ಸರ್ಕಾರದಿಂದ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು: ಮುಂಡರಗಿ ನಾಗರಾಜ್

KannadaprabhaNewsNetwork |  
Published : Jul 15, 2025, 11:46 PM IST
ಬಳ್ಳಾರಿಯಲ್ಲಿ ಮಂಗಳವಾರ ಗೃಹ ಆರೋಗ್ಯ ಯೋಜನೆಯ ಕಾರ್ಯಗಾರ, ಜಿಲ್ಲೆಯಾದ್ಯಂತ ಗೃಹ ಆರೋಗ್ಯ ಯೋಜನೆಯ ವಿಸ್ತರಣೆ ಹಾಗೂ ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಮೇಯರ್ ಮುಲ್ಲಂಗಿ ನಂದೀಶ್ ಚಾಲನೆ ನೀಡಿದರು.  | Kannada Prabha

ಸಾರಾಂಶ

ಸರ್ಕಾರವು ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಮನೆ-ಮನೆಗೆ ಆರೋಗ್ಯ ತಪಾಸಣೆಗಾಗಿ ಗೃಹ ಆರೋಗ್ಯ ಯೋಜನೆ ಜಾರಿಯಾಗಿದೆ.

ಗೃಹ ಆರೋಗ್ಯ ಯೋಜನೆಯ ಕಾರ್ಯಾಗಾರ, ಜಿಲ್ಲಾದ್ಯಂತ ಯೋಜನೆಯ ವಿಸ್ತರಣೆ, ಆಶಾ ಕೈಪಿಡಿ ಬಿಡುಗಡೆ ಕನ್ನಡಪ್ರಭವಾರ್ತೆ ಬಳ್ಳಾರಿ

ಸರ್ಕಾರವು ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಮನೆ-ಮನೆಗೆ ಆರೋಗ್ಯ ತಪಾಸಣೆಗಾಗಿ ಗೃಹ ಆರೋಗ್ಯ ಯೋಜನೆ ಜಾರಿಯಾಗಿದೆ ಎಂದು ಡಾ. ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್)ಅಧ್ಯಕ್ಷ ಮುಂಡರಗಿ ನಾಗರಾಜ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಘಟಕ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕೋಶ ಬಳ್ಳಾರಿ ಇವುಗಳ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ನಡೆದ ಗೃಹ ಆರೋಗ್ಯ ಯೋಜನೆಯ ಕಾರ್ಯಾಗಾರ ಮತ್ತು ಜಿಲ್ಲೆಯಾದ್ಯಂತ ಗೃಹ ಆರೋಗ್ಯ ಯೋಜನೆಯ ವಿಸ್ತರಣೆ ಹಾಗೂ ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೃಹ ಆರೋಗ್ಯ ಯೋಜನೆಯನ್ನು ಮೊದಲು ಕೋಲಾರ ಜಿಲ್ಲೆಯಲ್ಲಿ ಮಾತ್ರ ಪ್ರಾರಂಭಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದವು. 14 ರೋಗಗಳನ್ನು ಅಸಾಂಕ್ರಾಮಿಕ ರೋಗಗಳೆಂದು ಗುರುತಿಸಲಾಗಿದ್ದು, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈಗಿನ ಕಾಲದಲ್ಲಿ ಯುವಜನತೆಯು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳು ಸೇವಿಸುವ ಆಹಾರ ಮತ್ತು ಆರೋಗ್ಯದ ಮೇಲೆ ನಿಗಾವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಆರೋಗ್ಯವು ಬಹಳ ಮಹತ್ವದ್ದಾಗಿದ್ದು, ಎಷ್ಟೇ ಶ್ರೀಮಂತಿಕೆ ಇದ್ದರೂ ಆರೋಗ್ಯ ಇಲ್ಲವಾದಲ್ಲಿ ಅವನು ಬಡವ, ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಆರೋಗ್ಯದಿಂದ ಮಾತ್ರ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವಿದೆ. ಸರ್ಕಾರವು ಗೃಹ ಆರೋಗ್ಯ ಯೋಜನೆ ಜಾರಿ ಮಾಡಿರುವುದು ಬಡವರ್ಗದ ಜನರಿಗೆ ಬಹಳ ಉಪಯುಕ್ತವಾಗಿದೆ. ರಾಜ್ಯ ಸರ್ಕಾರದ ಗೃಹ ಆರೋಗ್ಯ ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುವಂತೆ ಮಾಡಲು ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಮಟ್ಟಗಳಲ್ಲಿ ಹಂತ-ಹಂತವಾಗಿ ಜಾರಿಗೊಳಿಸಿ ಬೆಂಬಲ ನೀಡಲಾಗುವುದು ಎಂದು ಹೇಳಿದರು.

ಅಸಾಂಕ್ರಾಮಿಕ ರೋಗಗಳು ಜನರ ಜೀವಕ್ಕೆ ಅಪಾಯ ತಂದೊಡ್ಡಿವೆ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ ಬಾಬು ಮಾತನಾಡಿ, ಗೃಹ ಆರೋಗ್ಯ ಯೋಜನೆ ಜಿಲ್ಲೆಯಾದ್ಯಂತ ವಿಸ್ತರಣೆಯಾಗುತ್ತಿದ್ದು, ಈ ಯೋಜನೆಯಡಿ 14 ಅಸಾಂಕ್ರಾಮಿಕ ರೋಗಗಳ ತಪಾಸಣೆ ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ಮನೆಗಳಲ್ಲಿ 30 ವರ್ಷಮೇಲ್ಪಟ್ಟವರನ್ನ ತಪಾಸಣೆಗೆ ಒಳಪಡಿಸಿ, ಸೂಕ್ತ ಔಷಧಗಳನ್ನು ಅವರ ಬಳಿಗೆ ತಲುಪಿಸುವ ಕಾರ್ಯ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

14 ಅಸಾಂಕ್ರಾಮಿಕ ರೋಗಗಳ ಉಚಿತ ತಪಾಸಣೆ ಮತ್ತು ಔಷಧ ವಿತರಣೆ:

ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಡಯಾಬಿಟಿಕ್, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಅಸ್ವಸ್ಥತೆಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಅಲ್ಕೋಹಾಲ್ ರಹಿತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ರಕ್ತಹೀನತೆಯ (19-29 ವರ್ಷವಯಸ್ಸಿನವರಿಗೆ) ಆರೋಗ್ಯ ತಪಾಸಣೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಉಚಿತವಾಗಿ ನಡೆಸಲಾಗುವುದು ಎಂದರು.

ಇದೇ ವೇಳೆ ಗಣ್ಯರು ಆಶಾ ಕೈಪಿಡಿ ಪುಸ್ತಕ ಅನಾವರಣಗೊಳಿಸಿದರು.

ಉಪ ಮೇಯರ್ ಡಿ.ಸುಕುಂ, ಜಿಲ್ಲಾ ಪ್ರಭಾರಿ ಕುಟುಂಬ ಕಲ್ಯಾಣಾಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ಗೃಹ ಆರೋಗ್ಯ ಯೋಜನೆ ಅನುಷ್ಠಾನಧಿಕಾರಿ ಡಾ. ಮರಿಯಂಬಿ ವಿ.ಕೆ., ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ವೀರೇಂದ್ರ ಕುಮಾರ್ ಸೇರಿ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು