ಕರಾವಳಿ, ಮಲೆನಾಡು ಜಿಲ್ಲೆಗೆ ವಿಶೇಷ ಕಾರ್ಯಪಡೆ ಜಾರಿಗೆ ಸರ್ಕಾರ ಆದೇಶ

KannadaprabhaNewsNetwork |  
Published : Jun 03, 2025, 01:37 AM ISTUpdated : Jun 03, 2025, 11:14 AM IST
32 | Kannada Prabha

ಸಾರಾಂಶ

ಕರಾವಳಿ ಮಲೆನಾಡನ್ನು ಒಳಗೊಂಡಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಮಾಜಘಾತುಕ ಕೋಮುಶಕ್ತಿಗಳನ್ನು ಮಟ್ಟಹಾಕುವ ದೃಷ್ಟಿಯಿಂದ ರಾಜ್ಯ ಸರ್ಕಾರ ಎಸ್‌ಟಿಎಫ್‌- ವಿಶೇಷ ಕಾರ್ಯಪಡೆ (ಸ್ಪೆಷಲ್‌ ಟಾಸ್ಕ್‌ ಫೋರ್ಸ್‌) ಜಾರಿಗೊಳಿಸಿ ಆದೇಶ ಹೊರಡಿಸಿದೆ.

 ಮಂಗಳೂರು : ಕರಾವಳಿ ಮಲೆನಾಡನ್ನು ಒಳಗೊಂಡಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಮಾಜಘಾತುಕ ಕೋಮುಶಕ್ತಿಗಳನ್ನು ಮಟ್ಟಹಾಕುವ ದೃಷ್ಟಿಯಿಂದ ರಾಜ್ಯ ಸರ್ಕಾರ ಎಸ್‌ಟಿಎಫ್‌- ವಿಶೇಷ ಕಾರ್ಯಪಡೆ (ಸ್ಪೆಷಲ್‌ ಟಾಸ್ಕ್‌ ಫೋರ್ಸ್‌) ಜಾರಿಗೊಳಿಸಿ ಆದೇಶ ಹೊರಡಿಸಿದೆ. 

ಕರಾವಳಿ ಜಿಲ್ಲೆಗಳಲ್ಲಿ ಪದೇ ಪದೇ ಕೋಮು ಸಂಘರ್ಷಗಳು ನಡೆಯುತ್ತಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಈ ರೀತಿಯ ಘಟನೆ ಆಡಳಿತಕ್ಕೆ ಕಪ್ಪು ಚುಕ್ಕೆಯಾಗುತ್ತಿದ್ದು, ಇದನ್ನು ನಿಯಂತ್ರಣ ತರುವ ನಿಟ್ಟಿನಲ್ಲಿ ರಾಜ್ಯದ ಗೃಹ ಸಚಿವ ಡಾ. ಪರಮೇಶ್ವರ್‌ ಎಸ್‌ಟಿಎಫ್‌ ರಚನೆ ಬಗ್ಗೆ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

ಮೂರು ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪನೆಯಾಗುವ ಎಸ್‌ಟಿಎಫ್‌ ಹಾಗೂ ಸಂಬಂಧಪಟ್ಟ ಪೊಲೀಸ್‌ ವರಿಷ್ಠಾಧಿಕಾರಿ, ಪೊಲೀಸ್‌ ಆಯುಕ್ತರು ಈ ಪಡೆಗಳನ್ನು ನಿಯೋಜಿಸಲು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು.ಗುಪ್ತಚರ ಇಲಾಖೆಯು ಅಸ್ತಿತ್ವದಲ್ಲಿರುವ ಕೆಲವು ನಕ್ಸಲ್‌ಗಳು ಛತ್ತೀಸಗಡ ಮತ್ತು ಜಾರ್ಖಂಡ್‌ ರಾಜ್ಯಗಳಿಂದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿ ಪ್ರದೇಶಗಳಿಗೆ ಸ್ಥಳಾಂತಗೊಳ್ಳುತ್ತಿವೆ ಎಂಬ ಮಾಹಿತಿಯನ್ನು ಒದಗಿಸಿದೆ. ಆ ಕಾರಣದಿಂದ ನಕ್ಸಲ್‌ ನಿಗ್ರಹ ಪಡೆ (ಆ್ಯಂಟಿ ನಕ್ಸಲ್‌ ಫೋರ್ಸ್‌)ಯಲ್ಲಿರುವ ಅಧಿಕಾರಿ, ಸಿಬ್ಬಂದಿ ಬಲದಿಂದ ಕೆಲವು ಅಧಿಕಾರಿ, ಸಿಬ್ಬಂದಿ ಹುದ್ದೆ ಬೇರ್ಪಡಿಸಿ ರಾಜ್ಯದಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸುವಂತೆ ಕೋರಿದೆ.

