ಬೇತಮಂಗಲ: ಕ್ಯಾಸಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಮನೆ ಕಳವು ಪ್ರಕರಣದಲ್ಲಿ ಕೆಜಿಎಫ್ ತಾಲೂಕಿನ ರಾಮಸಾಗರ ಗ್ರಾಮದ ವಾಸಿ ಅರುಣ್‍ಕುಮಾರ್ (27 ವರ್ಷ) ಎಂಬಾತನನ್ನು ಬಂಧಿಸಿ, ಆತನಿಂದ ಸುಮಾರು ₹65,000 ಮೌಲ್ಯದ 1 ಗ್ರಾಂ 490 ಮಿಲಿ ಬಂಗಾರ, 3 ಮೊಬೈಲ್ ಫೋನ್, ಒಂದು ವುಡ್ ಕಟ್ಟರ್ ಯಂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆ. 10 ರಂದು ಐವಾರಹಳ್ಳಿ ಗ್ರಾಮದ ವಾಸಿ ಜಗನ್ನಾಥ ಸಮಂತ್ ಅವರ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಡಿವೈಎಸ್‍ಪಿ ವಿ.ಲಕ್ಷ್ಮಯ್ಯ ಅವರ ಮಾರ್ಗದರ್ಶನದಲ್ಲಿ ಬೇತಮಂಗಲ ಸಿಪಿಐ ವೈ.ಆರ್.ರಂಗಶಾಮಯ್ಯ ಮತ್ತು ಕ್ಯಾಸಂಬಳ್ಳಿ ಪಿಎಸ್‍ಐ ಸಂಗಮೇಶ್ ಕೊಲ್ಹಾರ್ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಸಂಗಮೇಶ್ ಕೊಲ್ಹಾರ್ ಮತ್ತು ಸಿಬ್ಬಂದಿ ಶ್ರೀನಿವಾಸ, ಮುನಿರಾಜು, ಗಜೇಂದ್ರ, ಸಿದ್ದರಾಮ ಪಾಟೀಲ್ ಮತ್ತು ಧನಸಿಂಗ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.
ಚಿತ್ರ 02 ವಶಪಡಿಸಿಕೊಂಡ ಮಾಲಿನೊಂದಿಗೆ ಕ್ಯಾಸಂಬಳ್ಳಿ ಪೊಲೀಸರು.