ಜಿಲ್ಲೆಗೆ ಸರ್ಕಾರಿ‌ ಮೆಡಿಕಲ್ ಕಾಲೇಜು‌

KannadaprabhaNewsNetwork |  
Published : Jan 10, 2026, 03:15 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ಮುಂದಿನ ದಿನಗಳಲ್ಲಿ ಜಿಲ್ಲೆಗೆ ಸರ್ಕಾರದಿಂದಲೇ ಮೆಡಿಕಲ್ ಕಾಲೇಜು ಮಾಡಲಾಗುವುದು. ಅದಕ್ಕಾಗಿ ನೀವ್ಯಾರು ಹೋರಾಟ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಂದಿನ ದಿನಗಳಲ್ಲಿ ಜಿಲ್ಲೆಗೆ ಸರ್ಕಾರದಿಂದಲೇ ಮೆಡಿಕಲ್ ಕಾಲೇಜು ಮಾಡಲಾಗುವುದು. ಅದಕ್ಕಾಗಿ ನೀವ್ಯಾರು ಹೋರಾಟ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ನಗರದಲ್ಲಿ ಶುಕ್ರವಾರ ವೀರರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆ ಅನಾವರಣ ಒಳಗೊಂಡಂತೆ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಆಗಬೇಕೆಂದು ಹಲವರು ಹೋರಾಟ ಮಾಡಿದ್ದೀರಿ. ಈ ಹಿಂದೆ ಬಿಜೆಪಿ ಸರ್ಕಾರಿ ಪಿಪಿಪಿ ಮಾದರಿ ಮಾಡಬೇಕೆಂದು ಮಾಡಿತ್ತು. ಹಾಗಾಗಿ ಸಮಸ್ಯೆಯಾಗಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ನೀವೆಲ್ಲ‌ ಹೋರಾಟ ಮಾಡುತ್ತಿದ್ದೀರಿ. ಜೊತೆಗೆ ಸಚಿವರಾದ ಎಂ.ಬಿ.ಪಾಟೀಲ ಹಾಗೂ ಶಿವಾನಂದ‌ ಪಾಟೀಲರು ಸಹ ನನಗೆ ಮನವಿ ಮಾಡಿದ್ದರು ಎಂದು ತಿಳಿಸಿದರು.ರಾಜ್ಯದಲ್ಲಿ ಈಗಾಗಲೇ 71 ಮೆಡಿಕಲ್‌ ಕಾಲೇಜುಗಳಿವೆ. ಅದರಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇವೆ. ಯಾವ ಜಿಲ್ಲೆಯಲ್ಲಿ ಇಲ್ಲವೋ ಆ ಎಲ್ಲ ಕಡೆಗಳಲ್ಲಿ ಸರ್ಕಾರದಿಂದಲೇ ಮೆಡಿಕಲ್‌ ಕಾಲೇಜು ಮಾಡುತ್ತೇವೆ. ಜೊತೆಗೆ ಟ್ರಾಮಾ‌ಸೆಂಟರ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.ಇದು ಯತ್ನಾಳರ ಕ್ಷೇತ್ರ ಎಂಬುವುದು ನನಗೆ ಗೊತ್ತು. ಆದ್ದರಿಂದ ಅವರ ಅಭಿಮಾನಿಗಳು ಇಲ್ಲಿದ್ದಾರೆ. ನೀವು ನಮ್ಮ ಅಭಿಮಾನಿಗಳು‌ ಕೂಡ, ನಿಮ್ಮೆಲ್ಲರ ಆಶೀರ್ವಾದದಿಂದಲೇ‌ 136 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಜಿಲ್ಲೆಯಲ್ಲಿನ 8 ಕ್ಷೇತ್ರಗಳಲ್ಲಿ ನಾವು 6 ಕ್ಷೇತ್ರಗಳನ್ನು ಗೆದ್ದಿದ್ದೇವೆ. ನಾನು ಅನೇಕ ಬಾರಿ ಈ ಜಿಲ್ಲೆಗೆ ಬಂದಿದ್ದೇನೆ. ನಾನು ಬಂದಾಗೆಲ್ಲ ನನಗೆ ನೀವು ಆಶೀರ್ವಾದ ಮಾಡಿದ್ದೀರಿ.