17- 18 ರಂದು ಪಿಲಿಕುಳದಲ್ಲಿ ಸರ್ಕಾರಿ ಕಂಬಳ; ಕರಾವಳಿ ಉತ್ಸವ ಪಿಲಿಕುಳಕ್ಕೆ ವಿಸ್ತರಣೆ ಸಂಭವ

KannadaprabhaNewsNetwork |  
Published : Nov 02, 2024, 01:22 AM IST
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ  | Kannada Prabha

ಸಾರಾಂಶ

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಹೊರವಲಯದ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಈ ವರ್ಷದಿಂದ ಸರ್ಕಾರಿ ಪ್ರಾಯೋಜಿತ ‘ಪಿಲಿಕುಳ ಕಂಬಳ’ವನ್ನು ನ. 17 ಮತ್ತು 18 ರಂದು ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್‌ನಲ್ಲಿ ನಗರದ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದ ಕರಾವಳಿ ಉತ್ಸವದ ಪ್ರಮುಖ ಕಾರ್ಯಕ್ರಮಗಳನ್ನು ಪಿಲಿಕುಳಕ್ಕೂ ವಿಸ್ತರಿಸಲು ತೀರ್ಮಾನಿಸಲಾಗಿದೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಪಿಲಿಕುಳದಲ್ಲಿ ಕಂಬಳಕ್ಕೆ ಸಂಬಂಧಿಸಿ ಕಂಬಳ ಕರೆ ನಿರ್ಮಾಣದ ಕಾರ್ಯ ಶೇ. 70 ರಷ್ಟು ಪೂರ್ಣಗೊಂಡಿದೆ. ಕರೆ ನಿರ್ಮಾಣ, ಕಂಬಳ ಆಯೋಜನೆ ಸೇರಿದಂತೆ ಸುಮಾರು 70 ಲಕ್ಷ ರು. ಅನುದಾನ ಅಗತ್ಯವಿದೆ. ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿಯವರು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ 5 ಲಕ್ಷ ರು.ಗಳನ್ನು ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ರಶ್ಮಿ ಮಾಹಿತಿ ನೀಡಿದರು.

ಕಂಬಳದ ಖರ್ಚು ವೆಚ್ಚಗಳನ್ನು ಜಿಲ್ಲಾಡಳಿತದ ಸಮಿತಿ ಮೂಲಕವೇ ನಿರ್ವಹಿಸಬೇಕು. ಈ ಬಗ್ಗೆ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಬೇಕು. ವಿವಿಧ ಸಮಿತಿಗಳನ್ನು ರಚಿಸಿ ಕೂಡಲೇ ಕಾರ್ಯೋನ್ಮುಖವಾಗಬೇಕು ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

ಕಂಬಳ ಆಯೋಜನೆಯಾಗುವ ಪ್ರದೇಶದ ಸ್ಥಳೀಯ ಶಾಸಕರ ಅಧ್ಯಕ್ಷತೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಗೌರವಾಧ್ಯಕ್ಷತೆಯ ಸಮಿತಿ ರಚಿಸಿ, ಕಂಬಳಕ್ಕೆ ಸಂಬಂಧಿಸಿ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕಂಬಳ ನಡೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ಧನವಾಗಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ತಲಾ 5 ಲಕ್ಷ ರು.ಗಳನ್ನು ಒದಗಿಸಲಾಗುತ್ತಿತ್ತು. ಕಳೆದ ವರ್ಷ ಆ ಹಣ ಬಿಡುಗಡೆಯಾಗಿಲ್ಲ. ಪ್ರತಿ ಕಂಬಳದವರಿಗೂ ಈ ಪ್ರೋತ್ಸಾಹ ಧನವನ್ನು ಒದಗಿಸಬೇಕು ಎಂದು ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿಯವರು ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಶಾಸಕರಾದ ಡಾ. ಭರತ್‌ ಶೆಟ್ಟಿ, ರಾಜೇಶ್‌ ನಾಯ್ಕ್‌, ಕಿಶೋರ್‌ ಕುಮಾರ್‌, ಮೇಯರ್‌ ಮನೋಜ್‌ ಕೋಡಿಕಲ್‌, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಾಲಿಕೆ ಸದಸ್ಯರಾದ ಪ್ರವೀಣ್‌ ಚಂದ್ರ ಆಳ್ವ, ಎ.ಸಿ. ವಿನಯರಾಜ್‌, ಅನಿಲ್‌ ಕುಮಾರ್‌, ಕಂಬಳ ಸಮಿತಿಯ ಪ್ರಮುಖರಾದ ದೇವಿ ಪ್ರಸಾದ ಶೆಟ್ಟಿ, ಗುಣಪಾಲ ಕಡಂಬ, ಜಿ.ಪಂ. ಸಿಇಒ ಡಾ. ಆನಂದ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್‌, ಪಾಲಿಕೆ ಆಯುಕ್ತ ಆನಂದ್‌, ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ಮತ್ತಿತರರಿದ್ದರು. ಪಿಲಿಕುಳಕ್ಕೂ ಕರಾವಳಿ ಉತ್ಸವ ವಿಸ್ತರಣೆ:

