ಲಿಷ್ ಮತ್ತಿತರ ಭಾಷಾ ಕಲಿಕೆಗೆ ಪೂರಕ ವಾತಾವರಣ ಶಾಲೆಗಳಲ್ಲಿ ಆರಂಭಿಸಬೇಕು. ಹೈನುಗಾರಿಕೆ, ಮತ್ಸ್ಯೋದ್ಯಮ ದುಡಿಮೆ ಆದಾಯ ತರುವ ಕ್ರಿಯಾಶೀಲರನ್ನಾಗಿಸುವ ಸಾಧ್ಯತೆ ಇದೆ. ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ತೆರೆಯಬೇಕಿದೆ ಎಂದು ಸರ್ವಾಧ್ಯಕ್ಷರು ತಮ್ಮ ಆಶಯಗಳನ್ನು ವ್ಯಕ್ತಪಡಿಸಿದರು.