ಸರ್ಕಾರ ದೈಹಿಕ ಶಿಕ್ಷಣಕ್ಕೆ ಮಹತ್ವ ಕೊಡುತ್ತಿಲ್ಲ: ಪ್ರೊ. ಎಸ್.ವಿ. ಸಂಕನೂರ ವಿಷಾದ

KannadaprabhaNewsNetwork | Published : Jun 10, 2024 12:46 AM

ಸಾರಾಂಶ

ಕಳೆದ 12 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿಯಾಗದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಂಡರಗಿ

ಸರ್ಕಾರ ದೈಹಿಕ ಶಿಕ್ಷಣ ಸದಾ ನಿರ್ಲಕ್ಷಿಸುತ್ತ ಬರುತ್ತಿದ್ದು, ಯಾವ ಸರ್ಕಾರಗಳೂ ಅದಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ವಿಷಾದ ವ್ಯಕ್ತಪಡಿಸಿದರು.

ಭಾನುವಾರ ಮುಂಡರಗಿ ಪಟ್ಟಣದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಕಾಶೀನಾಥ ನಿಂಗಪ್ಪ ಶಿರಬಡಗಿ ಅಭಿಮಾನಿ ಬಳಗದ ವತಿಯಿಂದ ಈಚೆಗೆ ಸೇವಾ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕ ಕಾಶೀನಾಥ ಶಿರಬಡಗಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಬ್ಬ ವಿದ್ಯಾರ್ಥಿ ದೈಹಿಕವಾಗಿ, ಮಾನಸಿಕವಾಗಿ, ಆರೋಗ್ಯಕರವಾಗಿ ಬೆಳೆಯಬೇಕಾದರೆ ದೈಹಿಕ ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ. ಆದರೆ, ಬಿಜೆಪಿ ಸೇರಿದಂತೆ ಎಲ್ಲ ಸರ್ಕಾರಗಳು ದೈಹಿಕ ಶಿಕ್ಷಣ ನಿರ್ಲಕ್ಷಿಸುತ್ತ ಬಂದಿದ್ದು, ಕಳೆದ 12 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿಯಾಗದಿರುವುದು ದುರ್ದೈವದ ಸಂಗತಿಯಾಗಿದೆ. ಅಲ್ಲದೇ ಅನೇಕ ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಲ್ಲಿ, ಪಟ್ಟಣದಲ್ಲಿನ ಅನೇಕ ಖಾಸಗಿ ಸಂಸ್ಥೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಸಹ ಸರ್ಕಾರ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಕಾಶೀನಾಥ ಶಿರಬಡಗಿ ಒಬ್ಬ ಜನಾನುರಾಗಿ ಹಾಗೂ ವಿದ್ಯಾರ್ಥಿ ನೆಚ್ಚಿನ ದೈಹಿಕ ಶಿಕ್ಷಕರಾಗಿ ಸುದೀರ್ಘ 39 ವರ್ಷ 4 ತಿಂಗಳು ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದು, ಅವರ ಮುಂದಿನ ಜೀವನ ಸುಖಮಯವಾಗಲಿ ಎಂದರು.

ಸಾನಿಧ್ಯ ವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಜಿ ಮಾತನಾಡಿ, ಕಾಶೀನಾಥ ಶಿರಬಡಗಿ ಎಲ್ಲರೊಂದಿಗೆ ಸ್ನೇಹ, ಪ್ರೀತಿಯಿಂದ ಇರುತ್ತಿದ್ದು, ಇವರು ದೈಹಿಕ ಶಿಕ್ಷಕರಾದರೂ ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವುದು ಎಲ್ಲರೂ ಮೆಚ್ಚುವಂತದ್ದು. ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ-ಕಾಲೇಜುಗಳನ್ನು ನಡೆಸುವುದೇ ದುಸ್ತರವಾಗಿದೆ. ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಖಾಲಿಯಾದ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಸರ್ಕಾರ ತಕ್ಷಣವೇ ನೇಮಕಕ್ಕೆ ಮುಂದಾಗಬೇಕು ಎಂದರು.