ನಗರದ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಸಲಾಗುತ್ತಿದ್ದ, ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡ ಕರಾವಳಿ ಉತ್ಸವವನ್ನು ಈ ಬಾರಿ ಪಿಲಿಕುಳಕ್ಕೆ ವಿಸ್ತರಿಸಲು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.

ಪಿಲಿಕುಳದ ಅರ್ಬನ್‌ ಹಾತ್‌, ಸಾಂಸ್ಕೃತಿಕ ಗ್ರಾಮ ಸೇರಿದಂತೆ ಲಭ್ಯವಿರುವ ಎಲ್ಲ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಅಲ್ಲಿನ ವಿಶಾಲವಾದ ಪ್ರದೇಶದಲ್ಲಿ ನಡೆಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದರು.

ದ.ಕ. ಜಿಲ್ಲೆಯ ಭಾಷಾ ವೈವಿಧ್ಯತೆ, ಕೊರಗ ಸಮುದಾಯದ ಸಂಸ್ಕೃತಿಯ ಅನಾವರಣ ಸೇರಿದಂತೆ ಹೊಸ ರೀತಿಯಲ್ಲಿ ಗ್ಲೋಬಲ್‌ ವಿಲೇಜ್‌ ಮಾದರಿಯಲ್ಲಿ ಕರಾವಳಿ ಉತ್ಸವ ಆಚರಿಸಲು ಚಿಂತಿಸಲಾಗಿದೆ. ಡಿಸೆಂಬರ್‌ ತಿಂಗಳ ಎರಡನೇ ಶನಿವಾರ(ಡಿ.14)ದಿಂದ ಜನವರಿ ತಿಂಗಳ(ಜ.15)ವರೆಗೆ ಒಂದು ತಿಂಗಳ ಅವಧಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಡಿ. 13ರಂದು ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಸಿ ಬಳಿಕ ಒಂದು ತಿಂಗಳ ಕಾಲ ಕರಾವಳಿ ಉತ್ಸವ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಿಲಿಕುಳದಲ್ಲಿ ಕಂಬಳಕ್ಕೆ ಸೈಲೆನ್ಸ್‌ ಝೋನ್‌ ಅಡ್ಡಿ?ಪ್ರಾಣಿ ಹಿಂಸೆಯ ನೆಪದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಸುವುದಕ್ಕೆ ಈಗಾಗಲೇ ಹೈಕೋರ್ಟ್‌ಗೆ ಕೆಲವರು ಮೊರೆ ಹೋಗಿದ್ದಾರೆ. ಪಿಲಿಕುಳದಲ್ಲಿರುವ ವನ್ಯ ಜೀವಿಗಳಿಗೂ ಕಂಬಳದಿಂದ ತೊಂದರೆ ಆಗಲಿದೆ ಎಂದು ಹೈಕೋರ್ಟ್‌ನಲ್ಲಿ ಕಳೆದೆರಡು ದಿನಗಳ ಹಿಂದೆ ದೂರು ಸಲ್ಲಿಕೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್‌ ರೈ ಗಮನ ಸೆಳೆದರು.

ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