ಎಎನ್‌ಎಫ್‌ (ನಕ್ಸಲ್‌ ನಿಗ್ರಹ ಪಡೆ)ನಲ್ಲಿ ಒಟ್ಟು 667 ಹುದ್ದೆಗಳಿದ್ದು, ಇವರಲ್ಲಿ 248 ಹುದ್ದೆಗಳನ್ನು ಎಸ್‌ಟಿಎಫ್‌ಗೆ ನಿಯೋಜಿಸಿ ಉಳಿದ 376 ಹುದ್ದೆಗಳನ್ನು ಎಎನ್‌ಎಫ್‌ನಲ್ಲಿಯೇ ಮುಂದಿನ 3 ವರ್ಷಗಳವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ.

ಎಸ್‌ಟಿಎಫ್‌ನಲ್ಲಿ ಡಿಐಜಿಪಿ 1, ಡಿವೈಎಸ್ಪಿ (ಸಿವಿಲ್‌) 1, ಸಹಾಯಕ ಕಮಾಂಡೆಂಟ್‌ 1, ಪಿಐ/ಆರ್‌ಪಿಐ 4, ಪಿಎಸ್‌ಐ/ಆರ್‌ಎಸ್‌ಐ/ಎಸ್‌ಐ 16, ಸಿಎಚ್‌ಸಿ 60, ಸಿಪಿಸಿ/ಎಪಿಸಿ 150, ಅನುಯಾಯಿ 15 ಮಂದಿ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಲಾಗಿದೆ.

ಹೊಸತಾಗಿ ಸ್ಥಾಪನೆಯಾಗುವ ವಿಶೇಷ ಕಾರ್ಯಪಡೆಯು ಮೂರು ಕಂಪನಿಗಳನ್ನು ಹೊಂದಲಿದೆ. ಈ ಕಂಪನಿಗಳನ್ನು ಉಡುಪಿ, ಶಿವಮೊಗ್ಗ ಮತ್ತು ದ.ಕ. ಜಿಲ್ಲೆಗಳಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

ಎಸ್‌ಟಿಎಫ್‌ ಕಾರ್ಯನಿರ್ವಹಣೆ ಹೇಗೆ?

 ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿತ ಘಟನೆಗಳಿಗಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು, ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು, ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶ ಒಳಗೊಂಡ ಗುಪ್ತಚರ ಘಟಕವನ್ನು ಹೊಂದುವುದು.

 ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಗಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆ ರಚಿಸುವುದು

 ಪ್ರಾಬಲ್ಯದ ಮೂಲಕ ವಿಶ್ವಾಸವೃದ್ಧಿ ಕ್ರಮಗಳನ್ನು ಕೈಗೊಳ್ಳುವುದು. 

ಮೂಲಭೂತೀಕರಣ ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳುವುದು.

ವಲಯ ಐಜಿಪಿರವರು ಕೋಮುಗಲಭೆ ಸಂದರ್ಭ ವಿಶೇಷ ಕಾರ್ಯಪಡೆ ಅಧಿಕಾರಿ, ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳುವುದು 

‘ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಲು ಕೋಮು ಪ್ರಚೋದನಾಕಾರಿ ಹೇಳಿಕೆ, ಭಾಷಣ ಮಾಡುವವರ ವಿರುದ್ಧ ಕ್ರಮಕ್ಕೆ ಪೂರಕವಾಗಿ ಕರಾವಳಿ ಜಿಲ್ಲೆಗೆ ವಿಶೇಷ ಕಾರ್ಯಪಡೆ ಜಾರಿಗೆ ಆದೇಶವಾಗಿದೆ. ದ.ಕ., ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಒಳಗೊಂಡು ರಚನೆಯಾಗುವ ಈ ಕಾರ್ಯಪಡೆಯ ಕೇಂದ್ರ ಸ್ಥಾನವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು.’

-ಐವನ್‌ ಡಿಸೋಜಾ, ವಿಧಾನ ಪರಿಷತ್‌ ಸದಸ್ಯರು.

PREV
Read more Articles on

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