ಒಳ ಮೀಸಲು ಜಾರಿಗೆ ಸರ್ಕಾರದಿಂದಲೇ ವಿಳಂಬ

KannadaprabhaNewsNetwork |  
Published : Aug 19, 2025, 01:00 AM IST
ಮೀಸಲಾತಿ  | Kannada Prabha

ಸಾರಾಂಶ

ಒಳ ಮೀಸಲು ಜಾರಿಗೆ ತರುವಲ್ಲಿ ಸರ್ಕಾರ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದು ನ್ಯಾ.ಸದಾಶಿವ ಆಯೋಗ ಜಾತಿಗಣತಿ, ಸದಾಶಿವ ಆಯೋಗದ ವರದಿ, ನಾಗಮೋಹನ್ ದಾಸ್ ವರದಿ ಹಾಗೂ ಬಿಜೆಪಿ ಸರ್ಕಾರದ ಮಾಧುಸ್ವಾಮಿರ ವರದಿ ಸೇರಿದಂತೆ ಎಲ್ಲ ಆಯೋಗಗಳು ಒಳ ಮೀಸಲಾತಿಯ ವರದಿ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಅಹಿಂದ ವರ್ಗಗಳ ಹೆಸರಿನಲ್ಲಿ ಅಧಿಕಾರ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಳಂಬ ಧೋರಣೆ ಮಾಡುತ್ತಾರೆಂದು ಮಾದಿಗ ಜಾಗೃತಿ ಸಮಿತಿ ಆರೋಪಿಸಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಸಮಿತಿಯ ಪದಾಧಿಕಾರಿಗಳು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಮನವಿ ಸಲ್ಲಿಸಿ, ಒಳ ಮೀಸಲಾತಿ ಪರಿಶಿಷ್ಟ ಜಾತಿಯಲ್ಲಿ ನೂರೊಂದು ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕೊಡುತ್ತದೆ. ಒಳ ಮೀಸಲಾತಿಯನ್ನು ಶೀಘ್ರವಾಗಿ ಜಾರಿಗೊಳಿಸಲು ವಿಧಾನಸಭೆಯ ಅಧಿವೇಶನದಲ್ಲಿ ಬೆಂಬಲ ನೀಡಬೇಕು ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದರು.

ಸರ್ಕಾರಕ್ಕೇ ಪರಮಾಧಿಕಾರ

ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರವೇ ಜಾರಿಗೊಳಿಸಬಹುದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷ ಕಳೆದರೂ ಸರ್ಕಾರ ಕಾಲಹರಣ ಮಾಡಿಕೊಂಡು ಬರುತ್ತಿದ್ದು ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರವು ಸಮುದಾಯವನ್ನು ನಿರ್ಲಕ್ಷದಿಂದ ನೋಡುತ್ತಿದೆಯೆಂದು ಆರೋಪಿಸಿದರು.

ಸಮಿತಿಯ ಮುಖಂಡ ಡಾ. ವಿ. ಅಮರ್ ಮಾತನಾಡಿ, ೩೦ ವರ್ಷಗಳಿಂದ ನಿರಂತರ ಹೋರಾಟದ ಪ್ರತಿಫಲವಾಗಿ ಒಳಮೀಸಲಾತಿ ಅವಕಾಶ ಸಿಕ್ಕಿದೆ ಆದರೆ ಸರ್ಕಾರ ಅದನ್ನು ಜಾರಿಗೆ ತರುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದು ೨೦೧೧ರಲ್ಲಿ ಸದಾಶಿವ ಆಯೋಗ ಜಾತಿಗಣತಿ, ೨೦೧೨ರಲ್ಲಿ ಸದಾಶಿವ ಆಯೋಗದ ವರದಿ, ನಾಗಮೋಹನ್ ದಾಸ್ ವರದಿ ಹಾಗೂ ಬಿಜೆಪಿ ಸರ್ಕಾರದ ಮಾಧುಸ್ವಾಮಿರ ವರದಿ ಸೇರಿದಂತೆ ಎಲ್ಲಾ ಆಯೋಗಗಳು ಒಳ ಮೀಸಲಾತಿಯ ಪರವಾಗಿ ವರದಿ ನೀಡಿದ್ದರೂ ಸರ್ಕಾರ ಒಳಮೀಸಲಾತಿಯನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆಯೆಂದು ಆರೋಪಿಸಿದರು.

ಹರಿಯಾಣದಲ್ಲಿ ಜಾರಿ

ಪ್ರಗತಿಪರ ಚಿಂತಕ ಎನ್ ಕೃಷ್ಣಪ್ಪ ಮಾತನಾಡಿ, ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಒಳ ಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ರಾಜ್ಯ ಸರ್ಕಾರ ಆಮೆ ಗತಿಯಲ್ಲಿ ಸಾಗುತ್ತಿರುವುದು ನೋವಿನ ಸಂಗತಿಯಾಗಿದೆಯೆಂದರು. ಆದರೆ ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ ನ ತೀರ್ಪು ಬಂದ ಮೊದಲ ವಾರದಲ್ಲಿ ಒಳಮಿಸಲಾತಿ ಜಾರಿ ಮಾಡಿದ್ದು, ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಈ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆಯೆಂದರು.

ಈ ಸಂದರ್ಭದಲ್ಲಿ ಮುಖಂಡ ಜಂಗಮಶೀಗೇಹಳ್ಳಿ ದೇವರಾಜ್, ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಪ್ಪ, ಗಂಗುಲಪ್ಪ, ಶೇಷಾದ್ರಿ, ಕೃಷ್ಣಪ್ಪ, ಬೀಡಾ ಶ್ರೀನಿವಾಸ್, ಬಿ.ವಿ.ವೆಂಕಟರಮಣಪ್ಪ ಭಾಗವಹಿಸಿದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?