ಮುರ್ಡೇಶ್ವರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ: ಸಚಿವ ಮಂಕಾಳ ವೈದ್ಯ

KannadaprabhaNewsNetwork | Published : Feb 28, 2025 12:48 AM

ಸಾರಾಂಶ

ಮುರ್ಡೇಶ್ವರದ ಅಭಿವೃದ್ಧಿಗೆ ಆರ್.ಎನ್. ಶೆಟ್ಟಿ ಅವರೇ ಕಾರಣರಾಗಿದ್ದಾರೆ.

ಭಟ್ಕಳ: ಮುರ್ಡೇಶ್ವರದ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ ಅನುದಾನ ತರಲಾಗುವುದು. ಈಗಾಗಲೇ ಇಲ್ಲಿನ ಪ್ರವಾಸೋದ್ಯಮ ಮತ್ತು ಮೀನುಗಾರಿಕೆಯ ಅಭಿವೃದ್ಧಿಗೆ ₹400 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲು ಉದ್ಧೇಶಿಸಲಾಗಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ಮುರ್ಡೇಡೇಶ್ವರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲಾಡಳಿತದಿಂದ ಏರ್ಪಡಿಸಲಾದ ಜಾಗರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುರ್ಡೇಶ್ವರದ ಅಭಿವೃದ್ಧಿಗೆ ಆರ್.ಎನ್. ಶೆಟ್ಟಿ ಅವರೇ ಕಾರಣರಾಗಿದ್ದಾರೆ. ಮುರ್ಡೇಶ್ವರವನ್ನು ಪ್ರಪಂಚದ ಮೂಲೆ ಮೂಲೆಗೆ ಪರಿಚಯಿಸಿದ ಕೀರ್ತಿ ಅವರಿಗೆ ಸೇರುತ್ತದೆ. ಇಂತಹ ಸಂದರ್ಭದಲ್ಲಿ ಅವರ ನೆನಪು ಮಾಡಿಕೊಳ್ಳಲೇಬೇಕು ಎಂದ ಅವರು, ಮುರ್ಡೇಶ್ವರದಲ್ಲಿ ಶಿವರಾತ್ರಿಯ ಪ್ರಯುಕ್ತ ಸರ್ಕಾರ ಮತ್ತು ಸ್ಥಳೀಯ ಉದ್ಯಮಿಗಳ ಸಹಕಾರದಿಂದ ಪ್ರತಿ ವರ್ಷ ಜಾಗರಣೋತ್ಸವ ನಡೆಸಲು ನಿರ್ಧರಿಸಲಾಗಿದೆ. ಈ ಸಲದ ಜಾಗರಣೋತ್ಸವಕ್ಕೆ ಸರ್ಕಾರದಿಂದ ₹50 ಲಕ್ಷ ಮಂಜೂರಿಯಾಗಿದೆ ಎಂದ ಅವರು, ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಿ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಯ ಜತೆಗೆ ಅಭಿವೃದ್ಧಿ ಕೆಲಸ ಮತ್ತು ಇಂತಹ ಕಾರ್ಯಕ್ಕೆ ಅನುದಾನ ಒದಗಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಮುರ್ಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗಳ್, ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್. ಕಾಮತ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಡಿಎಫ್‌ಒ ಯೋಗೇಶ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಮಾವಳ್ಳಿ-1 ಗ್ರಾಪಂ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ-2 ಗ್ರಾಪಂ ಅಧ್ಯಕ್ಷೆ ನಾಗರತ್ನಾ ಪಡಿಯಾರ, ಮುರ್ಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಡಿವೈಎಸ್ಪಿ ಮಹೇಶ ಮುಂತಾದವರಿದ್ದರು. ಸಹಾಯಕ ಆಯುಕ್ತೆ ಕಾವ್ಯರಾಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. ತಹಸೀಲ್ದಾರ್‌ ನಾಗೇಂದ್ರ ಕೋಳಶೆಟ್ಟಿ ವಂದಿಸಿದರು. ಬೆಳಗ್ಗೆ ವರೆಗೂ ನಡೆದ ಮಹಾಶಿವರಾತ್ರಿ ಜಾಗರಣೆಯಲ್ಲಿ ರಾಜ್ಯದ ಪ್ರಸಿದ್ಧ ಮತ್ತು ಸ್ಥಳೀಯ ಕಲಾವಿದರು ಹಾಡು, ನೃತ್ಯ ಮುಂತಾದವುಗಳ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಜಾಗರಣೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಮುರ್ಡೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ಏರ್ಪಡಿಸಲಾದ ಜಾಗರಣೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.

Share this article