ಕನ್ನಡಪ್ರಭ ವಾರ್ತೆ ಮೇಲುಕೋಟೆ
ವಿಶ್ವವಿಖ್ಯಾತ ಶ್ರೀಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ಏಪ್ರಿಲ್ 7ರಂದು ರಾತ್ರಿ ವೈಭವಯುತವಾಗಿ ನಡೆಸಲು ಸರ್ಕಾರ 10 ಕೋಟಿ ರು. ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ಮೇಲುಕೋಟೆಯಲ್ಲಿ ಕೈಂಕರ್ಯ ಪರರ ಸಲಹೆ ಪಡೆದು ನಂತರ ಅಧಿಕಾರಿಗಳ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ವೈರಮುಡಿ ಬ್ರಹ್ಮೋತ್ಸವ ಕಾರ್ಯಕ್ರಮಗಳು ಮಾ.31ರ ಮೊದಲ ತೆಪ್ಪೋತ್ಸವದಿಂದ ಆರಂಭವಾಗಿ ಏಪ್ರಿಲ್ 14ರವರೆಗೆ ನಡೆಯಲಿವೆ ಎಂದರು.
ಬ್ರಹ್ಮೋತ್ಸವದ ವಿಶೇಷ ಆಚರಣೆಗಾಗಿ ಸರ್ಕಾರ 10 ಕೋಟಿ ರು. ಅನುದಾನ ನೀಡಿದೆ. ಕಳೆದ ವರ್ಷವೂ ಜಾತ್ರೆಗೆ ಅನುದಾನ ಬಿಡುಗಡೆಯಾಗಿತ್ತು. ಜಾತ್ರಾ ಮಹೋತ್ಸವ ವ್ಯವಸ್ಥೆಗೆ 1.50 ಕೋಟಿ ರು. ಮಾತ್ರ ಬಳಸಿ ಉಳಿದ ಅನುದಾನವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.ವೈರಮುಡಿ ಹಾಗೂ ರಥೋತ್ಸವ ವೇಳೆ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಅಗತ್ಯಕ್ರಮ ಜರುಗಿಸಬೇಕು, ಜನಜಂಗುಳಿ ಇರುವ ಕಡೆ ಹೆಚ್ಚು ಪೊಲೀಸರನ್ನು ನಿಯಂತ್ರಿಸಬೇಕು ಎಂದರು.
ರಾಜಬೀದಿಯಲ್ಲಿ ತೆರೆದ ಚರಂಡಿಗಳಿವೆ. ವೈರಮುಡಿ ದರ್ಶನದ ವೇಳೆ ಭಕ್ತರು ಚರಂಡಿಯಲ್ಲಿ ಬೀಳುತ್ತಾರೆ. ನಾನೂ ಸಹ ಕಳೆದ ವರ್ಷ ಚರಂಡಿಯಲ್ಲಿ ಬಿದ್ದಿದ್ದೆ. ನನ್ನ ವಾಚ್ ಸಹ ಕಾಣೆಯಾಗಿತ್ತು. ಈ ವರ್ಷ ಇಂತಹ ಅವ್ಯವಸ್ಥೆಗಳು ಮರುಕಳಿಸಬಾರದು. ಉತ್ಸವ ಬೀದಿಗಳಲ್ಲಿ ತೆರದ ಚರಂಡಿಗಳ ಮೇಲ್ಭಾಗ ತಾತ್ಕಾಲಿಕವಾಗಿ ಮುಚ್ಚುವ ಕೆಲಸವನ್ನು ಗ್ರಾಮ ಪಂಚಾಯಿತಿ ಮತ್ತು ನಿರ್ಮಿತಿ ಕೇಂದ್ರ ಮಾರ್ಚ್ 31 ರೊಳಗೆ ಮಾಡಬೇಕು ಎಂದು ಸೂಚಿಸಿದರು.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಜಿಲ್ಲಾ ಕೇಂದ್ರ ಮತ್ತು ಇತರ ನಗರಗಳಿಂದ ಕಳೆದ ವರ್ಷಕ್ಕಿಂತ ಹೆಚ್ಚು ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ಕಲ್ಯಾಣಿಯಲ್ಲಿ ಸ್ನಾನ ಮಾಡುವ ಭಕ್ತರ ಸುರಕ್ಷತೆಗಾಗಿ ಎರಡು ಮೆಟ್ಟಿಲು ನಂತರ ನಿಯಂತ್ರಣ ಬಲೆ ಅಳವಡಿಸಿ ಎಂದರು.
