ಹೂವಿನಹಡಗಲಿ: ವಿಧಾನಸಭೆ ಚುನಾವಣೆಗೂ ಮುನ್ನ ಮತದಾರರಿಗೆ ಹತ್ತಾರು ಸುಳ್ಳುಗಳನ್ನು ಹೇಳಿ, ಸಿಎಂ ಕುರ್ಚಿಯ ಮೇಲೆ ಕುಳಿತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಎಷ್ಟು ದಿನ ಸುಳ್ಳು ಹೇಳಿ ಅಧಿಕಾರ ಮಾಡುತ್ತೀರಿ, ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಜನರ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ತಾಲೂಕಿನ ಹೊಳಗುಂದಿ ಸೇರಿದಂತೆ ಇತರೆ ಕಡೆಗಳಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ಶ್ರೀರಾಮುಲು ಪರ, ಮತಯಾಚನೆ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಗ್ಯಾರಂಟಿ ಯೋನೆಗಳಿಗೆ ಭವಿಷ್ಯವಿಲ್ಲ, ಶತಾಯಗತಾಯ ಲೋಕಸಭೆ ಚುನಾವಣೆವರೆಗೂ ತಳ್ಳುತ್ತಿದ್ದೀರಿ, ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಪಟ್ಟಿಗೆ ಅಗತ್ಯ ಅನುದಾನ ಕೊಡಿ ಎಂದು ಹಗಲು ರಾತ್ರಿ ಅವರ ಹಿಂದೆ ಅಲೆದಾಡಿದರೂ, ಅನುದಾನ ನೀಡದೇ ಸರ್ಕಾರದಲ್ಲಿ ಹಣವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವರು ಹೇಳುತ್ತಾರೆ. ಹೀಗಾದರೇ ಕ್ಷೇತ್ರ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯವಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ, 2 ಬಾರಿ ಸಿಎಂ ಬಜೆಟ್ ಮಂಡನೆ ಮಾಡಿದ್ದರೂ, ಬಜೆಟ್‌ನಲ್ಲಿ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಹೆಸರು ಕೂಡಾ ಇಲ್ಲ, ಜತೆಗೆ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ನೀಡಿಲ್ಲ. ಇಂತಹ ಕಾಂಗ್ರೆಸ್ ಪಕ್ಷ ನಮಗೆ ಬೇಕಾ? ಎಂದು ಶಾಸಕ ಕೃಷ್ಣನಾಯ್ಕ ಪ್ರಶ್ನಿಸಿದರು.
ಮುಜರಾಯಿ ಇಲಾಖೆ ಸಚಿವರಿಗೆ ಸಣ್ಣ ದೇವಸ್ಥಾನ ನಿರ್ಮಾಣಕ್ಕೆ ಹಣ ಕೇಳಲು ಹೋದರೇ, ಕಳೆದ ಬಾರಿಯ 200 ಕೋಟಿ ಬಾಕಿ ಹಣ ನೀಡಬೇಕಿದೆ, ಇದನ್ನು ತೀರಿಸಲು ಇನ್ನು 2 ವರ್ಷ ಕಾಲ ಬೇಕಿದೆ, ಹಾಗಾಗಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ನಮ್ಮಲ್ಲಿ ಹಣವಿಲ್ಲ ಎಂದು ಹೇಳುತ್ತಾರೆಂದು ದೂರಿದರು.ಅಭ್ಯರ್ಥಿ ಬಿ.ಶ್ರೀರಾಮುಲು ಮಾತನಾಡಿ, ಈ ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ದೇಶದ ಮತದಾರರು ತುದಿಗಾಲಿನಲ್ಲಿ ನಿಂತಿದ್ದಾರೆ. ಬಿಜೆಪಿ ಮತ ನೀಡದರೇ ದೇಶಕ್ಕೆ ಭವಿಷ್ಯವಿದೆ, ಹಾಗಾಗಿ ಈ ಶ್ರೀರಾಮುಲುಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಬಿಜೆಪಿ ಮುಖಂಡರಾದ ಆರುಂಡಿ ನಾಗರಾಜ, ಎಸ್.ಸಂಜೀವರೆಡ್ಡಿ, ಓದೋ ಗಂಗಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಹಣ್ಣಿ ಶಶಿಧರ, ಈಟಿ ಲಿಂಗರಾಜ, ತೋಟನಾಯ್ಕ, ಎಂ.ಪರಮೇಶ್ವರಪ್ಪ, ವಾರದ ಗೌಸ್ ಮೋಹಿದ್ದೀನ್, ಶಿರಾಜ ಬಾವಿಹಳ್ಳಿ, ತಳಕಲ್ಲು ಕರಿಬಸಪ್ಪ, ಹಂಪಸಾಗರ ಕೋಟೆಪ್ಪ, ಜೆಡಿಎಸ್‌ನ ಪುತ್ರೇಶ ಇದ್ದರು.