ಧಾರವಾಡದ ಚಿಕ್ಕಮಲ್ಲಿಗವಾಡದ ಹ್ಯಾಪಿ ಲೀವಿಂಗ್ ಆಶ್ರಯಮದ ಎ.ಪಿ. ಪಾಟೀಲ ಗುರೂಜಿ ಮಾತನಾಡಿ, ಎಲ್ಲಿ ಮಗುವಿನ ಮುಗ್ದತೆ ಇರುತ್ತದೆಯೋ ಅಲ್ಲಿ ಕಲ್ಮಶ ಇರುವುದಿಲ್ಲ. ಕಲ್ಮಶ ಇಲ್ಲದ ಮನಸ್ಸಿನಿಂದ ಮನಸ್ಸನ್ನು ಹತೋಟಿ ಇಡಲು ಮತ್ತು ಇರುವಿಕೆಗೆ ಸಹಾಯವಾಗುತ್ತದೆ. ನಮಗೆ ಜೀವನ ಅರ್ಥವಾಗಬೇಕಾದರೆ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎಲ್ಲ ಸಾಧನೆಗೆ ಮನಸ್ಸು ಶಾಂತವಾಗಿದ್ದು, ಪ್ರೇಮದಿಂದ ಇತರರಿಗೆ ತಮ್ಮ ಪ್ರೇಮವನ್ನು ನಿಸ್ವಾರ್ಥದಿಂದ ಹಂಚಿದಾಗ ಮಾತ್ರ ನೆಮ್ಮದಿ ಸಾಧ್ಯ. ಸಹಜಸ್ಥಿತಿಯ ಜೀವನ ನಡೆಸುವುದರಿಂದ ಉತ್ಸಾಹ ತಾನಾಗಿಯೇ ಮೂಡುತ್ತದೆ. ನಿವೃತ್ತ ಶಿಕ್ಷಕ ಕಾಶೀನಾಥ ಅವರ ಚೈತನ್ಯ ಮತ್ತು ಉತ್ಸಾಹದ ಬದುಕು ಸಮಾಜಕ್ಕೆ ಇನ್ನಷ್ಟು ಕೊಡುಗೆಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎಸ್. ಪಾಟೀಲ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ, ಮಂಜುನಾಥ ಚಲವಾದಿ ಸೇರಿದಂತೆ ಅನೇಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಕಾಶೀನಾಥ ಶಿರಬಡಗಿ ಹಾಗೂ ಅವರ ಧರ್ಮಪತ್ನಿ ಲಲಿತಾ ಶಿರಬಡಗಿ ಅವರನ್ನು ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.ಬಿಇಒ ಎಚ್.ಎಂ. ಪಡ್ನೇಶಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಎಚ್.ಬಿ. ರಡ್ಡೇರ, ಆರ್.ಎಸ್. ಬುರಡಿ, ಎಸ್.ಎನ್. ಪಾಟೀಲ, ವಿಜಯ ಕಿರೇಸೂರ, ಮಂಜುನಾಥ ಅಳವಂಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಜಾಲವಾಡಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ದೈಹಿಕ ಶಿಕ್ಷಕರನ್ನು, ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ನಯನ ಅಳವಂಡಿ ಪ್ರಾರ್ಥಿಸಿದರು. ಗಂಗಾಧರ ಅಣ್ಣಿಗೇರಿ ಸ್ವಾಗತಿಸಿದರು. ಶರಣು ಗೋಗೇರಿ ಪ್ರಾಸ್ತಾವಿಕ ಮಾತನಾಡಿದರು. ಹನುಮರೆಡ್ಡಿ ಇಟಗಿ ನಿರೂಪಿಸಿದರು.

Share this article