ಎಲ್ಲೆಡೆ ಆಕರ್ಷಕ ದೀಪಾಲಂಕಾರ ಮಾಡಿದರೂ ವೈರಮುಡಿ ಉತ್ಸವ ನಡೆಯುವ ಉತ್ಸವ ಬೀದಿಗಳಿಗೇ ದೀಪಾಲಂಕಾರ ಇರುವುದಿಲ್ಲ ಎಂಬುದನ್ನು ಗಮನಿಸಿದ್ದೇನೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸ್ಥಳೀಯರು, ದೇವಾಲಯದ ಕೈಂಕರ್ಯ ಪರರ ಸಲಹೆಯಂತೆ ಉತ್ಸವ ಬೀದಿಗೆ ವಿಶೇಷ ದೀಪಾಲಂಕಾರ ಮಾಡಬೇಕು ಎಂದು ದೀಪಾಲಂಕಾರ ಗುತ್ತಿಗೆದಾರನಿಗೆ ಶಾಸಕರು ಖಡಕ್ ಸೂಚನೆ ನೀಡಿದರು.ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು, ತಡೆರಹಿತ ವಿದ್ಯುತ್ ಸಂಪರ್ಕ, ವೈದ್ಯಕೀಯ ಸೇವೆ, ಅನ್ನಪ್ರಸಾದ ಭವನದಲ್ಲಿ ಪ್ರಸಾದ ವಿತರಣೆ ಅಚ್ಚುಕಟ್ಟಾಗಿರಲಿ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎಲ್ಲಾ ಇಲಾಖಾಧಿಕಾರಿಗಳು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಕೋತಿಗಳ ಹಾವಳಿ ನಿಯಂತ್ರಿಸಿ:ಸಭೆಯಲ್ಲಿ ಕೋತಿಗಳ ಹಾವಳಿ ಬಗ್ಗೆ ಗಮನ ಸೆಳೆಯಲಾಯಿತು. ಮೂರು ಸಾವಿರಕ್ಕೂ ಅಧಿಕ ಕೋತಿಗಳಿರುವ ಕಾರಣ ಭಕ್ತರಿಗೆ ತೊಂದರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ನಾಗರಿಕರ ಸಹಭಾಗಿತ್ವದಲ್ಲಿ ಕೋತಿಗಳನ್ನು ಹಿಡಿದು ನಾಗರಹೊಳೆ ಅಥವಾ ಬಂಡೀಪುರ ಕಾಡಿನಲ್ಲಿ ಬಿಡಿಸಬೇಕು. ಜಾತ್ರಾ ಅವಧಿಯಲ್ಲಿ ಬಸವಗಳು ಹಾಗೂ ಆಡುಗಳಿಂದ ಭಕ್ತರಿಗೆ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಪಾಂಡವಪುರ ತಹಸೀಲ್ದಾರ್ ಸಂತೋಷ್, ಇಒ ಲೋಕೇಶಮೂರ್ತಿ, ದೇವಾಲಯದ ಇಒ ಶೀಲಾ, ಗ್ರಾಪಂ ಅಧ್ಯಕ್ಷೆ ಮಣಿಮುರುಗನ್, ಉಪಾಧ್ಯಕ್ಷ ಜಿ.ಕೆ ಕುಮಾರ್, ಪಾರುಪತ್ತೇಗಾರರು, ಸ್ಥಾನೀಕರಾದ ಶ್ರೀನಿವಾಸ ನರಸಿಂಹನ್ ಗುರೂಜಿ, ಪರಿಚಾರಕ ಹಾಗೂ ಪಾರುಪತ್ತೇಗಾರ್ ಪಾರ್ಥಸಾರಥಿ, ಅರ್ಚಕಾದ ಬಿ.ವಿ ಆನಂದಾಳ್ವಾರ್, ವರದಾರಾಜಭಟ್ಟರ್, ಸ್ಥಾನೀಕರಾದ ತಿರುನಾರಾಯಣ ಅಯ್ಯಂಗಾರ್, ಕರಗಂ ರಂಗಪ್ರಿಯ ಸಂಪತ ಕುಮಾರನ್, ಪ್ರಸನ್ನಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.