ಕಲಾ ಚಟುವಟಿಕೆಗಳಿಗೆ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ

KannadaprabhaNewsNetwork |  
Published : Mar 02, 2026, 01:30 AM IST
ದೊಡ್ಡಬಳ್ಳಾಪುರದಲ್ಲಿ ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ ನಿರ್ಮಿಸಲಾಗಿರುವ ಜಿಲ್ಲಾ ಕಲಾಭವನವನ್ನು ಗ್ಯಾರೆಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಆಧುನಿಕತೆಯ ಭರಾಟೆಯಲ್ಲಿ ಪಾರಂಪರಿಕ ಕಲಾ ಚಟುವಟಿಕೆಗಳು ಮರೆಯಾಗುತ್ತಿದ್ದು, ಕಲೆ ಹಾಗೂ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ದೊರೆತಾಗ ಮಾತ್ರ ನಮ್ಮ ಸಾಂಸ್ಕೃತಿಕ ಕಲೆಗಳು ಜೀವಂತಿಕೆ ಪಡೆಯಲು ಸಾಧ್ಯ ಎಂದು ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು

ದೊಡ್ಡಬಳ್ಳಾಪುರ: ಆಧುನಿಕತೆಯ ಭರಾಟೆಯಲ್ಲಿ ಪಾರಂಪರಿಕ ಕಲಾ ಚಟುವಟಿಕೆಗಳು ಮರೆಯಾಗುತ್ತಿದ್ದು, ಕಲೆ ಹಾಗೂ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ದೊರೆತಾಗ ಮಾತ್ರ ನಮ್ಮ ಸಾಂಸ್ಕೃತಿಕ ಕಲೆಗಳು ಜೀವಂತಿಕೆ ಪಡೆಯಲು ಸಾಧ್ಯ ಎಂದು ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಭಾನುವಾರ ಇಲ್ಲಿನ ಮುದ್ದನಾಯಕನಪಾಳ್ಯದ ಬಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾ ಕಲಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿರಿಯ ಹಾಗೂ ಅಶಕ್ತ ಕಲಾವಿದರಿಗೆ ಸರ್ಕಾರದಿಂದಲೂ ಅನೇಕ ಯೋಜನೆಗಳ ಮೂಲಕ ನೆರವು ದೊರೆಯುತ್ತಿದೆ. ನೈಜ ಕಲಾವಿದರನ್ನು ಗುರ್ತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನೇಕ ಯೋಜನೆಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಕಲಾವಿದರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಕಾಲ ಬದಲಾದಂತೆ ಕಲೆಯ ಮಾದರಿಗಳು ಬದಲಾಗುತ್ತಿವೆ. ಚಲನಚಿತ್ರರಂಗದ ಭರಾಟೆಯಲ್ಲಿ ರಂಗ ಕಲೆ ನೇಪಥ್ಯಕ್ಕೆ ಸರಿಯುವ ಆತಂಕ ಎದುರಾಗಿತ್ತು. ಈಗ ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ಚಿತ್ರರಂಗವೂ ಆತಂಕ ಎದುರಿಸುವಂತಾಗಿದೆ. ಇಂತಹ ಸಂದಿಗ್ಧತೆಯ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾವಿದರ ಸಂಘ ಭವನವನ್ನು ನಿರ್ಮಿಸುವ ಮೂಲಕ ಮಾದರಿ ಕೆಲಸ ಮಾಡಿದೆ. ಈ ಕಾರ್ಯದಲ್ಲಿ ಸಹಕಾರ ನೀಡಿರುವ ಎಲ್ಲ ಕಲಾಸಕ್ತರ ಕೊಡುಗೆ ಅನನ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾವಿದರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಕಲಾ ಭವನವನ್ನು ಸರ್ಕಾರದ ಯಾವುದೇ ನೆರವಿಲ್ಲದೇ ದಾನಿಗಳ, ಗಣ್ಯರ ಸಹಕಾರದಿಂದ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿಸರ್ಕಾರದ ಅನುದಾನ ಪಡೆದು ಮೊದಲ ಅಂತಸ್ತಿನ ಕಟ್ಟಡ ಹಾಗೂ ರಂಗ ವೇದಿಕೆ ನಿರ್ಮಿಸುವ ಯೋಜನೆಯಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾತನಾಡಿ, 2009ರಲ್ಲಿ ಸ್ಥಾಪನೆಯಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘ, ಇಲ್ಲಿಯವರೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ವಿವಿಧ ಕಲಾ ಚಟುವಟಿಕೆಗಳನ್ನು ಹಮ್ಮಿಕೊಂಡು, ಕಲಾವಿದರಿಗೆ ಉತ್ತೇಜನ ನೀಡಿಕೊಂಡು ಬರುತ್ತಿದೆ. ಈಗ ಸ್ವಂತ ಕಟ್ಟಡವಾಗಿರುವುದು ಕಲಾವಿದರಾದಿಯಾಗಿ ಎಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಗಿರಿ ಸ್ವಾಮೀಜಿ ಮಾತನಾಡಿ, ಕಲೆ ಹಾಗೂ ಕಲಾವಿದರು ನಾಡಿನ ಸಾಂಸ್ಕೃತಿಕ ಅನನ್ಯತೆಯ ಪ್ರತೀಕ. ಎಲ್ಲಿ ಕಲಾ ಚಟುವಟಿಕೆಗಳು ಹೆಚ್ಚಿರುತ್ತವೆಯೋ ಅಲ್ಲಿ ಮನುಷ್ಯ ಸಂವೇದನೆ ಮತ್ತು ಮಾನವೀಯ ಮೌಲ್ಯಗಳು ಹೆಚ್ಚಿರುತ್ತವೆ. ಆರೋಗ್ಯಕರ ಚಿಂತನೆ, ಶಿಸ್ತುಬದ್ದ ಜೀವನಕ್ಕೆ ಕಲಾಚಟುವಟಿಕೆಗಳು ಪೂರಕ ಎಂದರು.