‌ ಇದೀಗ ಶಾಸಕ ಯತ್ನಾಳರು ಅನೇಕ ವಿಚಾರಗಳನ್ನು ಹಾಗೂ ಒತ್ತಾಯ ಮಾಡಿದರು. ನಗರದ ಭಕ್ತ ಕನಕ‌ದಾಸ ಸರ್ಕಲ್‌ನಿಂದ ಡಾ.ಅಂಬೇಡ್ಕರ್‌ ಮಾರ್ಗವಾಗಿ ಶಿವಾಜಿ‌ ಮಹಾರಾಜರ ವೃತ್ತದವರೆಗೆ ₹160 ಕೋಟಿ ವೆಚ್ಚದ ಮೇಲ್ಸೇತುವೆ ಬೇಕೆಂದು ಮನವಿ ಮಾಡಿದ್ದಾರೆ. ಅದನ್ನು ನಾನು ಮಾಡಿಕೊಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.ನಾನು ಡಿ.ದೇವರಾಜ ಅರಸು ಅವರ ಅವಧಿಗಿಂತ ಹೆಚ್ಚು ಕಾಲ ಸಿಎಂ ಆಗಿದ್ದರಿಂದ ನನಗೆ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ‌ ಪಾಟೀಲ, ಎಲ್ಲ ಶಾಸಕರು, ಎಲ್ಲ ಜನಪ್ರತಿನಿಧಿಗಳು ಸನ್ಮಾನಿಸಿ, ಗೌರವಿಸಿದ್ದಾರೆ. ನಾನು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಈ ಗೌರವಕ್ಕೆ ನಿಮ್ಮೆಲ್ಲರ ಹಾಗೂ ಕಾಂಗ್ರೆಸ್ ಹೈಕಮಾಂಡ್ ಆಶೀರ್ವಾದ ಮತ್ತು ನಾಯಕರಾದ ಸೋನಿಯಾ ಗಾಂಧಿ, ರಾಹುಲ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದರು.ಇಂದು ಜಿಲ್ಲೆಯಲ್ಲಿ ₹800ಕ್ಕೂ ಅಧಿಕ ಕೋಟಿ ವೆಚ್ಚದ ಹಲವು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ. ಇಂದು ಸೈಕ್ಲಿಂಗ್ ವೆಲೊಡ್ರೋಮ್ ಉದ್ಘಾಟನೆ ಮಾಡಿದ್ದೇವೆ. ಇದು ದಕ್ಷಿಣ ಭಾರತದಲ್ಲೇ ಮೊದಲನೇ ಸೈಕ್ಲಿಂಗ್ ವೆಲೊಡ್ರೋಮ್ ಆಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಗರದ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿದ್ದೇವೆ. ಕಿತ್ತೂರು ರಾಣಿ ಚೆನ್ನಮ್ಮನವರು 1857ರಲ್ಲಿ ಸಿಪಾಯಿ ದಂಗೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಥಮ ಮಹಿಳಾ ಹೋರಾಟಗಾರ್ತಿ ಅವರು. ಸಂಗೊಳ್ಳಿ ರಾಯಣ್ಣನ ಸಾಹಸ ಹಾಗೂ ಹಲವರ ಕೆಚ್ಚೆದೆಯ ಹೋರಾಟದಿಂದ ಬ್ರಿಟಿಷರನ್ನು ಸೋಲಿಸಿದರು. ಆದರೆ, ನಮ್ಮವರಿಂದಲೇ 2ನೇ ಬಾರಿ ಸೋತರು. ಬ್ರಿಟಿಷರು ನಮ್ಮನ್ನು 200 ವರ್ಷಗಳವರೆಗೆ ಆಳಬೇಕಾದರೇ ಅದಕ್ಕೆ ನಮ್ಮವರೇ ಕೆಲವರು ಕಾರಣ ಎಂದರು.

ಕಾರ್ಯಕ್ರಮಕ್ಕೆ ಲೇಟಾಗಿ ಬಂದು ಬೇಗ ಹೊರಟಿದ್ದೇನೆ. ಇದು ನಮ್ಮ ತಪ್ಪು, ನಿಮ್ಮ ತಪ್ಪಲ್ಲ. ಅದಕ್ಕಾಗಿ ನಿಮ್ಮೆರಲ್ಲಿ ಕ್ಷಮೆ ಕೋರುತ್ತೇನೆ.

-ಸಿದ್ದರಾಮಯ್ಯ,
ಸಿಎಂ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