ಬಗರ್‌ಹುಕುಂ ಸಾಗುವಳಿದಾರರ ನೆರವಿಗೆ ಸರ್ಕಾರ ಬದ್ಧ

KannadaprabhaNewsNetwork | Published : Jun 22, 2024 12:49 AM

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಇಲಾಖಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರ ಹಲವು ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಇಲಾಖಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಸಂತ್ರಸ್ಥರಿಗೆ ನೆರವು ನೀಡುವ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ. ಜನರಿಗೆ ಅನುಕೂಲವಾಗುವಂತಿದ್ದಲ್ಲಿ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.ಸಂತ್ರಸ್ಥರ ಸಮಸ್ಯೆಯನ್ನು ಸರಳವಾಗಿ ಸುಲಭವಾಗಿ ಇತ್ಯರ್ಥಗೊಳಿಸಲು ಅಧಿಕಾರಿಗಳು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕು. ಅಲ್ಲದೇ ರೈತರಿಗೆ ಹಲವು ದಶಕಗಳ ಹಿಂದೆ ನಿಮಾನುಸಾರ ಭೂಮಿಯ ಮಂಜೂರಾತಿಯಾಗಿದ್ದರೂ ಅರಣ್ಯ ಇಲಾಖೆಯ ದಾಖಲೆಗಳಲ್ಲಿ ಬದಲಾವಣೆಯಾಗದೆ ರೈತರಿಗೆ ಅಭದ್ರತೆ ಕಾಡುತ್ತಿದೆ. ಸಾಗುವಳಿದಾರರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಬೇಕು. ಕಾನೂನು ತೊಡಕಿಲ್ಲದೇ ಸ್ಥಳೀಯವಾಗಿ ಬಗೆಹರಿಸಬಹುದಾದ ಹಾಗೂ ಈಗಲೂ ವಿಲೇವಾರಿಯಾಗದೇ ಉಳಿದಿರುವ ಅರ್ಜಿಗಳ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಅರಣ್ಯದಂಚಿನ ಹೊಲಗಳಲ್ಲಿ ಮಂಗನ ಹಾವಳಿಯಿಂದಾಗಿ ರೈತರು ತಮ್ಮ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಮಂಗಗಳ ನಿಯಂತ್ರಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅರಣ್ಯ ಇಲಾಖೆಯಿಂದ ಕಾನೂನು ತೊಡಕು ಎದುರಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಸಚಿವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಕಂದಾಯ ಇಲಾಖೆಯು ಈ ಹಿಂದೆ ಕೆಲವು ರೈತರಿಗೆ ಮಂಜೂರಾತಿ ನೀಡಿರುವ ಭೂಮಿ ಹಕ್ಕು ಪ್ರಮಾಣ ಪತ್ರದಲ್ಲಿ ಹಂಗಾಮಿ ಎಂಬ ಪದ ಬಳಕೆಯಿಂದಾಗಿ ಸರ್ಕಾರದ ಸೌಲತ್ತುಗಳನ್ನು ಪಡೆಯಲು ಅಡಚಣೆ ಉಂಟಾಗುತ್ತಿದೆ. ಈ ಹಂಗಾಮಿ ಎಂಬ ಪದ ಕೈಬಿಟ್ಟು, ದಾಖಲೆ ಮಾಡಿಕೊಡಲು ಸರ್ಕಾರಕ್ಕೆ ಮಾರ್ಗದರ್ಶನ ನೀಡುವಂತೆ ಅರಣ್ಯಾಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.

ಈಗಾಗಲೇ ರಾಜ್ಯದೆಲ್ಲೆಡೆ ಸರ್ಕಾರಿ ಒಡೆತನ ಜಾಗಗಳಲ್ಲಿರುವ ಅರ್ಹ ಫಲಾನುಭವಿಗಳು 94ಸಿ ಮತ್ತು 94ಸಿಸಿ ಅಡಿ ಅರ್ಜಿ ಸಲ್ಲಿಸಿರುವವರನ್ನು ಒಕ್ಕಲೆಬ್ಬಿಸುವ ಅಥವಾ ಮನೆಯನ್ನು ತೆರವುಗೊಳಿಸುವ ಸಾಹಸಕ್ಕೆ ಅಧಿಕಾರಿಗಳು ಕೈ ಹಾಕಬಾರದು. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವಿನ ಹಲವು ಸಮಸ್ಯೆಗಳ ಇತ್ಯರ್ಥಕ್ಕಾಗಿ ಮಂಗಳವಾರ ಬೆಂಗಳೂರಿನಲ್ಲಿ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್‍ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಸಿಸಿಎಫ್ ಹನುಮಂತಪ್ಪ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಮಹಾನಗರಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಅರಣ್ಯ ಸಚಿವರೊಂದಿಗೆ ಸಮಾಲೋಚನೆ

