ಸಾಗರ ಸರ್ಕಾರ ಗ್ಯಾರಂಟಿ ಸ್ಕೀಂ ನಡುವೆ ಸಾಹಿತ್ಯ ಕೃತಿಗಳ ಖರೀದಿಯನ್ನು ಮರೆತು ಬಿಟ್ಟಿರುವುದಕ್ಕೆ ಹಿರಿಯ ಲೇಖಕ ಅ.ರಾ.ಶ್ರೀನಿವಾಸ್ ತೀವ್ರ ವಿಷಾದ ವ್ಯಕ್ತಪಡಿಸಿದರು.
- ಪಾಲಾಕ್ಷಪ್ಪ ಅವರ ಮೇಘಾನೆ ಎಂಬ ವಿಸ್ಮಯ ಲೋಕ ಕೃತಿ ಬಿಡುಗಡೆ
- - -
ಕನ್ನಡಪ್ರಭ ವಾರ್ತೆ ಸಾಗರ
ಸರ್ಕಾರ ಗ್ಯಾರಂಟಿ ಸ್ಕೀಂ ನಡುವೆ ಸಾಹಿತ್ಯ ಕೃತಿಗಳ ಖರೀದಿಯನ್ನು ಮರೆತು ಬಿಟ್ಟಿರುವುದಕ್ಕೆ ಹಿರಿಯ ಲೇಖಕ ಅ.ರಾ.ಶ್ರೀನಿವಾಸ್ ತೀವ್ರ ವಿಷಾದ ವ್ಯಕ್ತಪಡಿಸಿದರು.
ತಾಲೂಕು ಕಸಾಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್.ಎನ್. ಪಾಲಾಕ್ಷಪ್ಪ ಅವರ ಮೇಘಾನೆ ಎಂಬ ವಿಸ್ಮಯ ಲೋಕ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇತಿಹಾಸವನ್ನು ಸೃಷ್ಟಿ ಮಾಡುವ ಶಕ್ತಿ ಇರುವ ಪುಸ್ತಕಗಳ ಬಗ್ಗೆ ಇಷ್ಟು ನಿರಾಸಕ್ತಿ ಸಲ್ಲದು ಎಂದರು.
ನಾನು ಗ್ಯಾರಂಟಿ ಸ್ಕೀಮ್ ವಿರೋಧಿ ಅಲ್ಲ, ಆದರೂ ಸರ್ಕಾರಕ್ಕೆ ಪುಸ್ತಕಗಳು ಗ್ಯಾರಂಟಿ ಸ್ಕೀಂನಷ್ಟು ಮುಖ್ಯವೆಂದು ಅನಿಸದಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಸಗಟು ಖರೀದಿ ಹೆಸರಿನಲ್ಲಿ ಪುಸ್ತಕ ಖರೀದಿ ಮಾಡಿ ಅದನ್ನು ರಾಜ್ಯಾದ್ಯಂತ ಗ್ರಂಥಾಲಯಗಳಿಗೆ ಕೊಡುವ ಪದ್ಧತಿ ಇತ್ತು. ಕಳೆದ ಕೆಲವು ವರ್ಷಗಳಿಂದ ಪುಸ್ತಕಗಳ ಖರೀದಿ ಮಾಡುತ್ತಿಲ್ಲ. ಆಯ್ಕೆ ಸಮಿತಿ ಇದ್ದರೂ ಇಲ್ಲದಂತೆ ಆಗಿದೆ. ಇದರಿಂದ ಲೇಖಕರು ಕೃತಿಗಳನ್ನು ಮುದ್ರಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣ ಸರ್ಕಾರ ಪುಸ್ತಕ ಖರೀದಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೃತಿ ಕುರಿತು ಮುಖ್ಯ ಶಿಕ್ಷಕ ದತ್ತಾತ್ರೇಯ ಭಟ್ ಮಾತನಾಡಿ, ಇದು ೧೭ಕ್ಕೂ ಹೆಚ್ಚು ಲೇಖನಗಳನ್ನು ಒಳಗೊಂಡ ಕೃತಿಯಾಗಿದೆ. ಶಿಕ್ಷಕ ವೃತ್ತಿ ಜೊತೆಗೆ ಲೇಖಕ ಪಾಲಾಕ್ಷಪ್ಪ ಈತನಕ ನಾಲ್ಕಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಮೇಘಾನೆ ಎಂಬುದು ಮಲೆನಾಡಿನ ಅತ್ಯದ್ಭುತ ಹಳ್ಳಿಯಾಗಿದ್ದು ಇಲ್ಲಿನ ಜನರ ಬದುಕು ಕಟ್ಟಿಕೊಡುವ ಲೇಖನ ಉತ್ತಮವಾಗಿದೆ. ಇದರ ಜೊತೆಗೆ ಶಿಕ್ಷಣ ಸಂದರ್ಭದಲ್ಲಿ ನಡೆಯುವ ಬೇರೆಬೇರೆ ಸಂದರ್ಭಗಳನ್ನು ಪಾಲಾಕ್ಷಪ್ಪ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಸಮನ್ವಯ ಅಧಿಕಾರಿ ಡಾ.ಅನ್ನಪೂರ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ನಾಯಕ್, ಲೇಖಕ ಎಸ್.ಎನ್. ಪಾಲಾಕ್ಷಪ್ಪ ಉಪಸ್ಥಿತರಿದ್ದರು. ಬಿ.ಡಿ.ರವಿಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
- - -
-೨೩ಕೆ.ಎಸ್.ಎ.ಜಿ.೧:
ಮೇಘಾನೆ ಎಂಬ ವಿಸ್ಮಯ ಲೋಕ ಕೃತಿಯನ್ನು ಅ.ರಾ.ಶ್ರೀನಿವಾಸ್ ಬಿಡುಗಡೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.