ಕಿನ್ನಾಳದ ಸರ್ಕಾರಿ ಭೂಮಿ ಕೊಪ್ಪಳ ವಿವಿಗೆ ಸೂಕ್ತ

KannadaprabhaNewsNetwork |  
Published : Nov 11, 2024, 01:07 AM IST
ಕೊಪ್ಪಳ ವಿಶ್ವವಿದ್ಯಾಲಯ | Kannada Prabha

ಸಾರಾಂಶ

ಕೊಪ್ಪಳ ವಿಶ್ವವಿದ್ಯಾಲಯ ಈಗ ಸೂಕ್ತ ಜಾಗ ಇಲ್ಲದಂತೆ ಆಗಿರುವುದರಿಂದ ತಾತ್ಕಾಲಿಕವಾಗಿ ಕುಕನೂರಿನ ತಳಕಲ್ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ನಡೆಯುತ್ತಿದೆ.

ಕಿನ್ನಾಳ ಗ್ರಾಮದ ಮುಖಂಡರು ಕೊಪ್ಪಳ ವಿವಿ ಕುಲಪತಿಗೆ ಮನವಿ

ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಭೂಮಿ ಹುಡುಕಾಟಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ವಿಶ್ವವಿದ್ಯಾಲಯ ಈಗ ಸೂಕ್ತ ಜಾಗ ಇಲ್ಲದಂತೆ ಆಗಿರುವುದರಿಂದ ತಾತ್ಕಾಲಿಕವಾಗಿ ಕುಕನೂರಿನ ತಳಕಲ್ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ನಡೆಯುತ್ತಿದೆ. ಅದಕ್ಕೊಂದು ಸೂಕ್ತ ಸ್ಥಳ ಮತ್ತು ಕಟ್ಟಡದ ಅಗತ್ಯವಾಗಿದ್ದು, ಇಚ್ಛಾಶಕ್ತಿಯ ಕೊರತೆಯಿಂದ ಅದು ಕಾರ್ಯಗತವಾಗುತ್ತಲೇ ಇಲ್ಲ.

ಹೌದು, ಕೊಪ್ಪಳ ವಿಶ್ವವಿದ್ಯಾಲಯ ಮಂಜೂರಿಯಾಗಿ ಪ್ರಾರಂಭವಾಗಿದ್ದೇ ಸಾಧನೆಯಾಗಿದ್ದು, ಅದಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲು ಸರ್ಕಾರ ಮುಂದಾಗುತ್ತಿಲ್ಲ. ಆದರೆ, ಅದಕ್ಕೊಂದು ಸೂಕ್ತ ಸ್ಥಳದ ಅಗತ್ಯವಿದೆ.

ಸರ್ಕಾರ ನೂತನವಾಗಿ ಭೂಮಿಯನ್ನು ಖರೀದಿ ಮಾಡಿ, ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ, ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಬಳಿಯೇ ಸರ್ಕಾರಿ ಭೂಮಿ ಇದ್ದು, ಸೂಕ್ತ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕಾಗಿ ಸರ್ಕಾರ ನಯಾಪೈಸೆಯನ್ನು ವೆಚ್ಚ ಮಾಡುವ ಅಗತ್ಯವಿಲ್ಲ. ಆದರೆ, ಸರ್ಕಾರ ಮನಸ್ಸು ಮಾಡಬೇಕಾಗಿದೆ.

ಯಾವುದಿ ಭೂಮಿ?:

ಕಿನ್ನಾಳ ಗ್ರಾಮದ ಬಳಿ ಹಿರೇಹಳ್ಳ ನಿರ್ಮಾಣದ ವೇಳೆಯಲ್ಲಿ ಮರ್ರಂಗಾಗಿಯೇ ಸರ್ಕಾರ ಬರೋಬ್ಬರಿ 65 ಎಕರೆ ಭೂಮಿಯನ್ನು ಖರೀದಿ ಮಾಡಿದೆ. ಅದರಲ್ಲಿ ಮರ್ರಂವನ್ನು ಹಿರೇಹಳ್ಳ ನಿರ್ಮಾಣಕ್ಕಾಗಿ ತೆಗೆದುಕೊಂಡ ಮೇಲೆ ಅದು ಹಾಗೆ ಬಿದ್ದಿದೆ. ಅದರ ಪಕ್ಕದಲ್ಲಿಯೇ ಸರ್ಕಾರಿ ಭೂಮಿಯೂ ಇದೆ. ಹೀಗೆ ಸೇರಿಕೊಂಡು ಹೆಚ್ಚುಕಡಿಮೆ ನೂರು ಎಕರೆ ಸುಲಭವಾಗಿ ಲಭ್ಯವಾಗುತ್ತದೆ. ಹೀಗಾಗಿ, ಈ ಭೂಮಿಯನ್ನೇ ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಗೆ ಬಳಕೆ ಮಾಡಿಕೊಂಡರೆ ಸರ್ಕಾರಕ್ಕೂ ಹೊರೆಯಾಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಕುಲಪತಿಗೆ ಮನವಿ:

ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಭೂಮಿ ಹುಡುಕಾಟ ನಡೆಸಿರುವ ಈ ವೇಳೆಯಲ್ಲಿ ಈ ಭೂಮಿಯನ್ನು ಪರಿಗಣಿಸಿ ಎಂದು ಕುಲಪತಿಗೆ ಕಿನ್ನಾಳ ಗ್ರಾಮದ ಮುಖಂಡರು ಕೊಪ್ಪಳ ವಿವಿ ಕುಲಪತಿಗೆ ಮನವಿ ನೀಡಿದ್ದಾರೆ.

ಸರ್ವೆ ನಂ. 44ರಿಂದ 69ರ ವರೆಗೂ ಸರ್ಕಾರದ ಒಡೆತನದಲ್ಲಿಯೇ 65 ಎಕರೆ ಭೂಮಿ ಇದ್ದು, ವಿಶ್ವವಿದ್ಯಾಲಯ ಸ್ಥಾಪನೆಗೆ ಸೂಕ್ತವಾಗಿದೆ ಎಂದು ಹೇಳಿದ್ದಾರೆ. ಎಲ್ಲಿಯೋ ನಿರ್ಮಾಣ ಮಾಡುವ ಬದಲು, ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಿಂದ ಕೇವಲ ಒಂದೂವರೆ ಕಿ.ಮೀ. ದೂರ ಇರುವ ಈ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