ಕೋಟೆ ನಾಡಿಗೆ ಬಂತು ಸರ್ಕಾರಿ ವೈದ್ಯ ಕಾಲೇಜು

KannadaprabhaNewsNetwork |  
Published : Mar 14, 2026, 02:45 AM IST
ಸಾಂದರ್ಭಿಕ ಚಿತ್ರ.... | Kannada Prabha

ಸಾರಾಂಶ

ಮುಳುಗಡೆ ನಾಡು ಎಂಬ ಪದನಾಮ ಹೊತ್ತ ಬಾಗಲಕೋಟೆಯಲ್ಲಿ ಲಕ್ಷಾಂತರ ಜನರ ಕನಸು ಈಗ ನನಸಾಗುತ್ತಿದೆ. ಬಹುವರ್ಷಗಳ ಕನಸಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.14ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈಶ್ವರ ಶೆಟ್ಟರ್‌

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಳುಗಡೆ ನಾಡು ಎಂಬ ಪದನಾಮ ಹೊತ್ತ ಬಾಗಲಕೋಟೆಯಲ್ಲಿ ಲಕ್ಷಾಂತರ ಜನರ ಕನಸು ಈಗ ನನಸಾಗುತ್ತಿದೆ. ಬಹುವರ್ಷಗಳ ಕನಸಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.14ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಬಾಗಲಕೋಟೆಗೂ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಒತ್ತಾಯ ಹಲವಾರು ದಶಕಗಳಿಂದ ಕೇಳಿಬರುತ್ತಲೇ ಇತ್ತು. ಪ್ರತಿ ಬಜೆಟ್‌ ಸಂದರ್ಭದಲ್ಲಿ ಅದರ ಕೂಗು ಮತ್ತಷ್ಟು ಹೆಚ್ಚಾಗುತ್ತಿತ್ತು. ಇಷ್ಟು ವರ್ಷಗಳ ಕೂಗಿಗೆ ಈಗ ಕೋಟೆ ನಾಡಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಬುನಾದಿ ಸಿಕ್ಕಂತಾಗಿದೆ. ಬಾಗಲಕೋಟೆ ನಗರದಲ್ಲಿಯೇ ಅಂದಾಜು 75ಕ್ಕೂ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ನಾನಾ ರೋಗಗಳಿಗೂ ಅನೇಕ ತಜ್ಞ ವೈದ್ಯರು ಕೂಡ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಆದರೆ, ಕೂಲಿಕಾರರು, ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಈಗ ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ತೆರೆಯಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈಗ ಸಿದ್ಧಗೊಂಡಿದೆ.

ಎಲ್ಲಿದೆ ಜಾಗ?:

ನವನಗರದ ಯುನಿಟ್-1ರಲ್ಲಿ ಬರುವ ಸೆಕ್ಟರ್‌ ನಂ.1 ಮತ್ತು 13ರಲ್ಲಿ ಒಟ್ಟು 42 ಎಕರೆ ಜಮೀನಿನಲ್ಲಿ ₹450 ಕೋಟಿ ವೆಚ್ಚದ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ಇದರ ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಈಗ ಜಿಲ್ಲಾ ಆಸ್ಪತ್ರೆಯನ್ನು ಬಳಸಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾರ್ಗಸೂಚಿಗಳಂತೆ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲು ಯೋಜಿಸಲಾಗಿದೆ.2014ರಲ್ಲೇ ಪ್ರಸ್ತಾವವಾಗಿತ್ತು ಕಾಲೇಜು:

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಹಿಂದೆ ದಿ.ಎಚ್‌.ವೈ.ಮೇಟಿ ಅವರ ಪರಿಶ್ರಮ ಅಧಿಕವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. 2004ರಲ್ಲಿ ಗುಳೇದಗುಡ್ಡ ಮತಕ್ಷೇತ್ರದಲ್ಲಿ ಶಾಸಕರಾಗಿದ್ದ ಮೇಟಿ ಅವರು ರಾಜ್ಯದಲ್ಲಿ 2008ರಲ್ಲಿ ವಿಧಾನಸಭಾ ಕ್ಷೇತ್ರ ಮರುವಿಂಗಡಣೆಯಾದವು. ತದನಂತರ 2008ರಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ, ಗೆಲವು ಸಾಧಿಸದೇ ಸೋತರು. ನಂತರ 2013ರಲ್ಲಿ ಮತ್ತೆ ಬಾಗಲಕೋಟೆಯಿಂದಲೇ ಸ್ಪರ್ಧೆ ಮಾಡಿ ಗೆಲವು ಸಾಧಿಸಿದರು. ಆಗ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿತ್ತು. ಆಗ 2014ರಲ್ಲಿ ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಅಗತ್ಯವಿದೆ ಎಂಬುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು.

