ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ: ಶಾಸಕ ಶಿವರಾಮ ಹೆಬ್ಬಾರ್

KannadaprabhaNewsNetwork |  
Published : Sep 09, 2026, 02:30 AM IST
ಮಾದರಿ ಶಾಲೆಯಲ್ಲಿ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಒಂದು ಕಾಲದಲ್ಲಿ ಪ್ರಭಾವಿ ಶಾಲೆಯಾಗಿದ್ದ ಈ ಶಾಲೆ ಕಾಲಕ್ರಮೇಣ ವಿದ್ಯಾರ್ಥಿಗಳ ಕೊರತೆಯಿತ್ತು. ಕೆಪಿಎಸ್ ಶಾಲೆಯಾಗಿ ಪರಿವರ್ತನೆ ಹೊಂದಿ, ಆಂಗ್ಲ ಮಾಧ್ಯಮ ಆರಂಭವಾದ ಮೇಲೆ ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡುವಷ್ಟು ಬೆಳೆದಿದೆ.

ಯಲ್ಲಾಪುರ: ಸರ್ಕಾರಿ ಶಾಲೆಗಳ ಬಗ್ಗೆ ಕೆಲವರಿಗೆ ಉಪೇಕ್ಷೆ ಇದೆ. ಇಂದು ಸರ್ಕಾರಿ ಶಾಲೆಗಳು ಆಧುನಿಕ ಎಲ್ಲ ಸೌಲಭ್ಯಗಳನ್ನು ಹೊಂದಿ, ಖಾಸಗಿ ಶಾಲೆಗಳಿಗೆ ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಇಲ್ಲಿ ಎಲ್‌ಕೆಜಿ, ಯುಕೆಜಿಯು ನಡೆಯುತ್ತಿದೆ. ಮುಂದೆಯೂ ಈ ಶಾಲೆ ಎಲ್ಲ ದೃಷ್ಟಿಯಿಂದಲೂ ಮಾದರಿಯಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದೇವಿ ಜಾತ್ರೆ ಸಂದರ್ಭದಲ್ಲಿ ಶಾಲಾ ಮೈದಾನ ಬಾಡಿಗೆಯಿಂದ ಬಂದ ಹಣದಲ್ಲಿ ನಿರ್ಮಿಸಿದ ನಾಲ್ಕು ಕೊಠಡಿಗಳ ಉದ್ಘಾಟನೆ ನೆರವೇರಿಸಿ, ಮಾತನಾಡಿದರು.

ಒಂದು ಕಾಲದಲ್ಲಿ ಪ್ರಭಾವಿ ಶಾಲೆಯಾಗಿದ್ದ ಈ ಶಾಲೆ ಕಾಲಕ್ರಮೇಣ ವಿದ್ಯಾರ್ಥಿಗಳ ಕೊರತೆಯಿತ್ತು. ಕೆಪಿಎಸ್ ಶಾಲೆಯಾಗಿ ಪರಿವರ್ತನೆ ಹೊಂದಿ, ಆಂಗ್ಲ ಮಾಧ್ಯಮ ಆರಂಭವಾದ ಮೇಲೆ ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡುವಷ್ಟು ಬೆಳೆದಿದೆ. ಖಾಸಗಿ ಶಾಲೆಗಳ ದುಬಾರಿ ವೆಚ್ಚ ಭರಿಸಲಾಗದ ಬಡವರೂ ಆಂಗ್ಲ ಮಾಧ್ಯಮದಲ್ಲಿ ಕಲಿಸಲು ಈ ಶಾಲೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದ ಅವರು, ಮುಖ್ಯಮಂತ್ರಿಗಳು ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶೇ. ೭ ಮೀಸಲಾತಿ ನೀಡುವ ಘೋಷಣೆ ಮಾಡಿ, ಸರ್ಕಾರಿ ಶಾಲೆಗೆ ಉತ್ತೇಜನ ನೀಡಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಅನೇಕ ಸವಾಲು ಎದುರಿಸಿದ ಪರಿಣಾಮ ಈ ನಾಲ್ಕು ಕೊಠಡಿ ನಿರ್ಮಾಣವಾಗಿದೆ. ಎರಡು ಕೊಠಡಿ ಮಂಜೂರಿಯಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನೂ ಹೆಚ್ಚಿನ ಕೊಠಡಿ ಲಭ್ಯವಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕರ ಗೋಂದಳಿ ಮಾತನಾಡಿ, ಶಾಸಕರ ಮಾರ್ಗದರ್ಶನ ಹಾಗೂ ಶಿಕ್ಷಕರ, ಸಮಿತಿ ಸದಸ್ಯರ ಸಹಕಾರದಿಂದ ಈ ಕಾರ್ಯ ಆಗಿದೆ. ಮುಂದೆಯೂ ತಮ್ಮ ಸಹಕಾರ ಅಗತ್ಯ ಎಂದರು.

ಪ್ರಮುಖರಾದ ಪ್ರಕಾಶ ತಾರೀಕೊಪ್ಪ, ವಿಜಯ ಮಿರಾಶಿ, ಕವಿತಾ ಮಹಾಲೆ, ಅನಸೂಯಾ ಹಾರವಾಡೇಕರ, ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಯಮುನಾ ಚೌಕಮನೆ ಸ್ವಾಗತಿಸಿದರು. ಶಿಕ್ಷಕ ಮಹೇಶ ಮಡಿವಾಳ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೂಲಿ ಹಣ ಜಮೆಗೆ ಆಗ್ರಹಿಸಿ ಕೂಲಿ ಕಾರ್ಮಿಕರ ಪ್ರತಿಭಟನೆ
ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪತ್ರ ಚಳವಳಿ