ಕನ್ನಡಪ್ರಭ ವಾರ್ತೆ ಪುತ್ತೂರು
ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ರಾಜ್ಯ ಸರ್ಕಾರ ತನ್ನ ಉಚಿತ, ಖಚಿತ, ನಿಶ್ಚಿತ ಹೇಳಿಕೆಗಳಿಗೆ ಸೀಮಿತವಾಗಿ ಜನರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಬೆಲೆ ಏರಿಕೆ ಬಡ ಜನತೆಯ ಬದುಕಿಗೆ ಹೊಡೆತ ನೀಡುತ್ತಿದ್ದು, ಈಗಾಗಲೇ ರಾಜ್ಯದ ಮೇಲೆ ರು. ೩ ಲಕ್ಷ ಕೋಟಿ ಸಾಲದ ಹೊರೆ ಇದೆ. ಮುಂದಿನ ೫ ವರ್ಷಗಳಲ್ಲಿ ಈ ಸಾಲದ ಹೊರೆ ರಾಜ್ಯ ರು. ೧೦ ಲಕ್ಷ ಕೋಟಿ ದಾಟಲಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.ಅವರು ಸೋಮವಾರ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಸ್ಮಾರಕದ ಬಳಿ ಭಾರತೀಯ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಯ ಬಗ್ಗೆ ರಾಜ್ಯ ಸರ್ಕಾರ ವೈಫಲ್ಯ ಖಂಡಿಸಿ ನಡೆದ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕರಾವಳಿಗೆ ಪ್ರತ್ಯೇಕ ಮರಳು ನೀತಿಯನ್ನು ಜಾರಿಗೆ ತರಬೇಕು. ಈ ಹಿನ್ನಲೆಯಲ್ಲಿ ನೊಂದವರ ಪರವಾಗಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ ಎಂದರು.ಸಭೆಯ ಬಳಿಕ ಪುತ್ತೂರು ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಹಿರಿಯ ವರ್ತಕ ವಾಮನ್ ಪೈ ಅಭಿಪ್ರಾಯ ಹಂಚಿಕೊಂಡರು. ನೆಲ್ಲಿಕಟ್ಟೆಯ ಖಾಸಗಿ ಬಸ್ ನಿಲ್ದಾಣದಿಂದ ಕಿಲ್ಲೆ ಮೈದಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಯು.ಲೊಕೇಶ್ ಹೆಗ್ಡೆ ಮಾತನಾಡಿದರು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಕೆಂಪು ಕಲ್ಲು ಉದ್ಯಮಿ ಪುರಂದರ ಶೆಟ್ಟಿ ಉಪಸ್ಥಿತರಿದ್ದರು. ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿದರು. ಉಮೇಶ್ ಕೋಡಿಬೈಲು ವಂದಿಸಿದರು. ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ನಿರೂಪಿಸಿದರು.