ಆದರೆ, ಸರ್ಕಾರದ ಮಟ್ಟದಲ್ಲಿ 2014ರಲ್ಲಿ ಸರ್ಕಾರಿ ಕಾಲೇಜಿಗೆ ಪ್ರಸ್ತಾವವಾಗಿತ್ತು. ಆದರೆ, ಅನುಷ್ಠಾನವಾಗುವಲ್ಲಿ ಹಿನ್ನಡೆ ಸಾಧಿಸಿತು. ಅಷ್ಟರಲ್ಲಿ 2018ರಲ್ಲಿ ಮತ್ತೆ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಎದುರಾಯಿತು. ಆಗ ಎಚ್‌.ವೈ.ಮೇಟಿ ಸೋಲನುಭವಿಸಿದರು. ತದನಂತರ 2023ರಲ್ಲಿ ಮತ್ತೆ ಗೆದ್ದ ಮೇಲೆ ತಮ್ಮದೆ ಕಾಂಗ್ರೆಸ್‌ ಸರ್ಕಾರದ ಮೇಲೆ ಒತ್ತಡ ತಂದು ಸರ್ಕಾರಿ ವೈದ್ಯಕೀಯ ಕಾಲೇಜು ಬರಲು ಕಾರಣಿಕರ್ತರಾಗುವಲ್ಲಿ ದಿ.ಮೇಟಿ ಅವರು ಕೂಡ ಶ್ರಮಿಸಿದರು. ಈ ವೇಳೆಗಾಗಲೇ ಕನ್ನಡಪರ ಸಂಘಟನೆಗಳು, ನಾನಾ ಸಂಘ ಸಂಸ್ಥೆಗಳು ಕೂಡ ಬಾಗಲಕೋಟೆಗೆ ಸರ್ಕಾರಿ ವೈದ್ಯ ಕಾಲೇಜು ಬೇಕೆಂದು ಹೋರಾಟ, ಪ್ರತಿಭಟನೆಗಳನ್ನು ಕೂಡ ನಡೆಸಿದವು. ಇವೆಲ್ಲದರ ಪರಿಣಾಮವಾಗಿ ಈಗ ಮುಳುಗಡೆ ನಾಡು ಎಂಬ ತ್ಯಾಗಮಯಿ ಪಟ್ಟ ಪಡೆದ ಬಾಗಲಕೋಟೆ ಜಿಲ್ಲೆಗೆ ಈಗ ಸರ್ಕಾರಿ ವೈದ್ಯಕೀಯ ಕಾಲೇಜು ರೂಪುಗೊಳ್ಳಲು ಅಣಿಯಾಗುತ್ತಿದೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ಮಾಡಲಿದ್ದಾರೆ. ದುರಾದೃಷ್ಟವಶಾತ್‌ ಇದಕ್ಕಾಗಿ ಹೋರಾಡಿದ ದಿ.ಎಚ್‌.ವೈ.ಮೇಟಿ ಅವರಿಲ್ಲ ಎನ್ನುವುದೇ ಅವರ ಬೆಂಬಲಿಗರ ವಿಷಾದ.

ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರುತ್ತಿರುವುದು ಬಹಳ ಹರ್ಷದಾಯಕ ವಿಷಯವಾಗಿದೆ. ಇದುವರೆಗೆ ಅನೇಕರು ಇದಕ್ಕಾಗಿ ಹೋರಾಟ ನಡೆಸಿದ್ದರು. ಇಂದು ಅಧರ ಸಾರ್ಥಕತೆ ಒದಗಿ ಬಂದಿದೆ.

- ರಮೇಶ ಬದ್ನೂರು, ನ್ಯಾಯವಾದಿಗಳು, ಹೋರಾಟಗಾರರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಕೆಪಿ ಸಂತ್ರಸ್ತರಿಗೆ ಪರಿಹಾರ ಸಮಸ್ಯೆ ಇಲ್ಲ: ಸಚಿವ ತಿಮ್ಮಾಪುರ
ಕನ್ಯಾಲು ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