ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಗರಣದ ಬಗ್ಗೆ ಸಾಕ್ಷಿಗಳಿದ್ದು, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿಟ್ಟ ಹಣದ ದುರುಪಯೋಗ, ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ಮುಂತಾದ ಹಗರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮುಳುಗಿದೆ. ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷ ಆನಂದ್ ಗೌಡ ಮಾತನಾಡಿ, ಪರಿಶಿಷ್ಟ ಜಾತಿಯ 13,500 ಕೋಟಿ ರು. ಪರಿಶಿಷ್ಟ ವರ್ಗದ 11,331 ರು. ಕೋಟಿ ಹಣವನ್ನು ಸಿದ್ದರಾಮಯ್ಯ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ನೂರಾರು ಕೋಟಿ ಅವ್ಯವಹಾರ ನಡೆದಿದ್ದು, ಈಗಾಗಲೇ ಒಬ್ಬ ಸಚಿವರು ರಾಜೀನಾಮೆ ನೀಡಿದ್ದಾರೆ. ಹಗರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಹೈದರಾಬಾದ್‍ನ ಬಾರ್‌ಗಳಲ್ಲಿ ಕರ್ನಾಟಕ ಎಸ್ ಟಿ ನಿಗಮದ ಹಣ ಹರಿದಾಡುತ್ತಿದೆ. 700ಕ್ಕೂ ಹೆಚ್ಚು ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಅನು ಆನಂದ್ ಮಾತನಾಡಿ, ಕರ್ನಾಟಕದ ಕಾಂಗ್ರೆಸ್‌ನ ಬ್ರಹ್ಮಾಂಡ ಭ್ರಷ್ಟಾಚಾರದ ಹಗರಣ ಬಯಲಿಗೆ ಬಂದಿದೆ. ಚುನಾವಣೆಗೂ ಮೊದಲು ದಲಿತರ ರಕ್ಷಣೆ ನಮ್ಮ ಹಕ್ಕು ಅಂತ ಹೇಳಿದ್ದರು. ಅಧಿಕಾರ ಸಿಕ್ಕ ತಕ್ಷಣ ವಾಲ್ಮೀಕಿ ನಿಗಮದ 187 ಕೋಟಿ ಹಣ ಗುಳುಂ ಮಾಡಿದ್ದಾರೆ. ಒಂದು ವರ್ಷದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದೇ ಸಾಧನೆಯಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿ ಚಂದ್ರಶೇಖರ್ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಲೂಟಿ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. 187 ಕೋಟಿ ರು. ಹಗರಣದಲ್ಲಿ ಇಡೀ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಸಹ ವಕ್ತಾರ ದೇವಸ್ಥಾನದ ಹೊಸಳ್ಳಿ ರಾಮಣ್ಣ ಮಾತನಾಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಸೂದನ ನಾರಾಯಣ ರೆಡ್ಡಿ, ಕಾರ್ಯದರ್ಶಿ ಆರ್.ಎನ್. ಅಶೋಕ್, ಯುವ ಮೋರ್ಚಾ ಅಧ್ಯಕ್ಷ ಅಭಿಷೇಕ್, ಮಂಡಲ ಅಧ್ಯಕ್ಷರಾದ ಸಂತೋಷ್, ನಾಗರಾಜ್, ಎಸ್ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಸೊಪ್ಪಹಳ್ಳಿ ರಾಮಕೃಷ್ಣ, ಶಿಡ್ಲಘಟ್ಟ ಮಂಡಲ ಅಧ್ಯಕ್ಷ ನರೇಶ್, ಜಿಲ್ಲಾ ಹಾಲು ಪ್ರಕೋಷ್ಟಕ ಅಧ್ಯಕ್ಷ ಆರ್. ನಾರಾಯಣಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲ್ಲಿಕಾ, ಸೌಮ್ಯ, ಜಿಲ್ಲಾ ಮಾಧ್ಯಮ ಸಂಚಾಲಕ ಮಧುಚಂದ್ರ, ವೇಣುಗೋಪಾಲ್, ಮತ್ತಿತರರು ಇದ್ದರು.