ಕನ್ನಡಪ್ರಭ ವಾರ್ತೆ ಹಿರಿಯೂರು
ಮದಕರಿ ಯುವಕ ಸಂಘ, ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಐಮಂಗಲದ ಪೊಲೀಸ್ ತರಬೇತಿ ಶಾಲೆಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಸದಾ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿರುತ್ತಾನೆ. ಇಂತಹ ಒತ್ತಡದಿಂದ ಹೊರ ಬರಲು ಸಂಗೀತದ ಮೊರೆ ಹೋಗುವುದು ಸುಲಭದ ಮಾರ್ಗವೆಂದರು.
ಆಧುನಿಕ ತಂತ್ರಜ್ಞಾನ ಮೊಬೈಲ್ ಇಂದು ಅನೇಕ ಸಮಸ್ಯೆ ಸೃಷ್ಟಿಸುತ್ತಿದೆ. ಮೊಬೈಲ್ ಗೀಳಿನಿಂದ ಯುವಕರು ಬೇರೆಯದೇ ಒತ್ತಡದಲ್ಲಿ ಮುಳುಗುತ್ತಿದ್ದಾರೆ. ಮೊಬೈಲ್ ಗೀಳು ಒಳ್ಳೆಯದಲ್ಲವೆಂದು ಹೇಳಿದರೂ ಕೇಳಿಸಿಕೊಳ್ಳುವ ಪರಿಸ್ಥಿಯಲ್ಲಿ ಯುವಕರು ಇಲ್ಲ. ಇದಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲ. ನಡೆ, ನುಡಿ ಮನಸ್ಸನ್ನು ಶುದ್ದಗೊಳಿಸುವ ಪ್ರಾಚೀನ ಕಲೆ ಸಂಗೀತ ಮಾತ್ರ ಸಿದ್ಧೌಷಧವಾಗಬಲ್ಲದೆಂದರು.ಸಂಗೀತ ಹಾಡುವುದು ಒಂದು ಕಲೆಯಾದರೆ ಅದನ್ನು ಕೇಳುವುದು, ಪ್ರೋತ್ಸಾಹ ಮಾಡುವುದು ಒಂದು ಕಲೆಯಾಗಿದೆ. ಮಾನವ ಎಲ್ಲಾ ಕಲೆಯನ್ನು ಬಲ್ಲವನಾಗಿದ್ದಾನೆ. ಆದರೆ ತಮಗೆ ಬೇಕಾದ ಕಲೆಯನ್ನು ಮಾತ್ರ ರೂಢಿಸಿಕೊಳ್ಳುತ್ತಾನೆ. ಕಲೆ ಇಂದಿನ ದಿನಮಾನದಲ್ಲಿ ಅನಿವಾರ್ಯ ಮತ್ತು ಅಗತ್ಯವಾಗಿದೆ. ಸಂಗೀತವನ್ನು ಆಸ್ವಾದಿಸುವವರಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಉತ್ತಮವಾಗಿರುತ್ತದೆ. ಸೌಹಾರ್ದ ಸಾಮರಸ್ಯವನ್ನು ಮೂಡಿಸುತ್ತದೆ. ಭಾವನಾತ್ಮಕವಾದ ಆರೋಗ್ಯವನ್ನು ಉಂಟು ಮಾಡುತ್ತದೆ ಎಂದು ಹೇಳಿದರು.
ಪೋಲಿಸ್ ತರಬೇತಿ ಶಾಲೆ ಪ್ರಾಂಶುಪಾಲ ಪಿ.ಪಾಪಣ್ಣ ಮಾತನಾಡಿ, ಒತ್ತಡ ನಿವಾರಣೆ ಮಾಡಲು ಸಂಗೀತ ಉತ್ತಮವಾದ ಸಾಧನವಾಗಿದೆ. ಇಂದು ಸಂಗೀತಕ್ಕೆ ತಲೆ ಭಾಗದವರು ಯಾರು ಇಲ್ಲ. ಪ್ರಾಣಿ, ಪಕ್ಷಿಗಳು, ಮಾನವರು, ಗಿಡಗಳು ಸಹಾ ಸಂಗೀತಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿವೆ ಎಂದರು.