ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ವೇಳೆ ಭೂ ಮಾಪಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಕೃಷ್ಣಾರೆಡ್ಡಿ ಮಾತನಾಡಿ, ಸರ್ಕಾರಿ ಪರವಾನಗಿ ಭೂಮಾಪಕರಾದ ನಾವು ಸುಮಾರು 23 ವರ್ಷಗಳಿಂದ ಸತತವಾಗಿ ರೈತರು ಮತ್ತು ಸರ್ಕಾರದ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದು, ಇಲಾಖೆಗೆ ಹೆಸರು ತರುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ವಯೋಮಿತಿ ಕಳೆದುಕೊಂಡಿದ್ದು, ಭೂಮಾಪಕರ ಕೆಲಸವನ್ನು ಬಿಟ್ಟು, ಬೇರೆ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ನಮ್ಮ ಸೇವೆಯನ್ನು ಪರಿಗಣಿಸಿ, ಸರ್ಕಾರಿ ಭೂಮಾಪಕರ ಹುದ್ದೆಯಲ್ಲಿ ವಿಲೀನಗೊಳಿಸಬೇಕು, ಇಲ್ಲವಾದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆಯೂ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ಸಹ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಸ್ಪಂದಿಸುತ್ತಿಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು.
ಪರವಾನಗಿ ಭೂಮಾಪಕರಾದ ನಾವು ಇಂದು ಸರ್ಕಾರಿ ಭೂಮಾಪಕರು ನಿರ್ವಹಿಸುವ ಎಲ್ಲಾ ತರಹದ ಕೆಲಸ ಕಾರ್ಯಗಳನ್ನು ಇಲಾಖೆ ಮತ್ತು ಸರ್ಕಾರ ಹೇಳಿದಂತೆ ನಿರ್ವಹಿಸುತ್ತಿದ್ದು, 11ಇ, ತತ್ಕಾಲ್ ಪೋಡಿ, ಆಲಿನೇಷನ್, ಹದ್ದುಬಸ್ತು, ನ್ಯಾಯಾಲಯದ ಪ್ರಕರಣಗಳು, ಇ-ಸ್ವತ್ತು, ಪಿಎಂಜಿಎ, ಸ್ವಾಮಿತ್ವ ಸಮೀಕ್ಷೆ, ಆಕಾರಬಂದ್, ಡಾಟಾ ಎಂಟ್ರಿ, ದರಖಾಸ್ತು ಪೋಡಿ, ಕೆರೆಗಳ ಅಳತೆ, ನಾಲಾ ಅಳತೆ, ವಿದ್ಯುತ್ ಲೈನ್ ಅಳತೆ, ಮುಜರಾಯಿ ದೇವಸ್ಥಾನಗಳ ಅಳತೆ, ರಾಷ್ಟ್ರೀಯ ಹೆದ್ದಾರಿಗಳ ನಕ್ಷೆ ಸ್ವಾಮಿತ್ವ, ಗ್ರಾಮಠಾಣಾ, ವಕ್ಫ್ ಬೋರ್ಡ್, ನೀರಾವರಿ ಕಾಲುವೆ ಮುಂತಾದ ಅಳತೆಗಳನ್ನು ನಿರ್ವಹಿಸುತ್ತಿದ್ದು, ಯಾವುದೇ ಭದ್ರತೆ ಇಲ್ಲದೇ, ಸೇವಾ ಆಧಾರವಿಲ್ಲದೇ, ಕನಿಷ್ಠ ಸೇವಾ ಶುಲ್ಕವನ್ನು ಪಡೆದು ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಇಲಾಖೆ ಮತ್ತು ಸರ್ಕಾರ ನಿಗಧಿಮಾಡಿರುವ ಸೇವಾ ಶುಲ್ಕ ಅವೈಜ್ಞಾನಿಕವಾಗಿದ್ದು, ನಮ್ಮ ಸ್ಥಿತಿ ಜೀತದಾಳುಗಳ ಪರಿಸ್ಥಿತಿಗಿಂತ ಕನಿಷ್ಠವಾಗಿರುವುದರಿಂದ ನಾವು ಕೆಲಸ ನಿರ್ವಹಿಸಲು ಮತ್ತು ಜೀವನ ನಡೆಸಲು ಆಗದೇ ಇರುವಂತಹ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಂದರು.ದರಖಾಸ್ತು ಪೋಡಿಗಾಗಿ ಭೂಮಾಪಕರಿಗೆ ಸೇವಾ ಶುಲ್ಕ ನಮ್ಮ ಜಿಲ್ಲೆಯಲ್ಲಿ ಒಂದು ಬ್ಲಾಕ್‌ಗೆ ₹60 , 80 , 160ರಂತೆ ಅವೈಜ್ಞಾನಿಕವಾಗಿ ನೀಡಿದ್ದು, ತಿಂಗಳಿಗೆ ₹5000ದಿಂದ ₹8000 ಸೇವಾ ಶುಲ್ಕ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ಪರವಾನಗಿ ಭೂಮಾಪಕರಿಗೆ ಕೇಂದ್ರ ಸರ್ಕಾರದ ಯೋಜನೆಯಾದ ನಕ್ಷೆ ಸ್ವಾಮಿತ್ವ ಅಳತೆಗಳು ನಿಯೋಜನೆಯಾಗುತ್ತಿದ್ದು, ಇದರಲ್ಲಿ ಪ್ರತಿ ತಿಂಗಳಿಗೆ ₹25,000 ನಿಗಧಿಮಾಡಿದ್ದು, ಪ್ರತಿ ದಿನವೊಂದಕ್ಕೆ 50 ಪ್ರಕರಣಗಳನ್ನು ಅಳತೆ ಮಾಡಬೇಕೆಂಬ ನಿಯಮವಿಟ್ಟು ಕೆಲಸವನ್ನು ನಿಯೋಜನೆ ಮಾಡುತ್ತಾರೆ. ಆದರೆ ನೈಜ ಪರಿಸ್ಥಿತಿಯಲ್ಲಿ ನಗರ ಪ್ರದೇಶಗಳಲ್ಲಿ ದಿನಕ್ಕೆ 25 ರಿಂದ 30 ಪ್ರಕರಣಗಳನ್ನು ಮಾತ್ರ ಮಾಡಲು ಸಾಧ್ಯವಾಗುತ್ತಿದ್ದು, ಇದರಿಂದ ಪ್ರಗತಿ ಸಾಧಿಸದಿದ್ದರೆ ₹25000 ಗಳಲ್ಲಿ ಕಡಿತ ಮಾಡಿ, ₹5000 ರಿಂದ ₹10000 ಮಾಹೆಯಾನ ಬರುತ್ತಿದ್ದು, ಇದನ್ನೂ ಸಹ ಸರಿಯಾದ ಸಮಯಕ್ಕೆ ಕೊಡದೇ 3- 4 ತಿಂಗಳಿಗೊಮ್ಮೆ ನೀಡುತ್ತಿದ್ದಾರೆ. ಕೂಡಲೇ ನಮಗೆ ಸೇವಾ ಭದ್ರತೆ, ಜೀವನ ಭದ್ರತೆ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಇಲಾಖೆಯ ಸರ್ಕಾರಿ ಭೂಮಾಪಕರ ಹುದ್ದೆಯಲ್ಲಿ ವಿಲೀನಗೊಳಿಸಿ ಸಾವಿರಾರು ಕುಟುಂಬಗಳ ನಿರ್ವಹಣೆಗೆ ಅನುವು ಮಾಡಿಕೊಡಬೇಕಾಗಿ ಸರ್ಕಾರವನ್ನು ವಿನಂತಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘದ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಬಿ.ಆರ್. ಗಂಗರೆಡ್ಡಿ, ಶಿಡ್ಲಘಟ್ಟ ಅಧ್ಯಕ್ಷ ಬಿ.ಟಿ.ವೆಂಕಟೇಶ್, ಗೌರಿಬಿದನೂರು ವೇಮಾರೆಡ್ಡಿ, ಚಿಂತಾಮಣಿ ನಂಜರೆಡ್ಡಿ, ಚಿಕ್ಕಬಳ್ಳಾಪುರ ಲಕ್ಷ್ಮೀನಾರಾಯಣರೆಡ್ಡಿ, ಗುಡಿಬಂಡೆ ಅಖಿಲ್ ಕುಮಾರ್, ಚೇಳೂರು, ಗಂಗರೆಡ್ಡಿ ಮತ್ತಿತರರು ಇದ್ದರು.