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಂಡ ಕೆಲವು ನಿರ್ಣಯಗಳಿಂದಾಗಿ ಅರಣ್ಯ ಭೂಮಿಯಲ್ಲಿ ಹಲವು ದಶಕಗಳಿಂದ ವಾಸವಾಗಿರುವ ವನವಾಸಿಗಳಿಗೆ, ಮನೆ ನಿರ್ಮಿಸಿಕೊಂಡು ವಾಸವಾಗಿರುವ ವಸತಿಗರಿಗೆ ಭೂಮಿಯ ಹಕ್ಕು ನೀಡುವಲ್ಲಿ ತೀವ್ರ ತರಹದ ಅಡಚಣೆ ಉಂಟಾಗುತ್ತಿದೆ. ಇರುವ ಕಾನೂನು ತೊಡಕನ್ನು ತೆರವುಗೊಳಿಸಲು ಹಾಗೂ ಶರಾವತಿ ಸಂತ್ರಸ್ಥರ ದೀರ್ಘಕಾಲದ ಸಮಸ್ಯೆಯ ಪರಿಹಾರಕ್ಕಾಗಿ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲು ರಾಜ್ಯ ಅರಣ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆಯ ಅನುಮೋದನೆಯ ನಂತರ ಶೀಘ್ರದಲ್ಲಿ ಸಭೆ ಕರೆದು ಸಮಸ್ಯೆಗಳ ಪರಿಹಾರ ಕಾರ್ಯದ ಬಗ್ಗೆ ತಜ್ಞರ ಸಲಹೆ ಪಡೆದು, ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಉದ್ದೇಶಿಸಲಾಗಿದೆ ಎಂದು ಸಿಸಿಎಫ್ ಹನುಮಂತಪ್ಪ ಹೇಳಿದರು.

ಪ್ರಸ್ತಾವನೆ ಸಲ್ಲಿಸಲು ಸಚಿವ ಮಧು ಸೂಚನೆನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಳ್ಳಲಾದ ಕೆಲವು ಕಾಮಗಾರಿಗಳು ಅಪೂರ್ಣವಾಗಿದ್ದು, ಮಳೆಗಾಲದಲ್ಲಿ ಜನಸಾಮಾನ್ಯರಿಗೆ ಸಾಮಾನ್ಯದಿಂದ ತೀವ್ರ ಸ್ವರೂಪದ ಸಮಸ್ಯೆ ಉಂಟಾಗಲಿದೆ. ನಗರದಲ್ಲಿ ಕೈಗೊಳ್ಳಬಹುದಾದ ಇನ್ನಷ್ಟು ರಚನಾತ್ಮಕ ಕಾರ್ಯಗಳಿಗಾಗಿ ಪ್ರಸ್ತಾವನೆಯನ್ನು ತಯಾರಿಸಿ, ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವ ಮಧು ಬಂಗಾರಪ್ಪ ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಸೊರಬ ಮತ್ತು ಆನವಟ್ಟಿಯಲ್ಲಿ ಯುಜಿಡಿ ಕಾಮಗಾರಿಯನ್ನು ಆರಂಭಿಸಲು ಕ್ರಿಯಾಯೋಜನೆ ತಯಾರಿಸಿ ಕೂಡಲೆ ಸಲ್ಲಿಸಬೇಕು.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜೆ.ಜೆ.ಎಂ.ಯೋಜನೆಯಡಿ ಲಿಂಗನಮಕ್ಕಿಯಿಂದ ನೀರು ತರುವ ಯೋಜನೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿದರು. ಈ ಸಂಬಂಧ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದು ಎಂದರು. ಸೊರಬದಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ನಿರ್ಮಾಣ, ಜಿಲ್ಲೆಯ ಕೊಳಚೆ ಪ್ರದೇಶಗಳ ಅಭಿವೃದ್ಧಿ, ಪಂಚಾಯತ್ ಅಭಿವೃದ್ದಿ ಯೋಜನಯಡಿ ಗ್ರಾಮೀಣ ರಸ್ತೆಗಳ ದುರಸ್ತಿಗೆ ಪ್ರಸ್ತಾವನೆ ತಯಾರಿಸಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

Share this article