ಕಲಾವಿದರಿಗೆ ಸನ್ಮಾನ:

ಇದೇ ವೇಳೆ ಕಲಾವಿದರಾದ ಕಲ್ಲೂರು ಶ್ರೀನಿವಾಸ್, ಪ್ರತಿಭಾ ನಾರಾಯಣ್, ಪದ್ಮನಾಭಯ್ಯ, ಸುಬ್ರಮಣ್ಯಾಚಾರ್, ಖಾಸ್‌ಬಾಗ್‌ ನಾಗರಾಜ್, ಕೃಷ್ಣಮೂರ್ತಿ, ಗಿರೀಶ್‌ ಸೂಲಿಬೆಲೆ, ನವೀನ್‌ ಮತ್ತಿತರರನ್ನು ಸನ್ಮಾನಿಸಲಾಯಿತು.

ಆಕರ್ಷಕ ಮೆರವಣಿಗೆ:

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಪ್ರವಾಸಿ ಮಂದಿರ ವೃತ್ತದಿಂದ ಕಲಾ ಭವನದವರೆಗೆ ವಿವಿಧ ಸಾಂಸ್ಕೃತಿಕ ತಂಡಗಳು, ಗೊರವರ ಕುಣಿತ, ವೀರಗಾಸೆ, ಗಾರುಡಿ ಗೊಂಬೆ, ಡೊಳ್ಳುಕುಣಿತ, ತಮಟೆ ಸೇರಿ ವಿವಿಧ ಜಾನಪದ ತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಬಯಾಪ ಅಧ್ಯಕ್ಷ ಶಾಂತಕುಮಾರ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಬಯಾಪ ಸದಸ್ಯ ಪ್ರಸನ್ನಕುಮಾರ್, ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ ಗುಬ್ಬಿ ವೀರೇಶ್, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ದೇವರಾಜು, ಓಬಕ್ಕ, ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್, ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಜಿಲ್ಲಾ ಕಲಾವಿದರ ಸಂಘದ ಶ್ರೀಧರ್‌ಗೌಡ, ಪುಟ್ಟಸಿದ್ದಯ್ಯ, ಆರ್.ವಿ.ಮಂಜುನಾಥ, ಎಂ.ಪಿ.ನಾಗರಾಜ್ ಸೇರಿದಂತೆ ಹಲವು ನಿರ್ದೇಶಕರು ಉಪಸ್ಥಿತರಿದ್ದರು.

ಫೋಟೋ-

1ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ ನಿರ್ಮಿಸಲಾಗಿರುವ ಜಿಲ್ಲಾ ಕಲಾಭವನವನ್ನು ಗ್ಯಾರೆಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೌನ್ ಪ್ಲಾನಿಂಗ್ ಅಧಿಕಾರಿ ಸಹಿಯೇ ನಕಲಿ..!
ವೀರಶೈವ ಧರ್ಮ ವಿಶಾಲವಾದುದು: ಶಾಸಕ ಷಡಕ್ಷರಿ