ಸರ್ಕಾರಿ ಜಮೀನು ಬೇಕಾ ಬಿಟ್ಟಿ ಹಂಚಿಕೆ: ಲೋಕಣ್ಣ ಕತ್ತಿ ಆರೋಪ

KannadaprabhaNewsNetwork |  
Published : Sep 23, 2025, 01:06 AM IST
ಲೋಕಾಪುರ ಎಪಿಎಂಸಿ ಆವರಣದಲ್ಲಿ ಬಿಜೆಪಿ ಮುಖಂಡರು ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಲೋಕಣ್ಣ ಕತ್ತಿ, ವ್ಹಿ.ಎಂ.ತೆಗ್ಗಿ, ಹೊಳಬಸು ಕಾಜಗಾರ, ವಿರೇಶ ಪಂಚಕಟ್ಟಿಮಠ, ಅರುಣ ಮುಧೋಳ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಸರ್ಕಾರಿ ಜಮೀನುಗಳನ್ನು ಈಗಿನ ಸರ್ಕಾರ ಬೇಕಾ ಬಿಟ್ಟಿಯಾಗಿ ಹಂಚಿಕೆ ಮಾಡುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸರ್ಕಾರಿ ಜಮೀನುಗಳನ್ನು ಈಗಿನ ಸರ್ಕಾರ ಬೇಕಾ ಬಿಟ್ಟಿಯಾಗಿ ಹಂಚಿಕೆ ಮಾಡುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಆರೋಪಿಸಿದರು.

ಪಟ್ಟಣದ ಎಪಿಎಂಸಿಯಲ್ಲಿನ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಹೃದಯ ಭಾಗದಲ್ಲಿರುವ ತಾಪಂನ ಒಡೆತನದ ಸರ್ಕಾರಿ ಜಾಗವನ್ನು ಸಂಸದ ಗೋವಿಂದ ಕಾರಜೋಳ ಅವರ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಅನುಕೂಲವಾಗುವ ಉದ್ದೇಶದಿಂದ ಉಪನೋಂದಣಿ ಕಚೇರಿ ಹಾಗೂ ನಾಡ ಕಚೇರಿ ಕಟ್ಟಡ ನಿರ್ಮಿಸಲು ಸ್ಥಳ ಮೀಸಲಿಟ್ಟಿದ್ದರು ಎಂದರು.

ಆದರೆ ತಾಪಂ ಅಧಿಕಾರಿಗಳು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಬೇರೆ ಜಿಲ್ಲೆಯವರಿಗೆ ಟೆಂಡರ್‌ ನೀಡಿದ್ದಾರೆ. ಇದರಿಂದ ಸ್ಥಳೀಯರಿಗೆ ಅನ್ಯಾಯವಾಗಿದ್ದು, ಉದ್ಯೋಗದಿಂದ ವಂಚಿತರಾಗಿದ್ದಾರೆ. ಈ ಟೆಂಡರನ್ನು ರದ್ದು ಮಾಡಿ ಹೊಸ ಟೆಂಡರ್‌ ಕರೆದು ಸ್ಥಳಿಯರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಮೇಲಧಿಕಾರಿಗಳು ತಾಪಂ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಹೇಳಿದರು.

ವಕೀಲ ಅರುಣ ಮುಧೋಳ ಮಾತನಾಡಿ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸರಕಾರಿ ಮಳಿಗೆಗೆ ನಿಗದಿಪಡಿಸಿದ ದರಕ್ಕಿಂತಲೂ ಕಡಿಮೆ ಬೆಲೆಗೆ ಟೆಂಡರ್ ಕರೆದು ಸರ್ಕಾರಿ ಅಧಿಕಾರಿಗಳು ಲಕ್ಷಾಂತರ ರೂ. ನಷ್ಟ ಉಂಟುಮಾಡಿದ್ದಾರೆ. ೨೦/೧೦೬ ಅಡಿ ಅಳತೆಯ ಜಮೀನನ್ನು ಕೇವಲ ಪ್ರತಿ ತಿಂಗಳಿಗೆ ₹೫೫೦೦ಕ್ಕೆ ಬಾಡಿಗೆಗೆ ನೀಡಿದ್ದಾರೆ, ಪಟ್ಟಣದಲ್ಲಿ ಇಷ್ಟು ಅಳತೆಯ ಅಂಗಡಿಗೆ ತಿಂಗಳಿಗೆ ಅಂದಾಜು ₹೫೦ ರಿಂದ ₹೬೦ ಸಾವಿರ ಬಾಡಿಗೆ ಹೋಗುತ್ತವೆ ಎಂದರು.

ಬಿಜೆಪಿ ಮುಖಂಡ ವಿ.ಎಂ. ತೆಗ್ಗಿ ಮಾತನಾಡಿ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಬಾಡಿಗೆ ಕರಾರು ರದ್ದು ಮಾಡಿ, ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಶೆಡ್‌ ತೆರವುಗೊಳಿಸಿ ತಾಪಂ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಾಗವನ್ನು ನಾಡಕಚೇರಿ ಮತ್ತು ಸಬ್ ರಿಜಿಸ್ಟರ್ ಆಫೀಸ್ ಕಚೇರಿಗೆ ಮೀಸಲಿಡಬೇಕು. ಇಲ್ಲದಿದ್ದರೆ ಲೋಕಾಪುರದ ಸಾರ್ವಜನಿಕರು, ವ್ಯಾಪಾರಸ್ಥರು ರೈತರು ತಾಲೂಕು ಪಂಚಾಯತಿಗೆ ಮುತ್ತಿಗೆ ಹಾಕಿ, ಲೋಕಾಪುರದಲ್ಲಿ ರಸ್ತೆ ಬಂದು ಮಾಡಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ಮುಖಂಡರಾದ ವಿ.ಎಂ.ತೆಗ್ಗಿ, ಬಿ.ಎಲ್. ಬಬಲಾದಿ, ಯಮನಪ್ಪ ಹೊರಟ್ಟಿ, ಕಾಶಿಲಿಂಗ ಮಾಳಿ, ವಿರೇಶ ಪಂಚಕಟ್ಟಿಮಠ, ಹೋಳಬಸು ಕಾಜಗಾರ, ಗೋಪಾಲಗೌಡ ಪಾಟೀಲ, ರಾಮಣ್ಣ ಖಿಲಾರಿ, ಆನಂದ ಹವಳಖೋಡ, ರಮೇಶ ದೇವರಡ್ಡಿ, ಶಶಿಧರ ಕಂಟೆಪ್ಪಗೋಳ ಇದ್ದರು.

PREV

Recommended Stories

1814 ಹುದ್ದೆಗಳ ನೇಮಕಾತಿ ಕುರಿತು ಶೀಘ್ರ ಸಿಹಿ ಸುದ್ದಿ
ಮಾದಕ ವಸ್ತು ಸೇವನೆಯಿಂದ ಹೆಚ್ಚುತ್ತಿರುವ ಅಪರಾಧಗಳು: ನ್ಯಾಯಾಧೀಶೆ ಶಶಿಕಲಾ