ಸ್ಥಳೀಯ ಚರಿತ್ರೆ ಮಾಸಿ ಹೋಗುವ ಮುನ್ನ ಮುಂದಿನ ಪೀಳಿಗೆಗೆ ಪರಿಚಯಿಸಿ

KannadaprabhaNewsNetwork |  
Published : Nov 23, 2026, 02:30 AM IST
ಹೂವಿನಹಡಗಲಿಯ ರಂಗಭಾರತಿ ರಂಗ ಮಂದಿರದಲ್ಲಿ ತಾಲೂಕ ಕಸಾಪ ಆಯೋಜಿಸಿದ್ದ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಶನ ಸಮಾರಂಭವನ್ನು ಉದ್ಘಾಟಿಸಿದ ಶಾಸ್ತ್ರಿಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಕೆ.ರವೀಂದ್ರನಾಥ ಚಾಲನೆ ನೀಡಿದರು.ಸಮ್ಮೇಳನದಲ್ಲಿ ಕನ್ನಡ ಬಯಲಾಟ ಚರಿತ್ರೆ ಸಂಪುಟ-1 ಪುಸ್ತಕ ಬಿಡುಗಡೆ ಮಾಡಿದ ಕರ್ನಾಟಕ ಜಾನಪದ ವಿವಿಯ ಸಹಾಯಕ ಪ್ರಾಧ್ಯಪಕ ಡಾ.ಚಂದ್ರಪ್ಪ ಸೊಬಟಿ.   | Kannada Prabha

ಸಾರಾಂಶ

ವಿಜಯನಗರ ಸಾಮ್ರಾಜ್ಯಕ್ಕೂ ಮುನ್ನವೇ ಹೂವಿನಹಡಗಲಿಗೆ ಪೂವಿನ ಪಡಂಗಲಿ ಎಂಬ ಹೆಸರು ಶಾಸನದಲ್ಲಿದೆ

ಹೂವಿನಹಡಗಲಿ: ಕನ್ನಡ ಸಾಹಿತ್ಯ ಸಮ್ಮೇಳನ, ನುಡಿ ಜಾತ್ರೆ, ಸಾಹಿತ್ಯಿಕ ಚಟುವಟಿಕೆಯಲ್ಲಿ ಸ್ಥಳೀಯ ಚರಿತ್ರೆಗಳು, ಮಾಸಿ ಹೋಗುವ ಮುನ್ನವೇ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ. ಕೆ. ರವೀಂದ್ರ ಹೇಳಿದರು.

ಇಲ್ಲಿನ ರಂಗಭಾರತಿ ರಂಗ ಮಂದಿರದಲ್ಲಿ ಕಸಾಪ ಆಯೋಜಿಸಿದ್ದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಘಟನೆ, ರಾಜರ ಆಳ್ವಿಕೆ ಇತಿಹಾಸ ತಿಳಿಸುತ್ತದೆ, ಆದರೆ ನಮ್ಮ ಸುತ್ತಮುತ್ತಲಿನ ಸ್ಥಳೀಯ ಇತಿಹಾಸ, ಶಿಲಾಶಾಸನ, ಸಾಂಸ್ಕೃತಿಕ ಪುರಾತತ್ವಕ್ಕೆ ನೀಡಿರುವ ಕೊಡುಗೆಗಳ ಅಧ್ಯಯನ ಬಹಳ ಅಗತ್ಯವಿದೆ. ಜತೆಗೆ ಈ ಮಾಹಿತಿ ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನ ಆಗಬೇಕಿದೆ ಎಂದರು.

