ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆ ಬಾಡಿಗೆ ಅರಸಿಕೊಂಡ ಹೋದ ವ್ಯಕ್ತಿಯೊಬ್ಬ, ಅಲ್ಲಿನ ಶೂ ರ್‍ಯಾಕ್‌ನಲ್ಲಿಟ್ಟಿದ್ದ ಆ ಮನೆಯ ಬೀಗ ಕೀ ತೆಗೆದುಕೊಂಡು ಚಿನ್ನಾಭರಣ ದೋಚಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.ವರ್ತೂರು ಕೋಡಿ ಸಮೀಪದ ನಿವಾಸಿ ಕಿರಣ್ ಬಂಧಿತನಾಗಿದ್ದು, ಆರೋಪಿಯಿಂದ 55 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಾಗೊಂಡನಹಳ್ಳಿಯಲ್ಲಿರುವ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕಿರಣ್‌ನನ್ನು ಬಂಧಿಸಿದ್ದಾರೆ.
ಕೆಲಸವಿಲ್ಲದೆ ಅಲೆಯುತ್ತಿದ್ದ ಬಿಇ ಪದವೀಧರ ಕಿರಣ್, ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮನೆ ಬದಲಾಯಿಸಲು ಮುಂದಾಗಿದ್ದ. ಹಾಗಾಗಿ ವರ್ತೂರು ಕೋಡಿ ಸುತ್ತಮುತ್ತ ಪ್ರದೇಶಗಳಲ್ಲಿ ಆತ ಮನೆ ಹುಡುಕಾಡುತ್ತಿದ್ದ. ಆಗ ನಾಗೊಂಡನಹಳ್ಳಿಯ ಟೆಕ್ಕಿ ಮನೆ ಖಾಲಿ ಇದೆ ಎಂದು ಆತನಿಗೆ ಅಲ್ಲಿ ಕಿರಾಣಿ ಅಂಗಡಿ ಮಾಲೀಕರು ತಿಳಿಸಿದ್ದರು. ಅಂತೆಯೇ ಮನೆ ನೋಡಲು ಹೋದಾಗ ಆರೋಪಿಗೆ ಶೂ ರ್‍ಯಾಕ್‌ನಲ್ಲಿ ಬೀಗದ ಕೀ ಸಿಕ್ಕಿದೆ. ಆ ಕೀ ಬಳಸಿ ಮನೆ ಬೀಗ ತೆರೆದು ಒಳ ಪ್ರವೇಶಿಸಿದ ಆರೋಪಿ, ಆ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಕೆಲಸ ಮುಗಿಸಿ ಮನೆಗೆ ಟೆಕ್ಕಿ ದಂಪತಿ ಮರಳಿದ ಬಳಿಕ ಕಳ್ಳತನ ಸಂಗತಿ ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.