ವಿಜಯನಗರ ಸಾಮ್ರಾಜ್ಯಕ್ಕೂ ಮುನ್ನವೇ ಹೂವಿನಹಡಗಲಿಗೆ ಪೂವಿನ ಪಡಂಗಲಿ ಎಂಬ ಹೆಸರು ಶಾಸನದಲ್ಲಿದೆ. 12ನೇ ಶತಮಾನದ ಕಲ್ಯಾಣ ಕ್ರಾಂತಿಯಿಂದ ಹರಿದು ಹಂಚಿ ಹೋಗಿರುವ ಸಾಹಿತ್ಯ, ವಿಜಯನಗರ ಹಂಪಿಯಲ್ಲಿ ವಚನ ಸಾಹಿತ್ಯದ ಸಂರಕ್ಷಣೆ, ಅಧ್ಯಯನ, ವಚನಗಳ ಕ್ರೋಡೀಕರಿಸುವ ಕೆಲಸ ಆಗಿರುವ ಹಿನ್ನೆಲೆಯಲ್ಲಿ ಇದನ್ನು ವಿಜಯ ಕಲ್ಯಾಣ ಎಂದು ಕರೆಯಲ್ಪಟ್ಟಿತ್ತು. ಇಂತಹ ಪುಣ್ಯದ ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿರುವುದು ಉತ್ತಮ ಬೆಳವಣಿಗೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೃಷ್ಣನಾಯ್ಕ ಮಾತನಾಡಿ, ಈ ನಾಡಿನ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮಕ್ಕಳಲ್ಲಿ ಬಿತ್ತುವಂತಹ ಕೆಲಸ ಆಗಬೇಕಿದೆ. ಕನ್ನಡ ಸಾಹಿತ್ಯ ಪರಿಷತ್‌ ಚಿಂತನಾ ಕೇಂದ್ರಗಳಾಗಿ ಕೆಲಸ ಮಾಡುತ್ತಿದೆ, ಶರಣರು, ಸಂತರು, ದಾಸರು ಸೇರಿದಂತೆ ಸಾಹಿತಿಗಳು, ಕವಿಗಳು ಪುಸ್ತಕ ಬರೆಯುವ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ, ಓದುವ ಸಂಸ್ಕೃತಿ ಬೆಳೆಸಬೇಕಿದೆ, ಇಂತಹ ಸಮ್ಮೇಳನ ನಿರಂತರವಾಗಿ ನಡೆಯಬೇಕೆಂದು ಹೇಳಿದರು.

ಡಾ. ಕೆ. ರುದ್ರಪ್ಪ, ಡಾ. ಕೆ. ರವೀಂದ್ರನಾಥ, ಡಾ. ಮುದೇನೂರು ನಿಂಗಪ್ಪ ಸಂಪಾದಕತ್ವದ ಕನ್ನಡ ಬಯಲಾಟ ಚರಿತ್ರೆ ಸಂಪುಟ-1 ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಜಾನಪದ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ, ಬಯಲಾಟ ಒಂದು ಜಾತಿ ಜನಾಂಗಕ್ಕೆ ಮೀಸಲಿಲ್ಲ, ಸಾಕಷ್ಟು ಚಾರಿತ್ರಿಕ ದಾಖಲೆ ಬಯಲಾಟದಲ್ಲಿವೆ, ಸಿದ್ದ ಮಾದರಿ ಮೀರಿದ ಕಲಾ ಪ್ರಕಾರವಾಗಿದೆ, ಅಳಿವಿನಂಚಿನಲ್ಲಿರುವ ಬಯಲಾಟ ಕುರಿತು ಪುಸ್ತಕ ಹೊರ ತಂದಿರುವ ಪ್ರಯತ್ನ ಉತ್ತಮ ಬೆಳವಣಿಗೆ ಎಂದರು.

ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆ. ರುದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಆಶಯ ನುಡಿ ನುಡಿದರು, ತಾಲೂಕು ಕಸಾಪ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್‌ ಪ್ರಾಸ್ತಾವಿಕ ಮಾತನಾಡಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿದರು. ರಂಗಭಾರತಿ ಕಾರ್ಯಾಧ್ಯಕ್ಷೆ ಸುಮಾ ವಿಜಯ್‌, ತೋ.ಮ. ಶಂಕ್ರಯ್ಯ, ಮಹೇಶ್ವರ ಗೌಡ, ಬಿ. ಹನುಮಂತಪ್ಪ, ಡಾ. ಕಮಲಾ ಸೊಪ್ಪಿನ್‌, ಡಾ. ಸಿದ್ದೇಶ್ವರಿ, ವಾರದ ಗೌಸ್‌ ಮೋಹಿದ್ದೀನ್‌ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರದಲ್ಲಿ ಆಸರೆಯಾದ ಕಳಸಕೊಪ್ಪ ಕೆರೆ
ಬೆಳಗಾವಿಯಲ್ಲಿ ಮಟಕಾ ದಂಧೆ ಮೇಲೆ ಪೊಲೀಸರ ಸರಣಿ ದಾಳಿ